ಕೋವಿಡ್-19 ರೋಗಿಗಳಿಗೆ ಬೆಡ್ ಗಳ ಸಮಸ್ಯೆ: ಕೇಂದ್ರೀಕೃತ ವ್ಯವಸ್ಥೆಯೇ ಪರಿಹಾರ ಎನ್ನುತ್ತಿದ್ದಾರೆ ಆಸ್ಪತ್ರೆ ವೈದ್ಯರು

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಬೆಡ್ ಗಳ ಸಮಸ್ಯೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಡುತ್ತಿದೆ. ತಮ್ಮಲ್ಲಿ ಬೆಡ್ ಸೌಕರ್ಯವಿಲ್ಲ ಎಂದು ರೋಗಿಗಳನ್ನು ವಾಪಸ್ ಕಳುಹಿಸುವ ನಿಸ್ಸಹಾಯಕ ಸ್ಥಿತಿಯಲ್ಲಿ ವೈದ್ಯರಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಬಂದ ರೋಗಿಗಳಿಗೆ ಸಹ ಬೆಡ್ ಗಳಿಲ್ಲ ಎಂದು ಕಳುಹಿಸುವ ಅನಿವಾರ್ಯ ಪರಿಸ್ಥಿತಿ ಬೆಂಗಳೂರಿನಂಥ ನಗರದಲ್ಲಿ ಉ
ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಹೊರಗೆ ನೌಕರರು ಆಕ್ಸಿಜನ್ ಟ್ಯಾಂಕ್ ಒಯ್ಯುತ್ತಿರುವುದು
ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಹೊರಗೆ ನೌಕರರು ಆಕ್ಸಿಜನ್ ಟ್ಯಾಂಕ್ ಒಯ್ಯುತ್ತಿರುವುದು

ಬೆಂಗಳೂರು:ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಬೆಡ್ ಗಳ ಸಮಸ್ಯೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಡುತ್ತಿದೆ. ತಮ್ಮಲ್ಲಿ ಬೆಡ್ ಸೌಕರ್ಯವಿಲ್ಲ ಎಂದು ರೋಗಿಗಳನ್ನು ವಾಪಸ್ ಕಳುಹಿಸುವ ನಿಸ್ಸಹಾಯಕ ಸ್ಥಿತಿಯಲ್ಲಿ ವೈದ್ಯರಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಬಂದ ರೋಗಿಗಳಿಗೆ ಸಹ ಬೆಡ್ ಗಳಿಲ್ಲ ಎಂದು ಕಳುಹಿಸುವ ಅನಿವಾರ್ಯ ಪರಿಸ್ಥಿತಿ ಬೆಂಗಳೂರಿನಂಥ ನಗರದಲ್ಲಿ ಉಂಟಾಗಿದೆ.

ಈ ಸಮಸ್ಯೆಗೆ ಇತಿಶ್ರೀ ಹಾಡಲು ಕೇಂದ್ರೀಕೃತ ಹಾಸಿಗೆ ಹಂಚಿಕೆ ವ್ಯವಸ್ಥೆ ತರಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50ರಷ್ಟು ಬೆಡ್ ನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಬೇಕೆಂದು ಸರ್ಕಾರದ ನಿಯಮವಿದೆ.ಆದರೆ ಅದು ಸರಿಯಾಗಿ ಜಾರಿಗೆ ಬರುತ್ತಿಲ್ಲ, ಅದರ ನಿರ್ವಹಣೆಯನ್ನು ಕೂಡ ನೋಡುವವರಿಲ್ಲದಾಗಿದೆ.

ಪ್ರತಿನಿತ್ಯ ನಮ್ಮಲ್ಲಿ ಬೆಡ್ ಗಳಿಲ್ಲ ಎಂದು ಸುಮಾರು 50 ರೋಗಿಗಳನ್ನು ವಾಪಸ್ ಕಳುಹಿಸಬೇಕಾದ ಪರಿಸ್ಥಿತಿಯುಂಟಾಗಿದೆ. ಅವರಲ್ಲಿ ಬಹುತೇಕ ರೋಗಿಗಳನ್ನು ಆಂಬ್ಯುಲೆನ್ಸ್ ಗಳಲ್ಲಿ ಕರೆತಂದಿರುತ್ತಾರೆ. ಅವರು ಅಷ್ಟರಲ್ಲಾಗಲೇ 6ರಿಂದ 12 ಆಸ್ಪತ್ರೆಗಳಿಗೆ ಹೋಗಿ ಬಂದಿರುತ್ತಾರೆ. ಕಳೆದ ಗುರುವಾರ ಬೆಳಗ್ಗೆ ಹೀಗೆ ಒಬ್ಬರು ರೋಗಿ ಬಂದರು, ನಾವು 25 ಆಸ್ಪತ್ರೆಗಳಿಗೆ ಫೋನ್ ಮಾಡಿ ಕೇಳಿದೆವು. ಎಲ್ಲಾ ಕಡೆ ಬೆಡ್ ಖಾಲಿ ಇಲ್ಲ ಎಂಬ ಉತ್ತರ ಬಂತು ಎಂದು ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳುತ್ತಾರೆ.

ಬೆಡ್ ಇಲ್ಲ ಎಂದು ನಾವು ಕಳುಹಿಸುವ ಬಹುತೇಕ ರೋಗಿಗಳು ಆಕ್ಸಿಜನ್ ಬೆಡ್ ಗಳಿಲ್ಲದೆ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ ಎಂದು ಹೇಳುವವರೇ ಆಗಿದ್ದಾರೆ. ಒಬ್ಬ ರೋಗಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದರೆ ಪಕ್ಕದ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಬೆಡ್ ಭರ್ತಿಯಾಗಿದ್ದರೆ ಆಸ್ಪತ್ರೆ ಅಧಿಕಾರಿಗಳು ಕೇಂದ್ರ ಸಂಖ್ಯೆಯೊಂದಕ್ಕೆ ಕರೆ ಮಾಡಿ ಅಲ್ಲಿ ಸಾಮಾನ್ಯ ಬೆಡ್, ಆಕ್ಸಿಜನ್ ಅಥವಾ ವೆಂಟಿಲೇಟರ್ ಬೆಡ್ ಅಗತ್ಯವಿದೆಯೇ ಎಂದು ಮಾಹಿತಿ ನೀಡಬೇಕು.

ಕೇಂದ್ರೀಯ ವ್ಯವಸ್ಥೆಯಲ್ಲಿ ಯಾವ ಆಸ್ಪತ್ರೆಯಲ್ಲಿ ಯಾವ ರೀತಿಯ ಚಿಕಿತ್ಸೆಯ ಲಭ್ಯತೆ ಇದೆ ಎಂದು ರೋಗಿಗಳಿಗೆ ತಿಳಿಸಬೇಕು. ಇದರಿಂದ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದು ತಪ್ಪುತ್ತದೆ ಎಂದು ವೈದ್ಯರು ಹೇಳುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ನಿಜವಾಗಿಯೂ ಬೆಡ್ ಭರ್ತಿಯಾಗಿದೆಯೇ, ಇಲ್ಲ ಸುಳ್ಳು ಹೇಳುತ್ತಿದ್ದಾರೆಯೇ ಎಂದು ತಿಳಿದುಕೊಳ್ಳಬೇಕು, ಖಾಸಗಿ ಆಸ್ಪತ್ರೆಗಳ ಬೆಡ್ ಸಂಖ್ಯೆಯನ್ನು ಶೇಕಡಾ 75ಕ್ಕೆ ಹೆಚ್ಚಿಸಬೇಕು ಎಂದು ಈ ಖಾಸಗಿ ಆಸ್ಪತ್ರೆ ವೈದ್ಯ ಹೇಳುತ್ತಾರೆ.

ಕೇಂದ್ರೀಯ ದೂರವಾಣಿ ಕರೆ ಸೌಲಭ್ಯ:ರೋಗಿಗಳಿಗೆ ಯಾವ ಆಸ್ಪತ್ರೆಯಲ್ಲಿ ಬೆಡ್ ಸೌಲಭ್ಯವಿದೆ,ಯಾವ ಚಿಕಿತ್ಸೆ ಸಿಗುತ್ತದೆ ಎಂದು ಗೊತ್ತಾಗಲು ಕಾಲ್ ಸೆಂಟರ್ ಸ್ಥಾಪಿಸಬೇಕು. ಅಲ್ಲಿ ನೋಡಲ್ ಅಧಿಕಾರಿ ನೇಮಕಾತಿ ಮಾಡಿ ಆ ಮೂಲಕ ಆಸ್ಪತ್ರೆಗಳ ಮಾಹಿತಿ ರೋಗಿಗಳಿಗೆ ಸಿಗಬೇಕು ಎಂದು ಕೋವಿಡ್ 19 ಸರ್ಕಾರಿ ಆಸ್ಪತ್ರೆಯ ನಿರ್ದೇಶಕರು ಹೇಳುತ್ತಾರೆ.

ಕೇವಲ ಬೆಡ್ ಸಮಸ್ಯೆ ಮಾತ್ರವಲ್ಲದೆ, ಇರುವ ಬೆಡ್ ಗಳನ್ನು ತುರ್ತು ಇಲ್ಲದ ರೋಗಿಗಳು ಪಡೆದಿರುತ್ತಾರೆ. ಇನ್ನು ತುರ್ತು ಚಿಕಿತ್ಸೆ ಅಗತ್ಯವಿರುವವರನ್ನು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳುತ್ತಲೂ ಇಲ್ಲ. ಕೋವಿಡ್-19 ರೋಗಿಗಳಿಗೆ ಬೆಡ್ ಗಳ ಸೌಲಭ್ಯ ಎಷ್ಟಿದೆ ಎಂಬ ನಿಖರ ಮಾಹಿತಿ ರೋಗಿಗಳಿಗೆ ಸಿಗಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com