ಮನೆ ಮೂಲೆ ಹಿಡಿದ ಉತ್ಪಾದಿತ ಸೀರೆಗಳು: ಮಾರುಕಟ್ಟೆ ಇಲ್ಲದೆ ನೇಕಾರರ ಬದುಕು ಮತ್ತಷ್ಟು ದುರ್ಬರ!

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನೇಕಾರರ ಮನೆಯಲ್ಲಿ ಉತ್ಪಾದನೆಗೊಳ್ಳುವ ಒಂದೇ ಒಂದು ಸೀರೆ ಮನೆಯಲ್ಲಿ ಸ್ಟಾಕ್ ಇರುತ್ತಿರಲಿಲ್ಲ. ಮಹಾಮಾರಿ ಕೊರೋನಾದಿಂದಾಗಿ ಇಂದು ಉತ್ಪಾದಿತ ಲಕ್ಷಾಂತರ ಸೀರೆಗಳು ಕೊಳ್ಳುವವರು ಇಲ್ಲದೆ ಮನೆ ಮೂಲೆ ಹಿಡಿದು ಕುಳಿತಿವೆ.
ಸೀರೆ ಅಂಗಡಿ
ಸೀರೆ ಅಂಗಡಿ

ಬಾಗಲಕೋಟೆ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನೇಕಾರರ ಮನೆಯಲ್ಲಿ ಉತ್ಪಾದನೆಗೊಳ್ಳುವ ಒಂದೇ ಒಂದು ಸೀರೆ ಮನೆಯಲ್ಲಿ ಸ್ಟಾಕ್ ಇರುತ್ತಿರಲಿಲ್ಲ. ಮಹಾಮಾರಿ ಕೊರೋನಾದಿಂದಾಗಿ ಇಂದು ಉತ್ಪಾದಿತ ಲಕ್ಷಾಂತರ ಸೀರೆಗಳು ಕೊಳ್ಳುವವರು ಇಲ್ಲದೆ ಮನೆ ಮೂಲೆ ಹಿಡಿದು ಕುಳಿತಿವೆ.

ರಕ್ಕಸರೂಪಿ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ವಿಧಿಸಲಾಗಿದ್ದ ಲಾಕ್‌ಡೌನ್ ವೇಳೆ ಕಚ್ಚಾ ಮಾಲಿನ ಕೊರತೆ ಪರಿಣಾಮ ಸೀರೆಗಳ ಉತ್ಪಾದನೆ ಸ್ಥಗಿತಗೊಂಡಿತ್ತು. ಇದರಿಂದ ನೇಕಾರಿಕೆ ಉದ್ಯೋಗವನ್ನೇ ನಂಬಿದ್ದ ನೇಕಾರರು ಮಗ್ಗಗಳು ಬಂದ್ ಆಗಿ ಬೀದಿಗೆ ಬಿದ್ದಿದ್ದರು. ತುತ್ತಿನ ಊಟಕ್ಕೂ ಪರದಾಡಿದ್ದರು. 

ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕ ಹಾಗೂ ಹೀಗೂ ಕಚ್ಚಾ ಮಾಲನ್ನು ಹೊಂದಿಸಿಕೊಂಡು ಮಗ್ಗಗಳನ್ನು ಆರಂಭಸಿದ್ದಾರೆ. ಮಗ್ಗಗಳು ಆರಂಭಗೊAಡರೂ ಕೂಲಿ ನೇಕಾರರ ಪಾಲಿಗೆ ಸರಿಯಾಗಿ ಕೂಲಿ ಸಿಗುವುದು ದುಸ್ತರವಾಗಿದೆ. ಬಂಡವಾಳ ಹಾಕಿ ಮಗ್ಗಗಳನ್ನು ಆರಂಭಿಸಿದ ಮಗ್ಗಗಳ ಮಾಲೀಕರ ಕೈಯಲ್ಲಿ ಹಣವೇ ಓಡಾಡುತ್ತಿಲ್ಲ. ಮಾರುಕಟ್ಟೆಯಲ್ಲಿ ಸೀರೆಗಳನ್ನು ಖರೀದಿಸುವವರೆ ಇಲ್ಲವಾಗಿ ಉತ್ಪಾದಿಸಿ ಸೀರೆಗಳನ್ನು ಮನೆಯಲ್ಲಿ ಸ್ಟಾಕ್ ಇಟ್ಟಿದ್ದಾರೆ. ಇಂದು ಮಾರುಕಟ್ಟೆ ಸಿಗಬಹುದು, ನಾಳೆ ಸಿಗಬಹುದು ಎನ್ನುವ ಆಸೆಯಲ್ಲಿ ಕಾಲ ಕಳೆಯುತ್ತಿದ್ದಾರಾದರೂ ಮಹಾಮಾರ ಕೊರೋನಾ ದಿನದಿಂದ ದಿನಕ್ಕೆ ತನ್ನ ಕದಂಬ ಬಾಹುಗಳನ್ನು ಚಾಚುತ್ತಿರುವ ಪರಿಣಾಮ ಉತ್ತಮ ಮಾರುಕಟ್ಟೆ ಲಭ್ಯತೆಯ ಆಸೆಯನ್ನು ಸೀರೆ ಉತ್ಪಾದಕರು ಕಳೆದುಕೊಂಡು ನಿರುತ್ಸಾಹಿಗಳಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಹಾಕಿದ ಬಂಡವಾಳವೂ ಹಿಂತಿರುಗದೇ ಹೋದಲ್ಲಿ ಮುಂದಿನ ಸ್ಥಿತಿ ನೆನಸಿಕೊಂಡು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ. 

ಉತ್ಪಾದಿತ ಸೀರೆಗಳಿಗೆ ಮಾರುಕಟ್ಟೆಯೇ ಇಲ್ಲವೆಂದದಾದಲ್ಲಿ ಸೀರೆ ನೇಯ್ದ ನೇಕಾರರಿಗೆ ಎಲ್ಲಿಂದ ಕೂಲಿ ಕೊಡುವುದು ಎಂದು ಪ್ರಶ್ನಿಸುತ್ತಿದ್ದಾರೆ. ಸಾಕಷ್ಟು ಜನ ಮಗ್ಗಗಳ ಮಾಲೀಕರು ಸದ್ಯಕ್ಕೆ ಸೀರೆ ಉತ್ಪಾದನೆ ಬೇಡ. ಮುಂದೆ ನೋಡೋಣ ಎಂದು ಹೇಳುತ್ತಿರುವುದರಿಂದ ಕೂಲಿ ನೇಕಾರರು ಬದುಕನ್ನು ಸಾಗಿಸುವುದು ಹೇಗೆ ಎನ್ನುವ ಚಿಂತೆಗೀಡಾಗಿದ್ದಾರೆ.

ಸರ್ಕಾರ ನೇಕಾರರಿಗೆ ೨೦೦೦ ರೂ. ಪರಿಹಾರ ಘೋಷಣೆ ಮಾಡಿದ್ದಾರಾದರೂ ಶೇ. ೧೦ ರಷ್ಟು ನೇಕಾರರಿಗೂ ಅದರ ಪ್ರಯೋಜನವಾಗಿಲ್ಲ. ಇತ್ತ ಮಾರುಕಟ್ಟೆಯಲ್ಲಿ ನೇಕಾರರ ಉತ್ಪಾದನೆಗಳಿಗೆ ಬೇಡಿಕೆಯೂ ಇಲ್ಲ. ಅತ್ತ ಸರ್ಕಾರದ ಪರಿಹಾರವೂ ಕೈ ಸಿಕ್ಕದ ಪರಿಣಾಮ ಕೂಲಿ ನೇಕಾರರ ಬದುಕು ತತ್ತರಿಸಿ ಹೋಗಿದೆ. 

ಮಹಾರಾಷ್ಟ್ರ, ಗುಜರಾತ್, ಕೋಲ್ಕತ್ತಾ, ತೇಲಂಗಾಣ, ಆಂಧ್ರಪ್ರದೇಶಗಳಲ್ಲಿ ಕೊರೋನಾ ಅಟ್ಟಹಾಸ ತಗ್ಗಿ, ಸಹಜ ಪರಿಸ್ಥಿತಿ ನಿರ್ಮಾಣವಾಗುವವರೆಗೂ ನೇಕಾರರ ಉತ್ಪನ್ನಗಳಿಗೆ ಕಾಸಿನ ಕಿಮ್ಮತ್ತು ಸಿಕ್ಕುವುದಿಲ್ಲ. ಕೊರೋನಾ ಅಟ್ಟಹಾಸ ತಗ್ಗಿ ಸಹಜ ಸ್ಥಿತಿ ಯಾವಾಗ ನಿರ್ಮಾಣವಾಗಲಿದೆ ಎನ್ನುವುದು ವಿಶ್ವಕ್ಕೆ ಯಕ್ಷಪ್ರಶ್ನೆಯಾಗಿದ್ದು, ನೇಕಾರರ ರಕ್ಷಣೆಗೆ ಸರ್ಕಾರದ ನೆರವೊಂದೆ ಇರುವ ಏಕೈಕ ಮಾರ್ಗ. 

ನೇಕಾರರ ಉತ್ಪನ್ನಗಳನ್ನು ನೇರವಾಗಿ ಖರೀದಿಸುವ ಕಾರ್ಯಕ್ಕೆ ಮುಂದಾದಾಗ ನೇಕಾರರು ಮತ್ತು ಕೂಲಿ ನೇಕಾರರು ಬದುಕಲು ಸಾಧ್ಯವಾಗಲಿದೆ. ಇಲ್ಲದೆ ಹೋದಲ್ಲಿ ಬಾಗಲಕೋಟೆ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿರುವ ನೇಕಾರರು ಬೀದಿ ಪಾಲಾಗಲಿದ್ದಾರೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com