ನನಗೆ ಒಂದು ಉಚಿತ ಬಸ್ ಪಾಸ್ ಕೊಡಿ ಸಾಕು: ಆಧುನಿಕ ಭಗೀರಥ, 'ಕೆರೆಗಳ ಮನುಷ್ಯ' ಕಾಮೇಗೌಡರ ಬಯಕೆ!

ಸಕ್ಕರೆ ನಾಡು ಮಂಡ್ಯದ ಈ ಇಳಿವಯಸ್ಸಿನ ಅಜ್ಜ ಈಗ ಸುದ್ದಿಯ ಕೇಂದ್ರಬಿಂದು. ಅದಕ್ಕೆ ಕಾರಣ ಮೊನ್ನೆ ಭಾನುವಾರ ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರ ಹೆಸರು ಮತ್ತು ಸಾಧನೆಗಳನ್ನು ಪ್ರಸ್ತಾಪಿಸಿದ್ದರು.
ತಮ್ಮ ಕುರಿಗಳೊಂದಿಗೆ ಕಾಮೇಗೌಡರು
ತಮ್ಮ ಕುರಿಗಳೊಂದಿಗೆ ಕಾಮೇಗೌಡರು

ದಾಸನದೊಡ್ಡಿ ಗ್ರಾಮ, ಮಳವಳ್ಳಿ(ಮಂಡ್ಯ): ಸಕ್ಕರೆ ನಾಡು ಮಂಡ್ಯದ ಈ ಇಳಿವಯಸ್ಸಿನ ಅಜ್ಜ ಈಗ ಸುದ್ದಿಯ ಕೇಂದ್ರಬಿಂದು. ಅದಕ್ಕೆ ಕಾರಣ ಮೊನ್ನೆ ಭಾನುವಾರ ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರ ಹೆಸರು ಮತ್ತು ಸಾಧನೆಗಳನ್ನು ಪ್ರಸ್ತಾಪಿಸಿದ್ದು. ಇದಾದ ಬಳಿಕ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಡಿಯೊ ಕರೆ ಮಾಡಿ ಮಾತನಾಡಿಸಿದ್ದು.

ಅವರೇ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಕುರಿಗಾಹಿ, ಕೆರೆಗಳ ಮನುಷ್ಯ ಕಾಮೇಗೌಡರು. ತನ್ನ ಸುತ್ತಲ ಹಳ್ಳಿಯಲ್ಲಿ ಕೆರೆಗಳನ್ನು ನಿರ್ಮಿಸಿ ಜನ-ಜಾನುವಾರುಗಳಿಗೆ ಉಪಕಾರ ಮಾಡಿದವರು.

ಕಾಮೇಗೌಡರಿಗೆ ಈಗ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಈ ಬಡ ಕಾಮೇಗೌಡರಿಗೆ ಇವ್ಯಾವುದರ ಆಕಾಂಕ್ಷೆಯೇ ಇಲ್ಲ, ಎಷ್ಟು ಸರಳ, ಸೀದಾ-ಸಾದಾ ಮನುಷ್ಯನೆಂದರೆ ಅವರಿಗೆ ಬೇಕಾಗಿದ್ದು ಒಂದು ಉಚಿತ ಬಸ್ ಪಾಸ್. ಬಸ್ ಪಾಸ್ ಸಿಕ್ಕಿದರೆ ಅಕ್ಕಪಕ್ಕ ಜಿಲ್ಲೆಗಳ ದೇವಸ್ಥಾನಕ್ಕೆ ಹೋಗಿಬರಬಹುದು ಎಂಬ ಮುಗ್ಧ ಆಲೋಚನೆ ಅವರದ್ದು.

ಮೋದಿ ಕಾಮೇಗೌಡರ ಹೆಸರು ಪ್ರಸ್ತಾಪ ಮಾಡಿದ್ದೇಕೆ?:84 ವರ್ಷ ವಯಸ್ಸಿನ ಅಜ್ಜ ಕಾಮೇಗೌಡರು ಮಾಡಿದ ಬಹುದೊಡ್ಡ ಪವಿತ್ರ ಕೆಲಸ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತಮ್ಮ ಊರಾದ ದಾಸನದೊಡ್ಡಿ ಸುತ್ತಮುತ್ತ ಕಳೆದ 40 ವರ್ಷಗಳಲ್ಲಿ 16 ಕೆರೆಗಳನ್ನು ನಿರ್ಮಿಸಿದ್ದು. ಅದು ನಿಸ್ವಾರ್ಥ ಸೇವೆ. ಬೆಟ್ಟದ ತಪ್ಪಲಿನಲ್ಲಿರುವ ಕುಂಡಿನಿಬೆಟ್ಟ ಗ್ರಾಮದಲ್ಲಿ 16 ಸಣ್ಣ ಕೆರೆಗಳನ್ನು ನಿರ್ಮಿಸಿ ಕುರಿಗಳು ಮತ್ತು ಇತರ ಜಾನುವಾರುಗಳ ಮೇವಿಗೆ ಸಹಾಯ ಮಾಡಿದ್ದಾರೆ.ಇವರ ಅಪರೂಪದ ಸಾಧನೆಯನ್ನು ಪ್ರಧಾನಿ ಗುರುತಿಸಿದ್ದಾರೆ.

ಅಂದು ಯುವ ವಯಸ್ಸಿನಲ್ಲಿ ಎಷ್ಟು ಅವರಿಗೆ ಕೆಲಸದ ಮೇಲೆ ಉತ್ಸಾಹವಿತ್ತೋ ಈಗಲೂ ಅಷ್ಟೇ ಚೈತನ್ಯವಿದೆ. ಪ್ರತಿದಿನ ಬೆಳಗ್ಗೆ ಆಹಾರದ ಪೊಟ್ಟಣವನ್ನು ಹಿಡಿದುಕೊಂಡು ಮನೆಯಿಂದ ಹೊರಟರೆ ಮತ್ತೆ ವಾಪಸ್ಸಾಗುವುದು ಸಂಜೆಯೇ. ಮನೆಯಿಂದ 30 ನಿಮಿಷ ನಡೆದುಕೊಂಡು ಹೋಗುತ್ತಾರೆ. ರಾಷ್ಟ್ರಮಟ್ಟದಲ್ಲಿ ಕಾಮೇಗೌಡರು ಸುದ್ದಿಯಾಗಿದ್ದೇ ತಡ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸರ್ಕಾರೇತರ ಸಂಘಟನೆಗಳು, ಮಾಧ್ಯಮ ಪ್ರತಿನಿಧಿಗಳು ಅವರನ್ನು ಭೇಟಿ ಮಾಡುತ್ತಿರುತ್ತಾರೆ.

ಬೆಂಗಳೂರು ಕೆರೆಗಳನ್ನು ನಾಶ ಮಾಡಿದ್ದೇಕೆ?: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆಗೆ ಮಾತನಾಡಿದ ಅವರು, ನನಗೆ ಕೆರೆಗಳ ಸಂರಕ್ಷಣೆ ಬಗ್ಗೆ ಮಾತ್ರ ಯೋಚನೆ. ಪ್ರಾಣಿಯೊಂದಕ್ಕೆ ನೀರು ಬೇಕೆಂದರೆ ಅದು ಪ್ರತಿಭಟನೆ ಮಾಡಿ ಯಾರ ಮನೆ ಮುಂದೆ ಹೋಗಿ ನಿಲ್ಲಲು ಸಾಧ್ಯವಿಲ್ಲ, ದೇವರು ನಿಮಗೆ ಎರಡು ಕೈಗಳನ್ನು ಕೊಟ್ಟಿದ್ದಾರೆ ಎಂದರೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎನ್ನುತ್ತಾರೆ.

ಕಾಮೇಗೌಡರಿಗೆ 2018ರಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭ ದಿನ ನನಗೆ ಒಂದು ಉಚಿತ ಬಸ್ ಪಾಸ್ ಕೊಡಿಸಿ ಎಂದು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಕೇಳಿದೆ, ಅದಕ್ಕೆ ಆಗಬಹುದು ಎಂದಿದ್ದರು, ಆದರೆ ಇದುವರೆಗೆ ಸಿಕ್ಕಿಲ್ಲ ಎನ್ನುತ್ತಾರೆ.

ನಿಮಗೆ ಯಾಕೆ ಬಸ್ ಪಾಸ್ ಬೇಕು ತಾತಾ ಎಂದು ಕೇಳಿದರೆ, ಮಲೆ ಮಹದೇಶ್ವರ ಬೆಟ್ಟದ ಮಾದಪ್ಪ, ಚನ್ನಪಟ್ಟಣದ ಹನುಮ ದೇವರನ್ನು ನೋಡಬೇಕು ಅನ್ನಿಸಿದಾಗ ಬಸ್ ಪಾಸ್ ಇದ್ದರೆ ಹೋಗಿ ನೋಡಿ ಬರಬಹುದು, ದೇವಸ್ಥಾನಕ್ಕೆ ಹೋಗೋದೆಂದರೆ ನನಗೆ ಖುಷಿ ಎನ್ನುತ್ತಾರೆ.

ಕೋವಿಡ್-19 ಹಲವು ಹಿರಿಯ ನಾಗರಿಕರಿಗೆ ಭಯ ಹುಟ್ಟಿಸಿದರೆ ಕಾಮೇಗೌಡರಿಗೆ ಯಾವ ಭಯವೂ ಇಲ್ಲ. ಕೆರೆ ಕಟ್ಟಿದ ಮಾತ್ರಕ್ಕೆ ನಮ್ಮ ಕೆಲಸ ಮುಗಿಯುವುದಿಲ್ಲ, ಅವುಗಳನ್ನು ನೋಡಿಕೊಳ್ಳಬೇಕು. ಲಾಕ್ ಡೌನ್ ನಮಗಲ್ಲ. ಈ ಬೆಟ್ಟದ ತಪ್ಪಲಿಗೆ ಯಾರು ಬರುತ್ತಾರೆ. ಬೆಟ್ಟದ ತಪ್ಪಲಿನಲ್ಲಿರುವ ಕೆರೆಗಳಿಗೆ ಪ್ರತಿದಿನ ಹೋಗುತ್ತೇನೆ, ನನಗೆ ಸುಸ್ತಾದಾಗ ಅಲ್ಲೇ ಮರದ ಕೆಳಗೆ ನೆರಳಿನಲ್ಲಿ ಮಲಗುತ್ತೇನೆ. ಸಾಯಂಕಾಲದವರೆಗೂ ಇದ್ದು ಮನೆಗೆ ಹೋಗುತ್ತೇನೆ ಎನ್ನುತ್ತಾರೆ.

ನಂತರ ಬೆಂಗಳೂರಿನ ಕಡೆ ಕಾಮೇಗೌಡರ ಮಾತು ಹೊರಳಿತು. ಮಳೆ ಜೋರಾಗಿ ಬಂದಾಗ ಬೆಂಗಳೂರಿನಲ್ಲಿ ಪ್ರವಾಹ ಉಂಟಾಗುತ್ತದೆ. ಕೆರೆಗಳನ್ನು ಜನರು ಮತ್ತು ಸರ್ಕಾರ ಮುಚ್ಚುವುದೇಕೆ. ಕಟ್ಟಡ ಕಟ್ಟಲು ಮರಗಳನ್ನು ಕಡಿಯುವುದೇಕೆ?ಪ್ರಕೃತಿ ನಾಶ ಮಾಡಿದರೆ ಅದಕ್ಕೆ ಬೆಲೆ ತೆರಲೇಬೇಕು. ಇದು ಬೆಂಗಳೂರಿನಲ್ಲಿ ಮಾತ್ರವಲ್ಲ, ಇತ್ತೀಚೆಗೆ ಹಳ್ಳಿಗಳಲ್ಲಿ ಕೂಡ ಹೀಗಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಪದ್ಮಶ್ರೀ ಪ್ರಶಸ್ತಿ ಬಗ್ಗೆ ಕೇಳಿದಾಗ, ಸಾಲುಮರದ ತಿಮ್ಮಕ್ಕ ಅವರಿಗೆ ಪ್ರಶಸ್ತಿ ಸಿಗುವವರೆಗೆ ನನಗೆ ಆ ಪ್ರಶಸ್ತಿ ಬಗ್ಗೆ ಗೊತ್ತಿರಲಿಲ್ಲ. ದೆಹಲಿಯಲ್ಲಿ ಕೊಡುವ ಬಹಳ ದೊಡ್ಡ ಪ್ರಶಸ್ತಿ ಅದು ಎಂದು ಗೊತ್ತಷ್ಟೆ ಎಂದರು. ಪದ್ಮಶ್ರೀ ಸಿಕ್ಕಿದರೆ ಏನು ಮಾಡುತ್ತೀರಿ ಎಂದು ಕೇಳಿದ್ದಕ್ಕೆ, ಮತ್ತೆರಡು ಕೆರೆಗಳನ್ನು ನಿರ್ಮಿಸುತ್ತೇನೆ, ಈಗ 16 ಕೆರೆ ನಿರ್ಮಿಸಿದ್ದೇನೆ, ಇನ್ನೂ 4 ಕೆರೆಗಳನ್ನು ನಿರ್ಮಿಸಬೇಕು ಎಂಬ ಆಸೆ ನನ್ನದು ಎಂದು ಥಟ್ಟನೆ ಕಾಮೇಗೌಡರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com