ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಮೃತರ ಅಂತ್ಯಸಂಸ್ಕಾರ ವೇಳೆ ಅಮಾನವೀಯ ವರ್ತನೆ: ಸಿಬ್ಬಂದಿ ಅಮಾನತು

ಬಳ್ಳಾರಿಯಲ್ಲಿ ಕೊರೋನಾ ವೈರಸ್ ಸೋಂಕಿತರ ಶವಗಳನ್ನು ಅಮಾನವೀಯ ರೀತಿಯಲ್ಲಿ ಗುಂಡಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಮೊದಲಾದವರು ಪ್ರತಿಕ್ರಿಯಿಸಿದ್ದಾರೆ.
ಬಳ್ಳಾರಿಯಲ್ಲಿ ಕೋವಿಡ್-19 ಮೃತರನ್ನು ಗುಂಡಿಗೆ ಎಸೆಯುತ್ತಿರುವ ದೃಶ್ಯ
ಬಳ್ಳಾರಿಯಲ್ಲಿ ಕೋವಿಡ್-19 ಮೃತರನ್ನು ಗುಂಡಿಗೆ ಎಸೆಯುತ್ತಿರುವ ದೃಶ್ಯ

ಬೆಂಗಳೂರು: ಬಳ್ಳಾರಿಯಲ್ಲಿ ಕೊರೋನಾ ವೈರಸ್ ಸೋಂಕಿತರ ಶವಗಳನ್ನು ಅಮಾನವೀಯ ರೀತಿಯಲ್ಲಿ ಗುಂಡಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಮೊದಲಾದವರು ಪ್ರತಿಕ್ರಿಯಿಸಿದ್ದಾರೆ.

ಕಳೆದ ಸೋಮವಾರ ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ನಿಂದ ಎಂಟು ಜನರು‌ ಮೃತಪಟ್ಟಿದ್ದರು. ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಿದ್ದರಿಂದ ಒಂದೇ ಜಾಗದಲ್ಲಿ ಶವ ಸಂಸ್ಕಾರ ನಡೆಸಲು ಆರೋಗ್ಯ ಇಲಾಖೆ ಸೂಚಿಸಿತ್ತು.

ಬಳ್ಳಾರಿಯ ಹೊರವಲಯದಲ್ಲಿ ಶವ ಸಂಸ್ಕಾರ ಮಾಡಲು ಜಾಗ ನಿಗದಿ ಮಾಡಲಾಗಿತ್ತಾದರೂ ಆರೋಗ್ಯ ಇಲಾಖೆ ಸಿಬ್ಬಂದಿ ತಂದು ಒಂದೇ ಗುಂಡಿಗೆ ಹೆಣಗಳನ್ನು ಎಸೆದಿದ್ದರು. ಇದನ್ನು ವಿಡಿಯೊ ಮಾಡಿದವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಅದು ವೈರಲ್ ಆಗಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಯಿತು. ಕೊರೋನಾ ಸೋಂಕಿನಿಂದ ಮೃತಪಟ್ಟವರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ, ಅಸಡ್ಡೆ ತೋರಿಸುತ್ತಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ನಿನ್ನೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಯಡಿಯೂರಪ್ಪ, ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಸಿಬ್ಬಂದಿ ನಡವಳಿಕೆ ಅತ್ಯಂತ ಅಮಾನವೀಯ ಹಾಗೂ ತೀವ್ರ ನೋವಿನ ಸಂಗತಿ.ಕೋವಿಡ್ ಸೋಂಕಿತರೊಂದಿಗೆ ಮಾನವೀಯತೆಯಿಂದ ವರ್ತಿಸಿ, ಸೋಂಕಿತರ ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸಿ ಮಾನವೀಯತೆ ಮೆರೆಯಿರಿ ಎಂದು ಈ ಸಂದರ್ಭದಲ್ಲಿ ಕೇಳಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೇಳೆ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿರುವುದು ತೀವ್ರ  ಖಂಡನಿಯ. ಈ ಪ್ರಕರಣದ ಮಾಹಿತಿ ಪಡೆದುಕೊಳ್ಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಅಂತ್ಯಸಂಸ್ಕಾರ ನಡೆಸಿದ ಎಲ್ಲ ಸಿಬ್ಬಂದಿಯನ್ನು ಅಮಾನತು  ಮಾಡಲಾಗಿದೆ. ಜಿಲ್ಲಾಡಳಿತ ಈ ಘಟನೆ ಖಂಡಿಸಿ ಕ್ಷಮೆ ಯಾಚಿಸಿದೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com