ಕೋವಿಡ್-19 ವಿರುದ್ಧ ಕರ್ನಾಟಕ ಬಿಜೆಪಿ ಮಾಡಿರುವ ಕೆಲಸಗಳೇನು? ಇಂದು ಪರಾಮರ್ಶೆ ನಡೆಸಲಿದ್ದಾರೆ ಪಿಎಂ ಮೋದಿ
ಕರ್ನಾಟಕ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಜೊತೆ ಕೆಲಸ ಮಾಡಿ ವೈರಾಣು ತಡೆಗಟ್ಟಲು ಕೇಂದ್ರ ಬಿಜೆಪಿ ಮುಂದೆ ಬಂದಿದೆ.
Published: 04th July 2020 07:34 AM | Last Updated: 04th July 2020 07:52 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಜೊತೆ ಕೆಲಸ ಮಾಡಿ ವೈರಾಣು ತಡೆಗಟ್ಟಲು ಕೇಂದ್ರ ಬಿಜೆಪಿ ಮುಂದೆ ಬಂದಿದೆ.
ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಕರ್ನಾಟಕದಲ್ಲಿನ ಕೋವಿಡ್-19 ಪರಿಸ್ಥಿತಿ ಬಗ್ಗೆ 90 ನಿಮಿಷಗಳ ಕಾಲ ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯದ ಬಿಜೆಪಿ ಮುಖಂಡರ ಜೊತೆ ಸಂವಾದ ನಡೆಸಲಿದ್ದಾರೆ.
ರಾಜ್ಯದ ಬಿಜೆಪಿ ಘಟಕ ಇದುವರೆಗೆ ಮಾಡಿರುವ ಕೆಲಸಗಳು, ಲಾಕ್ ಡೌನ್ ಸಮಯದಲ್ಲಿ ಪಕ್ಷ ಜನರಿಗೆ ಹೇಗೆ ಸಹಾಯ ಮಾಡಿದೆ ಎಂಬುದರ ಬಗ್ಗೆ ಪ್ರಧಾನಿ ವಿವರ ಕೇಳಲಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಮತ್ತು ಪ್ರಧಾನ ಕಾರ್ಯದರ್ಶಿ ಎನ್ ರವಿ ಕುಮಾರ್ ತಿಳಿಸಿದ್ದಾರೆ.
ಕೋವಿಡ್-19 ಬಗ್ಗೆ ಪಕ್ಷದ ಘಟಕ ರಾಜ್ಯದಲ್ಲಿ ಯಾವ ರೀತಿ ಜನರಿಗೆ ಅರಿವು ಮೂಡಿಸಿದೆ, ಮಾಸ್ಕ್ ಮತ್ತು ಔಷಧಿಗಳನ್ನು ಹೇಗೆ ವಿತರಣೆ ಮಾಡಿದೆ ಎಂದು ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ರವಿ ಕುಮಾರ್ ತಿಳಿಸಿದರು. ಸಿಎಂ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿಗಳು, ಕೇಂದ್ರದ ಸಚಿವರುಗಳು ಮತ್ತು ಪಕ್ಷದ ಹಿರಿಯ ನಾಯಕರು ಇಂದು ಸಂಜೆ ಪ್ರಧಾನಿಗಳ ಜೊತೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಬಿಜೆಪಿ ರಾಜ್ಯ ಘಟಕ 49 ಲಕ್ಷ ರೇಶನ್ ಕಿಟ್ ಗಳನ್ನು ವಿತರಿಸಿದ್ದು, 1.50 ಕೋಟಿಗೂ ಅಧಿಕ ಫುಡ್ ಪ್ಯಾಕೆಟ್ ಗಳು, 1 ಕೋಟಿಗೂ ಅಧಿಕ ಮಾಸ್ಕ್, ಮೆಡಿಸಿನ್ ಗಳನ್ನು ವಿತರಿಸಿದೆ, ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದೆ. ಕೇಂದ್ರದ ಅಭಿಯಾನಗಳನ್ನು ಮುಂದೆ ತೆಗೆದುಕೊಂಡು ಹೋಗಲು ಬಿಜೆಪಿ ಪಕ್ಷ ಮತ್ತು ಸರ್ಕಾರ ಸಮನ್ವಯದಿಂದ ಕೆಲಸ ಮಾಡುತ್ತಿದೆ ಎಂದು ರವಿ ಕುಮಾರ್ ಹೇಳಿದರು.
ಬಿಜೆಪಿ ಪಕ್ಷ ರಾಜ್ಯದಲ್ಲಿ ಕೋವಿಡ್-19 ವಿರುದ್ಧ ಮಾಡುತ್ತಿರುವ ಕೆಲಸಗಳ ಬಗ್ಗೆ ಇಂದಿನ ವಿಡಿಯೊ ಕಾನ್ಫರೆನ್ಸ್ ಸಂವಾದದಲ್ಲಿ ಚರ್ಚೆ ಮಾಡುವುದಿದ್ದರೂ ಕೂಡ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣಗಳ ಬಗ್ಗೆ ಕೂಡ ಇಂದಿನ ಸಂವಾದದಲ್ಲಿ ಪ್ರಧಾನಿಯವರೊಂದಿಗೆ ಚರ್ಚೆ ನಡೆಯಲಿದೆ.