ಭಾನುವಾರ ಲಾಕ್ ಡೌನ್ ಎಷ್ಟು ಪ್ರಯೋಜನಕಾರಿ: ಪರ-ವಿರೋಧ ಅಭಿಪ್ರಾಯ
ಜುಲೈ 5 ಭಾನುವಾರಕ್ಕೆ ಇನ್ನು ಎರಡು ದಿನಗಳು ಬಾಕಿ. ರಾಜ್ಯ ಸರ್ಕಾರ ಸಂಡೆ ಲಾಕ್ ಡೌನ್ ಘೋಷಿಸಿದೆ. ಈ ಸಂದರ್ಭದಲ್ಲಿ ಭಾನುವಾರ ಲಾಕ್ ಡೌನ್ ಉಪಯೋಗವಾಗಬಹುದೇ, ಇಲ್ಲವೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.
Published: 02nd July 2020 02:13 PM | Last Updated: 02nd July 2020 03:20 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಜುಲೈ 5 ಭಾನುವಾರಕ್ಕೆ ಇನ್ನು ಎರಡು ದಿನಗಳು ಬಾಕಿ. ರಾಜ್ಯ ಸರ್ಕಾರ ಸಂಡೆ ಲಾಕ್ ಡೌನ್ ಘೋಷಿಸಿದೆ. ಈ ಸಂದರ್ಭದಲ್ಲಿ ಭಾನುವಾರ ಲಾಕ್ ಡೌನ್ ಉಪಯೋಗವಾಗಬಹುದೇ, ಇಲ್ಲವೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.
ಕೊರೋನಾ ಸೋಂಕಿನ ಸರಣಿಯನ್ನು ಮುರಿಯಲು ಭಾನುವಾರ ಲಾಕ್ ಡೌನ್ ಅವಶ್ಯಕ ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದರೆ, ಸರ್ಕಾರದ ಇತರ ಪ್ರತಿನಿಧಿಗಳು ಹೇಳುವ ಪ್ರಕಾರ ಇದು ಕೊಂಚ ಬಿಡುವು ಎಂದು ಭಾನುವಾರ ಹೊರಗೆ ಸುತ್ತಾಡುವವರಿಗೆ ಕಡಿವಾಣ ಹಾಕಲು ತೆಗೆದುಕೊಳ್ಳುತ್ತಿರುವ ಕ್ರಮ ಎನ್ನುತ್ತಾರೆ.
ಭಾನುವಾರ ರಜಾ ದಿನ ಹಲವು ನಾಗರಿಕರು ಹೊರಗೆ ರಸ್ತೆಗಳಲ್ಲಿ ಓಡಾಡುವುದನ್ನು ತಪ್ಪಿಸಲು ಭಾನುವಾರ ಲಾಕ್ ಡೌನ್ ಘೋಷಿಸಿ ಎಂದು ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಅಧಿಕಾರಿಗಳು ಮತ್ತು ಹಲವು ನಾಗರಿಕರು ಹೇಳಿದ್ದರ ಫಲಶ್ರುತಿಯೇ ಈ ಸಂಡೆ ಲಾಕ್ ಡೌನ್.
ಭಾನುವಾರ ಲಾಕ್ ಡೌನ್ ದಿನ ನಾಗರಿಕರೆಲ್ಲರೂ ಕಡ್ಡಾಯವಾಗಿ ಮನೆಯೊಳಗೆ ಇರಬೇಕು. ಅಧಿಕಾರಿಗಳು ಹಗಲಿರುಳು ಕೆಲಸ ಮಾಡಿ ಲಾಕ್ ಡೌನ್ ಸಮರ್ಪಕವಾಗಿ ಜಾರಿಯಾಗುತ್ತಿದೆಯೇ ಎಂದು ನೋಡಿಕೊಳ್ಳಬೇಕು. ಕಾನೂನು ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್, ಅನ್ ಲಾಕ್ 1 ಸಮಯದಲ್ಲಿ ವಾರಾಂತ್ಯದಲ್ಲಿ ಹೊರಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವುದು ಕಂಡುಬಂದಿದೆ. ಜನದಟ್ಟಣೆ ತಡೆಯಲು ಸಂಡೆ ಲಾಕ್ ಡೌನ್ ಅನಿವಾರ್ಯವಾಗಿದೆ ಎಂದರು. ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್, ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಲಾಕ್ ಡೌನ್ ಸಹಾಯವಾಗಿದೆ.
ಲಾಕ್ ಡೌನ್ ಸಮಯದಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಜೂನ್ 1ರ ನಂತರ ಸಡಿಲಗೊಳಿಸಲಾಗಿದೆ. ಇನ್ನು ಜುಲೈ 1ರಿಂದ ಅನ್ ಲಾಕ್ 2ನೇ ಹಂತಕ್ಕೆ ತಲುಪಿದ್ದು ಇನ್ನಷ್ಟು ಆರ್ಥಿಕ ಚಟುವಟಿಕೆಗಳನ್ನು ಮುಕ್ತಗೊಳಿಸಲಾಗುತ್ತಿದೆ. ನಾವು ಇನ್ನಷ್ಟು ಜಾಗೃತರಾಗಿರಬೇಕು, ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಸಂದೇಶ ಸಾರಲು ಮತ್ತೆ ಭಾನುವಾರ ಲಾಕ್ ಡೌನ್ ತರುತ್ತಿದ್ದೇವೆ ಎಂದರು.
ಆದರೆ ವೈದ್ಯರು, ತಜ್ಞರು, ಬಿಬಿಎಂಪಿ ಹಿರಿಯ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವುದು ಬೇರೆ. ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಡಾ ಆರ್ ರವೀಂದ್ರ, ಸಮುದಾಯ ಹಂತಕ್ಕೆ ಕೊರೋನಾ ಹಬ್ಬಿರುವುದರಿಂದ ವಾರದಲ್ಲಿ ಒಂದು ದಿನ ಲಾಕ್ ಡೌನ್ ಮಾಡಿ ಪ್ರಯೋಜನವಿಲ್ಲ. ವಿಮಾನ ಮತ್ತು ರೈಲುಗಳ ಮುಖಾಂತರ ಜನರು ಪ್ರಯಾಣಿಸುವುದನ್ನು ಸರ್ಕಾರ ನಿರ್ಬಂಧಿಸಬೇಕು ಎನ್ನುತ್ತಾರೆ.
ಇನ್ನು ಕೆಲ ದಿನಗಳ ಮಟ್ಟಿಗೆ ಸಂಪೂರ್ಣ ಲಾಕ್ ಡೌನ್ ಮಾಡಬೇಕು. ಭಾನುವಾರ ಬದಲು ವಾರದಲ್ಲಿ ಲಾಕ್ ಡೌನ್ ಮಾಡಿದರೆ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ಪ್ರೊ ಎಂ ಎನ್ ಶ್ರೀಹರಿ.