ಕೊರೋನಾ ಚಿಕಿತ್ಸೆ: ಸರ್ಕಾರಿ ಆಸ್ಪತ್ರೆ ವೈದ್ಯರಿಗೆ 'ಇ-ರೌಂಡ್ಸ್' ಮೂಲಕ ವಿಶೇಷ ತಜ್ಞರ ನೆರವು

ನಿಯೋಜಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರ ಖಾಸಗಿ ಆಸ್ಪತ್ರೆಗಳ ವಿಶೇಷ ತಜ್ಞರನ್ನು ನೇಮಿಸಿದೆ. ರಾಜ್ಯದಲ್ಲಿ ಪ್ರತಿದಿನ ಸರಾಸರಿ ಶೇಕಡಾ 8.5ರಷ್ಟು ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿಯೋಜಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರ ಖಾಸಗಿ ಆಸ್ಪತ್ರೆಗಳ ವಿಶೇಷ ತಜ್ಞರನ್ನು ನೇಮಿಸಿದೆ. ರಾಜ್ಯದಲ್ಲಿ ಪ್ರತಿದಿನ ಸರಾಸರಿ ಶೇಕಡಾ 8.5ರಷ್ಟು ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಇಂದಿನಿಂದ ಬೆಂಗಳೂರಿನ ನಾರಾಯಣ ಹೃದಯಾಲಯದ ವಿಶೇಷ ತಜ್ಞರು ವಿಕ್ಟೋರಿಯಾ, ಬೌರಿಂಗ್, ಲೇಡಿ ಕರ್ಜನ್, ರಾಜೀವ್ ಗಾಂಧಿ ಹೃದ್ರೋಗ ಆಸ್ಪತ್ರೆಗಳಿಗೆ ಇ-ರೌಂಡ್ಸ್ ಮೂಲಕ ರೋಗಿಗಳ ಚಿಕಿತ್ಸೆಗೆ ನೆರವಾಗಲಿದ್ದಾರೆ.

ರಾಜ್ಯದ ಬೇರೆ ಕಡೆಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಈಗಾಗಲೇ ಮಣಿಪಾಲ ಮತ್ತು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ವೈದ್ಯರುಗಳು ನೆರವಾಗುತ್ತಿದ್ದಾರೆ.

ಹಿರಿಯ ನಾಗರಿಕರು, 10 ವರ್ಷಕ್ಕಿಂತ ಕೆಳಗಿನವರು, ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಕೊರೋನಾ ಪಾಸಿಟಿವ್ ಗೆ ಒಳಗಾಗಿದ್ದರೆ ಅಂಥವರಿಗೆ ವಿಶೇಷ ತಜ್ಞರ ಚಿಕಿತ್ಸಾ ನೆರವು ಬೇಕಾಗುತ್ತದೆ. ಕೋವಿಡ್-19 ತೀವ್ರ ನಿಗಾ ನೆರವು ಸಮಿತಿಯ ಮುಖ್ಯಸ್ಥರಾಗಿರುವ ಡಾ ತ್ರಿಲೋಕ್ ಚಂದ್ರ ಮತ್ತು ಅವರ ತಂಡ ಅಧಿಕ ಅಪಾಯವಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವವರ ಮೇಲೆ ನಿಗಾ ವಹಿಸುತ್ತಿದೆ. ಇಂತಹ ಅಧಿಕ ಅಪಾಯವಿರುವ 5 ಸಾವಿರದ 512 ಕೇಸುಗಳಲ್ಲಿ 1,639 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಮತ್ತು 3 ಸಾವಿರದ 694 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಏನಿದು ಇ-ರೌಂಡ್ಸ್ ಪರಿಕಲ್ಪನೆ: ನಿರ್ದಿಷ್ಟ ರೋಗಿಗೆ ಸಂಬಂಧಪಟ್ಟಂತೆ ಹೃದ್ರೋಗ ತಜ್ಞರು, ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವ ತಜ್ಞರು, ನೆಫ್ರಾಲಜಿಸ್ಟ್‌ಗಳು ಅಥವಾ ಶ್ವಾಸಕೋಶ ತಜ್ಞರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ವೈದ್ಯರೊಂದಿಗೆ ರೋಗಿಯ ಬಗ್ಗೆ ಚರ್ಚಿಸುತ್ತಾರೆ, ಅಗತ್ಯವಿದ್ದರೆ, ಚಿಕಿತ್ಸೆ ಅಥವಾ ಔಷಧಿಗಳಲ್ಲಿ ಮಾರ್ಪಾಡುಗಳನ್ನು ಸೂಚಿಸುತ್ತಾರೆ.ನಾರಾಯಣ ಹೃದಯಾಲಯ ತಜ್ಞರು ಪ್ರತಿದಿನ ಎರಡು ಬಾರಿ ಇ-ರೌಂಡ್ಸ್ ಮಾಡುತ್ತಾರೆ, ರೋಗಿ ಬೇಗನೆ ಗುಣಮುಖವಾಗಲು ಸರ್ಕಾರಿ ವೈದ್ಯರುಗಳೊಂದಿಗೆ ಅವರು ತೀವ್ರ ನಿಗಾವಹಿಸಿ ಚಿಕಿತ್ಸಾ ವಿಧಾನಗಳನ್ನು ಕೂಡ ಪರಿಶೀಲಿಸುತ್ತಿರುತ್ತಾರೆ ಎಂದು ಡಾ ತ್ರಿಲೋಕ್ ಚಂದ್ರ ತಿಳಿಸಿದರು.

ರೋಗಿಯ ಆರೋಗ್ಯ ಪರಿಸ್ಥಿತಿ ಬಗ್ಗೆ ತಜ್ಞರು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕೆಂದರೆ ಆಸ್ಪತ್ರೆಗಳು ವಿಡಿಯೊಗಳನ್ನು ಕಳುಹಿಸುತ್ತಾರೆ. ಕೊರೋನಾ ಕಾಣಿಸಿಕೊಂಡು ತಡವಾಗಿ ಆಸ್ಪತ್ರೆಗಳಿಗೆ ದಾಖಲಾಗುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇ-ರೌಂಡ್ಸ್ ಮೂಲಕ ವಿಶೇಷ ತಜ್ಞರ ನೆರವು ಪಡೆದು ಕೊರೋನಾ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು ಎಂದು ಸಮಿತಿಯ ಸದಸ್ಯರ ಅಭಿಮತ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com