ಕೊವಿಡ್-19: ಬಳ್ಳಾರಿಯಲ್ಲಿ ಇಬ್ಬರು, ಗದಗ, ದಕ್ಷಿಣ ಕನ್ನಡ, ಹಾಸನದಲ್ಲಿ ತಲಾ ಒಂದು ಸಾವು
ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಗುರುವಾರ ಗಣಿ ನಾಡು ಬಳ್ಳಾರಿಯಲ್ಲಿ ಇಬ್ಬರು ಹಾಗೂ ಗದಗ, ದಕ್ಷಿಣ ಕನ್ನಡ ಮತ್ತು ಹಾಸನದಲ್ಲಿ ತಲಾ ಒಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ.
Published: 02nd July 2020 03:52 PM | Last Updated: 02nd July 2020 05:25 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಗುರುವಾರ ಗಣಿ ನಾಡು ಬಳ್ಳಾರಿಯಲ್ಲಿ ಇಬ್ಬರು ಹಾಗೂ ಗದಗ, ದಕ್ಷಿಣ ಕನ್ನಡ ಮತ್ತು ಹಾಸನದಲ್ಲಿ ತಲಾ ಒಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ.
ಕೋವಿಡ್19 ಸೋಂಕಿಗೆ ಒಳಗಾದ ಬಳ್ಳಾರಿ ಜಿಲ್ಲೆಯ ಇಬ್ಬರೂ ಮೃತಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಮೃತರ ಸಂಖ್ಯೆ 31ಕ್ಕೆ ಏರಿಕೆ ಆಗಿದೆ.
ನಗರದ ದೇವಿನಗರದ ವೃದ್ಧೆ (75) ಹೃದಯಾಘಾತ, ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು, ಬುಧವಾರ ಮೃತಪಟ್ಟಿದ್ದಾರೆ. ಅಲ್ಲದೇ, ಸಂಡೂರು ತಾಲ್ಲೂಕಿನ ಯಶವಂತನಗರದ ಪುರುಷ (43) ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ವೃದ್ಧ ಸಾವು; ಮೃತಪಟ್ಟವರ ಸಂಖ್ಯೆ 4ಕ್ಕೇರಿಕೆ
ಜಿಲ್ಲೆಯ ಮುಂಡರಗಿ ಪಟ್ಟಣದ ನೇಕಾರ ಓಣಿಯ 75 ವರ್ಷದ ವೃದ್ಧ ಪಿ-9730 ಅವರು ಗುರುವಾರ ಬೆಳಗ್ಗೆ 6.10 ಗಂಟೆಗೆ ಮೃತರಾಗಿದ್ದಾರೆ.
ಇವರು ನ್ಯುಮೋನಿಯಾ ಹಾಗೂ ಬುದ್ಧಿಮಾಂದ್ಯತೆ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಸಂವೇದನಾ ಸ್ಥಿತಿಯಲ್ಲಿ ಜುಲೈ 23 ರಂದು ಆಗಮಿಸಿದ ಇವರ ಗಂಟಲು ದ್ರವ ಪರೀಕ್ಷಿಸಿದಾಗ ಕೋವಿಡ್-19 ಸೋಂಕು ದೃಡಪಟ್ಟಿತ್ತು.
ನಂತರ ನಿಗದಿತ ಕೋವಿಡ್-19 ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಅಧಿಕ ರಕ್ತದೊತ್ತಡ, ಮಧುಮೇಹ ಸ್ಥಿತಿಯಲ್ಲಿದ್ದ ಇವರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಸರ್ಕಾರದ ಕೊವಿಡ್-19 ಮಾರ್ಗಸೂಚಿಗಳನ್ವಯ ಮೃತರ ಅಂತ್ಯಕ್ರಿಯೆ ಜರುಗಲಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಕೊವಿಡ್-19 ಸೋಂಕಿನಿಂದ ಮೃತರಾದವರ ಸಂಖ್ಯೆ ನಾಲ್ಕಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ್ ಬಾಬು ಎಂ. ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಮತ್ತೊಬ್ಬರು ಕೊರೋನಾದಿಂದ ಸಾವು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾದಿಂದ ಮತ್ತೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ 45 ವರ್ಷ ವಯಸ್ಸಿನ ವ್ಯಕ್ತಿ ಕೊರೋನಾ ಸೋಂಕಿನಿಂದ ಬುಧವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಕಿಡ್ನಿ ಸಮಸ್ಯೆಯ ಹಿನ್ನೆಲೆಯಲ್ಲಿ ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಗಂಟಲ ದ್ರವದ ಮಾದರಿಯ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರವಿವಾರ ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಸನ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮತ್ತೊಂದು ಸಾವು
ಹಾಸನ ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್ ಸಾವು ಸಂಭವಿಸಿದೆ. ಇದರೊಂದಿಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಇಂದು ಚನ್ನರಾಯಪಟ್ಟಣದ 65 ವರ್ಷದ ಪುರುಷರೊಬ್ಬರು ಸೋಂಕಿತ ಮೃತಪಟ್ಟಿದ್ದಾರೆ.
ಕಳೆದ ರಾತ್ರಿ 12:45ಕ್ಕೆ ಖಾಸಗಿ ಆಸ್ಪತ್ರೆಯಿಂದ ರೆಫರ್ ಆಗಿ ಕೊವಿಡ್ ಆಸ್ಪತ್ರೆಗೆ ಬಂದಿದ್ದರು. ಬೆಳಿಗ್ಗೆ 7:45ಕ್ಕೆ ಸಾವು ಸಂಭವಿಸಿದೆ. ಮೃತರು ಮಧುಮೇಹ ರೋಗದಿಂದ ಬಳಲುತ್ತಿದ್ದರು. ಸೋಂಕಿತರ ಸ್ವಾಬ್ ತೆಗೆಯಲಾಗಿತ್ತು. ಕೊರೋನಾ ಪಾಸಿಟಿವ್ ಎಂದು ವರದಿ ಬಂದಿತ್ತು.
ಇಂದು ಹೊಸದಾಗಿ 6 ಕೋವಿಡ್ 19 ಪಾಸಿಟೀವ್ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ತಿಳಿಸಿದ್ದಾರೆ.