ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ನೆರವು ನೀಡಿ: ಸರ್ಕಾರಿ ಶಿಕ್ಷಕರಿಗೆ ಸುರೇಶ್ ಕುಮಾರ್ ಮನವಿ
ಕೊರೋನಾ ಕಾಲಘಟ್ಟದ ಸಂಕಷ್ಟದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ತೀವ್ರ ದುಃಸ್ಥಿತಿಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರ ನೆರವಿಗೆ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಧಾವಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
Published: 07th July 2020 07:28 AM | Last Updated: 07th July 2020 08:24 AM | A+A A-

ಶಿಕ್ಷಣ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಸಹಶಿಕ್ಷಕರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಸಚಿವ ಸುರೇಶ್ ಕುಮಾರ್ ಚರ್ಚೆ
ಬೆಂಗಳೂರು: ಕೊರೋನಾ ಕಾಲಘಟ್ಟದ ಸಂಕಷ್ಟದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ತೀವ್ರ ದುಃಸ್ಥಿತಿಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರ ನೆರವಿಗೆ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಧಾವಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಅವರು ನಿನ್ನೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಖಾಸಗಿ ಶಾಲಾ ಶಿಕ್ಷಕರು ತೀವ್ರ ಸಂಕಷ್ಟದಲ್ಲಿರುವುದನ್ನು ನಮ್ಮ ಇಲಾಖೆ ಗಮನಿಸಿದೆ. ಈ ಕುರಿತು ಸಾರ್ವಜನಿಕವಾಗಿಯೂ ಹೆಚ್ಚಿನ ಕಳಕಳಿ ವ್ಯಕ್ತವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಅವರ ನೆರವಿಗೆ ನಾವು ಧಾವಿಸುವುದು ಅಗತ್ಯವೆಂಬುದನ್ನು ನಾವೆಲ್ಲರೂ ಕಂಡುಕೊಳ್ಳಬೇಕಾದ ಸಂದರ್ಭ ಇದಾಗಿದೆ ಎಂದರು.
ಇದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯೂ ಸಹ ಆಗಿದೆ. ಹಾಗಾಗಿ ನಮ್ಮ ಶಿಕ್ಷಕ ಬಂಧುಗಳು ಒಂದು ಇಲ್ಲವೇ ಎರಡು ದಿನಗಳ ವೇತನವನ್ನು ನೀಡುವ ಮೂಲಕ ನಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ಹೇಗೆ ಬರಬಹುದೆಂಬ ಕುರಿತು ಸರ್ಕಾರದ ಮಟ್ಟದಲ್ಲಿಯೂ ಚಿಂತನೆ ನಡೆದಿದೆ. ಇಲಾಖೆಯ ಲಭ್ಯ ಸಂಪನ್ಮೂಲಗಳ ಮೂಲಕವೂ ಕಷ್ಟದಲ್ಲಿರುವ ನಮ್ಮ ಶಿಕ್ಷಕರಿಗೆ ಇತಿಮಿತಿಗಳಲ್ಲಿ ಆರ್ಥಿಕ ಸಹಕಾರ ನೀಡಲು ಸರ್ಕಾರ ಸಹ ಅವಕಾಶಗಳನ್ನು ಅವಲೋಕಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಶಿಕ್ಷಕರಿಗೆ ನೆರವಾಗಲು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿಯವರು ತಮ್ಮ ಒಂದು ತಿಂಗಳ ವೇತನ ನೀಡಲು ಮುಂದಾಗಿದ್ದಾರೆ. ನಾನೂ ಸಹ ನನ್ನ ಪಾಲನ್ನು ನೀಡುವೆ ಎಂದು ಹೇಳಿರುವ ಸುರೇಶ್ ಕುಮಾರ್, ನಮ್ಮ ಶಿಕ್ಷಕರು ಉದಾರತೆ ಮೆರೆಯುವ ಮೂಲಕ ಸಮಾಜಕ್ಕೆ ಇಂದು ಅವಶ್ಯವಿರುವ ಸಕಾರಾತ್ಮಕ ಸಂದೇಶ ನೀಡಬೇಕೆಂದು ಮನವಿ ಮಾಡಿದ್ದಾರೆ.