ಕೊಡಗು ಜಿಲ್ಲೆಯಲ್ಲಿ ಮತ್ತೆ 14 ಹೊಸ ಕೊರೊನಾ ಪ್ರಕರಣ ದೃಢ: ಹೋಂ ಸ್ಟೇ, ರೆಸಾರ್ಟ್‌, ಲಾಡ್ಜ್‌ ಬಂದ್

ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹೊಸ 14 ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯ ಮೂಲೆಮೂಲೆಗೂ ಸೋಂಕು ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹೊಸ 14 ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯ ಮೂಲೆಮೂಲೆಗೂ ಸೋಂಕು ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಗೋಣಿಕೊಪ್ಪಲುವಿನ ಹರಿಶ್ಚಂದ್ರಪುರ ಬಡಾವಣೆಯ 23 ವರ್ಷದ ಮಹಿಳೆ, ಗೋಣಿಕೊಪ್ಪಲು ನೇತಾಜಿ ಬಡಾವಣೆಯ 50 ವರ್ಷದ ಆರೋಗ್ಯ ಇಲಾಖೆಯ ಅಧಿಕಾರಿ, ತಿತಿಮತಿ ಗ್ರಾಮದ 54 ವರ್ಷದ ಆರೋಗ್ಯ ಇಲಾಖೆಯ ವಾಹನದ ಚಾಲಕನಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

ಅದೇ ರೀತಿಯಲ್ಲಿ, ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ 50 ವರ್ಷದ ಪುರುಷ, ಪೇರುಂಬಾಡಿ ಗ್ರಾಮದ 56 ವರ್ಷ, 30 ವರ್ಷ ಮತ್ತು 12 ವರ್ಷದ ಒಂದೇ ಕುಟುಂಬದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿವೆ. ಇವರು ಬೆಂಗಳೂರಿನಿಂದ ಕೊಡಗಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಹೊರ ಜಿಲ್ಲೆ, ರಾಜ್ಯ, ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ವಸತಿ ಕಾಯ್ದಿರಿಸದಂತೆ ಆದೇಶ
ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಈಗಾಗಲೇ ಕೈಗೊಂಡಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಆ ದಿಸೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಹೊರ ರಾಜ್ಯ ಮತ್ತು ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಜಿಲ್ಲೆಯ ಎಲ್ಲಾ ಹೋಟೆಲ್, ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ವಸತಿ ಗೃಹ ಮತ್ತಿತರ ವಸತಿ ಸೌಕರ್ಯ ನೀಡದಂತೆ ಈಗಾಗಲೇ ಜಿಲ್ಲಾಡಳಿತ ನಿರ್ದೇಶನ ನೀಡಿದೆ.

ಸಾರ್ವಜನಿಕ ಹಿತಾಸಕ್ತಿಯಿಂದ ಸಿಆರ್‌ಪಿಸಿ ಕಾಯ್ದೆ 1973 ರ ಸೆಕ್ಷನ್ 144 (3) ರಡಿ ಹಾಗೂ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005 ರ ಕಲಂ 34(ಸಿ) ರಡಿಯಲ್ಲಿ ಮತ್ತು ಉಲ್ಲೇಖ (2) ರ ಆದೇಶದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.

ಜು.7 ರಿಂದ ಮುಂದಿನ ಆದೇಶದ ವರೆಗೆ ಕೊಡಗು ಜಿಲ್ಲೆಗೆ ಹೊರ ಜಿಲ್ಲೆ, ಹೊರ ರಾಜ್ಯ ಮತ್ತು ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಜಿಲ್ಲೆಯ ಎಲ್ಲಾ ಹೋಟೆಲ್, ಹೋಂಸ್ಟೇ, ರೆಸಾರ್ಟ್, ಲಾಡ್ಜ್, ವಸತಿ ಗೃಹ ಮತ್ತಿತರ ವಸತಿ ಸೌಕರ್ಯ ನೀಡಬಾರದು. ಹಾಗೆಯೇ ಇನ್ನು ಮುಂದೆ ಜಿಲ್ಲೆಯ ಹೊರ ಭಾಗದ ಪ್ರವಾಸಿಗರ ಆನ್‍ಲೈನ್/ ಆಫ್‍ಲೈನ್ ಮತ್ತಿತರ ಯಾವುದೇ ರೂಪದ ಬುಕಿಂಗ್ ಸ್ವೀಕರಿಸಬಾರದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com