ಎಸ್ಎಸ್ ಎಲ್ ಸಿ 5ನೇ ಪರೀಕ್ಷೆ ಪೂರ್ಣ: 32 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್!

ರಾಜ್ಯಾದ್ಯಂತ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳು 5ನೇ ದಿನದ ಸಮಾಜ ವಿಜ್ಞಾನ ಪರೀಕ್ಷೆ ಬರೆದು ಮುಗಿಸಿದ್ದಾರೆ. ಇನ್ನು ಒಂದು ಪರೀಕ್ಷೆ ಬಾಕಿ ಉಳಿದಿದ್ದು  ಅದು ಮುಗಿಯಲು ಇನ್ನು ಮೂರು ದಿನ ಕಾಯಬೇಕು.
ಕನಕಪುರ ತಾಲ್ಲೂಕಿನ ಮರಳವಾಡಿಯ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವರ ಭೇಟಿ
ಕನಕಪುರ ತಾಲ್ಲೂಕಿನ ಮರಳವಾಡಿಯ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವರ ಭೇಟಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳು 5ನೇ ದಿನದ ಸಮಾಜ ವಿಜ್ಞಾನ ಪರೀಕ್ಷೆ ಬರೆದು ಮುಗಿಸಿದ್ದಾರೆ. ಇನ್ನು ಒಂದು ಪರೀಕ್ಷೆ ಬಾಕಿ ಉಳಿದಿದ್ದು ಅದು ಮುಗಿಯಲು ಇನ್ನು ಮೂರು ದಿನ ಕಾಯಬೇಕು.

ನಿನ್ನೆ ಪರೀಕ್ಷೆ ಬರೆದ ನಂತರ ಇದುವರೆಗೆ 32 ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ಬಂದಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಕಳೆದ ಕೆಲ ದಿನಗಳಿಂದ ಕೋವಿಡ್-19 ಪಾಸಿಟಿವ್ ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆದು ಹೋಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ. ಒಟ್ಟಾರೆ ಕಂಟೈನ್ ಮೆಂಟ್ ಪ್ರದೇಶಗಳ 3 ಸಾವಿರದ 363 ವಿದ್ಯಾರ್ಥಿಗಳು ಮತ್ತು 613 ಕೋವಿಡ್-19 ಲಕ್ಷಣವಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ.

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ 31 ಪರೀಕ್ಷಾ ಕೇಂದ್ರಗಳನ್ನು ಕಂಟೈನ್ ಮೆಂಟ್ ಪ್ರದೇಶಗಳಿಂದ ತೆರವುಗೊಳಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ರಾಜ್ಯಾದ್ಯಂತ ಸಮಾಜ ವಿಜ್ಞಾನ ಪರೀಕ್ಷೆಯನ್ನು ಸುರಕ್ಷಿತ ವಾತಾವರಣದಲ್ಲಿ ನಡೆಸಲಾಗಿದೆ. ರಾಮನಗರ, ಕನಕಪುರ, ಚನ್ನಪಟ್ಟಣಗಳ 12 ಕೇಂದ್ರಗಳಿಗೆ ತಾವು ನಿನ್ನೆ ಭೇಟಿ ನೀಡಿದ್ದು ಅಲ್ಲಿನ ವ್ಯವಸ್ಥೆ ಕಂಡು ಸಮಾಧಾನವಾಗಿದೆ ಎಂದು ಹೇಳಿದ್ದಾರೆ.

ಅಡುಗೆ ಮಾಡುವಾಗ ಆಕಸ್ಮಿಕವಾಗಿ ಕಾಲು ಸುಟ್ಟು ಹೋದರೂ ಪರೀಕ್ಷೆಗೆ ಹಾಜರಾದ ಶೃಂಗೇರಿಯ ವಿದ್ಯಾರ್ಥಿನಿ ಕಲ್ಪನಾ ಎಂಬವಳನ್ನು ಸಚಿವ ಸುರೇಶ್ ಕುಮಾರ್ ಶ್ಲಾಘಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಆಕೆಗೆ ಪ್ರಯಾಣ ವ್ಯವಸ್ಥೆಯನ್ನು ಪರೀಕ್ಷಾ ಕೇಂದ್ರಕ್ಕೆ ಮಾಡಿ ಕೊಟ್ಟಿದ್ದರು.

ಉತ್ತರ ಕನ್ನಡದ ಸಿರ್ಸಿಯಲ್ಲಿ ತಾರಾ ಎಂಬವಳ ತಂದೆಗೆ ಅಪಘಾತವಾಗಿದ್ದರಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ಸಾಧ್ಯವಾಗದೆ ಪರಿತಪಿಸುತ್ತಿದ್ದಳು. ಪರಿಸ್ಥಿತಿ ಅರಿತ ಶಿಕ್ಷಕರು ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ಪರೀಕ್ಷೆ ಬರೆಸಿದ್ದಾರೆ. ಆಕೆಯ ತಂದೆ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

ಕೊಡಗು ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ವಿದ್ಯಾರ್ಥಿ ಪರೀಕ್ಷಾ ಕೇಂದ್ರಕ್ಕೆ ಬರುವಾಗ ಅಪಘಾತವಾಗಿತ್ತು. ಆತನಿಗೆ ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ನೀಡುವುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com