ಕೊರೋನಾ: ತಡವಾಗುತ್ತಿರುವ ವೈದ್ಯಕೀಯ ವರದಿ, ಏನು ಮಾಡಬೇಕೆಂದು ತಿಳಿಯದೆ ಜನತೆ ಕಂಗಾಲು!
ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗಾಗಲೇ ರಾಜ್ಯದಲ್ಲಿ ಹಲವು ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗದೆ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
Published: 02nd July 2020 01:48 PM | Last Updated: 02nd July 2020 02:00 PM | A+A A-

ಸಭೆಯಲ್ಲಿ ಪಾಲ್ಗೊಂಡಿರುವ ಸಿಎಂ ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗಾಗಲೇ ರಾಜ್ಯದಲ್ಲಿ ಹಲವು ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗದೆ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ವೈದ್ಯಕೀಯ ವರದಿಗಳು ತಡವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಕುರಿತು ಸ್ಪಷ್ಟ ಮಾಹಿತಿಗಳು ಸಿಗದೆ ಜನರು ಕಂಗಾಲಾಗುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ನಗರದ ಬಾಬುಸಪಾಳ್ಯದಲ್ಲಿ ವ್ಯಕ್ತಿಯೊಬ್ಬರಲ್ಲಿ ವೈರಸ್ ದೃಢಪಟ್ಟಿದ್ದು, ಈ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 33 ವರ್ಷದ ಗರ್ಭಿಣಿಯೊಬ್ಬಳು ಪರೀಕ್ಷೆಗೊಳಗಾಗಿ 5 ದಿನಗಳಾದರೂ ಇನ್ನೂ ವೈದ್ಯಕೀಯ ವರದಿ ಬಂದಿಲ್ಲ. ಮಹಿಳೆಯಲ್ಲಿ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ ಆದರೆ, ಮನೆಯಲ್ಲಿಯೇ ಸ್ವಯಂ ಐಸೋಲೇಠನ್ ನಲ್ಲಿದ್ದಾರೆ. ಈಗಾಗಲೇ ಮಹಿಳೆಗೆ ಗಂಡು ಮಗುವಿದ್ದು, ವಯಸ್ಸಾದ ಪೋಷಕರೂ ಕೂಡ ಮನೆಯಲ್ಲಿ ವಾಸವಿದ್ದಾರೆ.
ನನಗೆ ವೈರಸ್ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಸಾಧ್ಯವಾಗದೆ, ಬಹಳಷ್ಟು ಒತ್ತಡಕ್ಕೊಳಗಾಗಿದ್ದೇನೆ. ಮನೆಯಲ್ಲಿ ನಾವು ಒಬ್ಬರೇ ಇದ್ದೇವೆ. ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ನೆರೆಮನೆಯವರು ನಮ್ಮನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ. ಇದೀಗ ನಾನು ಹಾಲು ಖರೀದಿ ಮಾಡಲೂ ಕೂಡ ಮನೆಯಿಂದ ಹೊರ ಹೋಗುತ್ತಿಲ್ಲ. ವೈರಸ್ ಇರುವುದು ದೃಢಪಟ್ಟಿದ್ದೇ ಆದರೆ, ಆಸ್ಪತ್ರೆಗಾದರೂ ಹೋಗಬಹುದು. ನೆಗೆಟಿವ್ ಬಂದರೆ, ನನ್ನ ಪೋಷಕರ ಮನೆಗಾದರೂ ಹೋಗಬಹುದು. ನಾನು ನನ್ನ ಮಗನನ್ನೂ ನೋಡಿಕೊಳ್ಳಬೇಕೆಂದು ಮಹಿಳೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಜೂನ್ 30ವರೆಗಿನ ವರದಿಗಳ ಪ್ರಕಾರ ರಾಜ್ಯದಲ್ಲಿ ಈಗಾಗಲೇ ಪರೀಕ್ಷೆಗೊಳಗಾಗಿರುವ 34,547 ಮಂದಿಯ ವೈದ್ಯಕೀಯ ವರದಿ ಬರುವುದು ಬಾಕಿಯಿದೆ ಎಂದು ತಿಳಿದುಬಂದಿದೆ.
ಇದು ಕೇವಲ ಸಾಮಾನ್ಯ ಜನರ ಪಾಡಷ್ಟೇ ಅಲ್ಲ, ಜನಪ್ರತಿನಿಧಿಗಳ ಕಥೆಗಳೂ ಕೂಡ ಇದೇ ಆಗಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆಯವರು ಭಾನುವಾರ ಮಧ್ಯಾಹ್ನ ಪರೀಕ್ಷೆಗೊಳಗಾಗಿದ್ದು, ಬುಧವಾರ ಮಧ್ಯಾಹ್ನ ಅವರ ವೈದ್ಯಕೀಯ ವರದಿ ಬಂದಿತ್ತು. ವರದಿಯಲ್ಲಿ ವೈರಸ್ ಇಲ್ಲ ಎಂದು ದೃಢಪಟ್ಟಿತ್ತು.
ಪ್ರಿಯಾಂಕ ಖರ್ಗೆಯವರು ನೆರೆಮನೆಯ ವ್ಯಕ್ತಿ ಕೊರೋನಾದಿಂದ ಸಾವನ್ನಪ್ಪಿದ್ದರು. ಘಟನೆ ಬಳಿಕ ಸಾಕಷ್ಟು ಆತಂಕ ಸೃಷ್ಟಿಯಾಗಿತ್ತು. ಇದರಂತೆ ಮಾಜಿ ಸಚಿವರು ವೈದ್ಯಕೀಯ ಪರೀಕ್ಷೆಗೊಳಗಾಗಿದ್ದರು.
ಪರೀಕ್ಷಾ ಸಂಖ್ಯೆಯನ್ನು ಸರ್ಕಾರ ಹೆಚ್ಚಿಸಬೇಕು. ನಾನು ಐಸೋಲೇಷನ್ ನಲ್ಲಿದ್ದರೆ ಓಕೆ... ಆದರೆ, ದಿನಗೂಲಿ ಮಾಡಿಕೊಂಡು ಬದುಕುವ ಜನರ ಪಾಡೇನಾಗಬೇಕು? ಇಂತಹ ಬೆಳವಣಿಗೆಗಳು ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆ ಎಂದು ಖರ್ಗೆ ತಿಳಿಸಿದ್ದಾರೆ.
ವೈದ್ಯಕೀಯ ವರದಿ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಸಿಎಂ ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ವಿಶೇಷ ತಜ್ಞರೊಂದಿಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ.
ರಾಜ್ಯದಲ್ಲಿ 60ಕ್ಕೂ ಹೆಚ್ಚು ಖಾಸಗಿ ಪ್ರಯೋಗಾಲಯಗಳಿದ್ದು, ಈ ಪ್ರಯೋಗಾಲಗಳಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲ. ನಗರದಲ್ಲಿ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಪ್ರಯೋಗಾಲಯದ ಮೇಲೆ ಈಗಾಗಲೇ ಸಾಕಷ್ಟು ಹೊರೆಯಾಗಿದೆ. ಹೀಗಾಗಿ ಮಾನವ ಶಕ್ತಿಯನ್ನು ಹೆಚ್ಚಿಸುವುದು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮೈಕ್ರೋಬಯಾಲಜಿಸ್ಟ್ ಗಳ ನಿಯೋಜನೆ ಹಾಗೂ ಪ್ರಯೋಗಾಲಯಗಳನ್ನು ಹೆಚ್ಚಿಸುವಂತೆ ಸಲಹೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.