ಹೋಂ ಐಸೋಲೇಷನ್ ಮಾರ್ಗಸೂಚಿ ಪ್ರಕಟ: ಕೋವಿಡ್ ನಿರ್ವಹಣೆಗಾಗಿ ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಕಮಿಟಿ ರಚನೆ; ಸಚಿವ ಸುಧಾಕರ್

ರಾಜ್ಯದಲ್ಲಿ ಕೊರೋನ ನಿಯಂತ್ರಿಸುವ ಉದ್ದೇಶದಿಂದ ಕೋವಿಡ್ ಲಕ್ಷಣರಹಿತ, ಬೇರೆ ರೋಗಲಕ್ಷಣಗಳಿಲ್ಲದ ಮತ್ತು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲು ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Published: 03rd July 2020 09:30 PM  |   Last Updated: 03rd July 2020 09:30 PM   |  A+A-


ಸಚಿವ ಸುಧಾಕರ್

Posted By : Raghavendra Adiga
Source : UNI

ಬೆಂಗಳೂರು:   ರಾಜ್ಯದಲ್ಲಿ ಕೊರೋನ ನಿಯಂತ್ರಿಸುವ ಉದ್ದೇಶದಿಂದ ಕೋವಿಡ್ ಲಕ್ಷಣರಹಿತ, ಬೇರೆ ರೋಗಲಕ್ಷಣಗಳಿಲ್ಲದ ಮತ್ತು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲು ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈ ಕುರಿತು ಪ್ರಕಟಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಹೋಂ ಐಸೋಲೇಶನ್ ನಲ್ಲಿರುವವರ ಮೇಲೆ ನಿಗಾವಹಿಸಲು ಪ್ರತ್ಯೇಕ ಕಾಲ್ ಸೆಂಟರ್ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ತಜ್ಞರ ಸಮಿತಿಯ ವರದಿಯ ಮೇರೆಗೆ ಹೋಂ ಐಸೋಲೇಶನ್‌ಗೆ ಸರ್ಕಾರ ಸಮ್ಮತಿಸಿದೆ. ಆದರೆ ಹೋಂ ಐಸೋಲೇಶನ್ ಗೆ ಒಳಗಾಗಲು ಸರ್ಕಾರ ಕೆಲವು ನಿಯಮಗಳನ್ನು ಪ್ರಕಟಿಸಿದ್ದು ಇದಕ್ಕೆ ಅನುಗುಣವಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಆಂಬುಲೆನ್ಸ್ ಕೊರತೆ ನೀಗಿಸಲು ಸರ್ಕಾರ ಪ್ರತಿ ವಾರ್ಡಿಗೆ 2 ರಂತೆ 400 ಆಂಬುಲೆನ್ಸ್ ಕಾಯ್ದಿರಿಸಲಿದೆ. ಇದಕ್ಕೆ ಐಪಿಎಸ್ ಮಟ್ಟದ ಅಧಿಕಾರಿಯೊಬ್ಬರನ್ನು ನಿರ್ವಹಣೆಗಾಗಿ ನಿಯೋಜಿಸಲಾಗಿದೆ. ಅಲ್ಲದೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ನಿರ್ವಹಣೆಗಾಗಿ ಕೇಂದ್ರೀಕೃತ ವ್ಯವಸ್ಥೆಯನ್ನು ರೂಪಿಸಿದ್ದು ತೀವ್ರ ಸೋಂಕಿತರಿಗೆ ಹಾಸಿಗೆ ದೊರಕಿಸುವ ನಿಟ್ಟಿನಲ್ಲಿ ಇದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದ, ದೇಶದ ಹಾಗೂ ಜಾಗತಿಕ ಮಟ್ಟದ ಕೋವಿಡ್ ಅಂಕಿ ಅಂಶಗಳನ್ನು ನೀಡಿದ ಸುಧಾಕರ್ ಅವರು, ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಹಾಗೂ ಮರಣ ಪ್ರಮಾಣಗಳು ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಸೋಂಕಿತರನ್ನು ಸಂಪೂರ್ಣವಾಗಿ ಗುಣಮುಖರನ್ನಾಗಿ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆದ್ದರಿಂದ ಲಕ್ಷಣವಿರುವವರಿಗೆ ಹಾಸಿಗೆ ಮತ್ತು ಚಿಕಿತ್ಸೆ ಲಭ್ಯವಾಗಬೇಕು ಎನ್ನುವ ದೃಷ್ಟಿಯಲ್ಲಿ ಹೋಂ ಐಸೋಲೇಶನ್ ಅನ್ನು ಅಳವಡಿಸಿಕೊಳ್ಳಲಾಗುತ್ತಿದೆ. 

ಶವಸಂಸ್ಕಾರಕ್ಕೂ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಹೇಳಿದರು.
ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ರಚನೆ: ಗ್ರಾಮೀಣ ಭಾಗದಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಕೋವಿಡ್ ನಿರ್ವಹಣೆಗೆ ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಕಮಿಟಿ ರಚಿಸಲಾಗಿದ್ದು, ಇದರಲ್ಲಿ ಸ್ಥಳೀಯ ಮುಖಂಡರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಪೋಲೀಸ್ ಸಿಬ್ಬಂದಿ, ಲೈನ್ ಮ್ಯಾನ್ ಮತ್ತು ಸ್ವಯಂ ಸೇವಕರು ಸೇರಿದಂತೆ ಒಂದು ತಂಡವನ್ನು ಒಳಗೊಳ್ಳಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದಂತೆ *ಥಿಂಕ್ ಲೋಕಲ್, ಆಕ್ಟ್ ಗ್ಲೋಬಲ್* ಎನ್ನುವ ತತ್ವದ ಮೇಲೆ ಈ ಕಮಿಟಿಗಳು ಕಾರ್ಯನಿರ್ವಹಿಸಲಿವೆ. ಸಂಪೂರ್ಣ ಉಸ್ತುವಾರಿಯನ್ನು ಹಿರಿಯ ಅಧಿಕಾರಿಯೊಬ್ಬರಿಗೆ ನೀಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 8800 ಇಂತಹ ಕಮಿಟಿಗಳು ಕಾರ್ಯನಿರ್ವಹಿಸಲಿವೆ ಎಂದು ಸಚಿವ ಸುಧಾಕರ್ ಹೇಳಿದರು.

ಹೋಂ ಐಸೋಲೇಶನ್ ಮಾರ್ಗಸೂಚಿಯ ಪ್ರಮುಖಾಂಶಗಳು;
1. ಕೇವಲ ಲಕ್ಷಣರಹಿತ ಮತ್ತು ಬೇರೆ ರೋಗ ಲಕ್ಷಣ ಇರದ ಹಾಗೂ ಕೋವಿಡ್ ಧೃಢಪಟ್ಟಿರುವ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸೋಂಕಿತರನ್ನು ಹೋಂ ಐಸೋಲೇಶನ್ ಮಾಡಬಹುದು.
2. ಹೋಂ ಐಸೋಲೆಶನ್ ನಲ್ಲಿರುವವರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸುವುದು
3. ಆರೋಗ್ಯಾಧಿಕಾರಿಗಳು ಮನೆಗೆ ಭೇಟಿ ನೀಡಿ ಹೋಂ ಐಸೋಲೇಶನ್ ಮಾಡಲು ಸೂಕ್ತವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು.
4. ಸಂಬಂಧಪಟ್ಟ ಆರೋಗ್ಯಾಧಿಕಾರಿಗಳಲ್ಲಿ ಹೋಂ ಐಸೋಲೇಶನ್ ನಲ್ಲಿರುವವರು ಪ್ರತಿನಿತ್ಯ ತಪಾಸಣೆ ಮಾಡಿಸಿಕೊಳ್ಳುವುದು.
5. ಹೋಂ ಐಸೋಲೇಶನ್ ನಲ್ಲಿರುವ ವ್ಯಕ್ತಿಯ ಹತ್ತಿರ ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್, ಪಿಪಿಇ ಸೇರಿದಂತೆ ಅಗತ್ಯ ಸಲಕರಣೆಗಳು ಲಭ್ಯವಿರಬೇಕು.
6. ಹೋಂ ಐಸೋಲೇಶನ್ ನಿಂದ ಬಿಡುಗಡೆ ಹೊಂದಲು ಪ್ರಸ್ತುತದಲ್ಲಿರುವ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಪ್ರೋಟೋಕಾಲ್ ಗಳನ್ನೇ ಅನ್ವಯಿಸಬೇಕು.
7. ಹೋಂ ಐಸೋಲೇಶನ್ ಕುರಿತಂತೆ ಕುಟುಂಬದ ಸದಸ್ಯರಿಗೆ, ನೆರೆಹೊರೆಯವರಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿರುವುದು.

Stay up to date on all the latest ರಾಜ್ಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp