ಕೊರೋನಾ ಶಂಕೆ: ಪ್ರಸವಕ್ಕೆ ಬಂದಿದ್ದ ತುಂಬು ಗರ್ಭಿಣಿ ಮಹಿಳೆಯನ್ನು ಹೊರಗೆ ತಳ್ಳಿದ ನರ್ಸಿಂಗ್ ಹೋಂ!

ಕೊರೋನಾ ವೈರಸ್ ಇದೆ ಎಂದು ಶಂಕಿಸಿ ಪ್ರಸವಕ್ಕೆ ಬಂದಿದ್ದ ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಸರ್ಸಿಂಗ್ ಹೋಂನಿಂದ ಹೊರಗೆ ಹಾಕಿರುವ ಘಟನೆಯಂದೂ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಇದೆ ಎಂದು ಶಂಕಿಸಿ ಪ್ರಸವಕ್ಕೆ ಬಂದಿದ್ದ ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಸರ್ಸಿಂಗ್ ಹೋಂನಿಂದ ಹೊರಗೆ ಹಾಕಿರುವ ಘಟನೆಯಂದೂ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. 

ಗರ್ಭಿಣಿಯಾದ ಆರಂಭದಿಂದಲೂ ಸಿಕ್ಕಿಂ ಮೂಲದ 34 ವರ್ಷದ ಮಹಿಳೆ ನಗರದ ವಿವೇಕನಗರದ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳ ಹಿಂದಷ್ಟೇ ಮಹಿಳೆ ಕೊರೋನಾ ಪರೀಕ್ಷೆಗೊಳಗಾಗಿದ್ದು, ಪರೀಕ್ಷೆಯ ವರದಿ ಇನ್ನು ಬಂದಿಲ್ಲ. 

ಭಾನುವಾರ ಬೆಳಿಗ್ಗೆ 11.30ರ ಸುಮಾರಿಗೆ ಪ್ರಸವದ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಕೆಯನ್ನು ನರ್ಸಿಂಗ್ ಹೋಂಗೆ ಕರೆದುಕೊಂಡು ಬರಲಾಗಿತ್ತು. ಪ್ರಸವದ ವೇದನೆಯಿಂದ ಮಹಿಳೆ ಬಳುತ್ತಿರುವ ಸಂದರ್ಭದಲ್ಲಿಯೇ ಆಸ್ಪತ್ರೆಯ ಸಿಬ್ಬಂದಿಗಳು ಕೊರೋನಾ ಸೋಂಕಿತ ಲಕ್ಷಣ ಇರುವವರಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಆಸ್ಪತ್ರೆಯಿಂದ ಹೊರಗೆ ಕಳುಹಿಸಿದರು. ನರ್ಸಿಂಗ್ ಹೋಂನ ಹೊರಾಂಗಣದಲ್ಲಿ ಗರ್ಭಿಣಿ ಮಹಿಳೆಯನ್ನು ಕೂರಿಸಲಾಗಿತ್ತು. ಸುಮಾರು 6 ಗಂಟೆಗಳ ಕಾಲ ಅಲ್ಲಿಯೇ ಇರಲಾಗಿತ್ತು. ಯಾವುದೇ ವೈದ್ಯರಾಗಲೀ, ನರ್ಸಗಳಾಗಲೀ ಚಿಕಿತ್ಸೆ ನೀಡಲು ಮುಂದಕ್ಕೆ ಬರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. 

ನರ್ಸಿಂಗ್ ಹೋಮ್ ಗಳು ಇಷ್ಟೊಂದು ನಿರ್ಲಕ್ಷ್ಯದಿಂದ ಇದ್ದರೆ ಹೇಗೆ? ಪ್ರಸವದ ವೇದನೆಯಿಂದ ಬಳಲುತ್ತಿರುವ ಮಹಿಳೆಯನ್ನು ಹೊರಗೆ ಹಾಕಲು ಹೇಗೆ ಸಾಧ್ಯ? ಒಂದು ವೇಳೆ ಚಿಕಿತ್ಸೆ ನೀಡಲು ಸಾಧ್ಯವಾಗದೇ ಹೋದರೆ ಬೇರೊಂದು ಆಸ್ಪತ್ರೆಗೆ ಹೋಗುವಂತೆ ನಮಗೆ ಮಾರ್ಗದರ್ಶನ ನೀಡಬಹುದಿತ್ತು. ಆದರೆ, ಅಂತಹ ಯಾವುದೇ ಕೆಲಸವನ್ನು ಯಾವುದೇ ಸಿಬ್ಬಂದಿಯೂ ಮಾಡಲಿಲ್ಲ ಎಂದು ತಿಳಿಸಿದ್ದಾರೆ. 

ಚಿಕಿತ್ಸೆ ನೀಡುವುದು ಆಸ್ಪತ್ರೆಯ ಜವಾಬ್ದಾರಿಯಾಗಿರುತ್ತದೆ. ನಾವು ಸಾಕಷ್ಟು ಆತಂಕಕ್ಕೊಳಗಾಗಿದ್ದೆವು. ಚಿಕಿತ್ಸೆ ಕೊಡಿಸಲು ಸಾಕಷ್ಟು ಆಸ್ಪತ್ರೆಗಳಿಗೆ ಅಲೆದೆವು. ರಾತ್ರಿ 8 ಗಂಟೆ ಸುಮಾರಿಗೆ ಮಲ್ಲೇಶ್ವರಂ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಸೋಮವಾರ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದಳು ಎಂದಿದ್ದಾರೆ. 

ಇನ್ನು ಮಹಿಳೆಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಯು ನರ್ಸಿಂಗ್ ಹೋಮ್ನ್ನು ಸಂಪರ್ಕಿಸಿದಾಗ ಅಲ್ಲಿನ ಸಿಬ್ಬಂದಿಗಳು ಮಹಿಳೆಗೆ ಕೊರೋನಾ ಇರುವುದು ದೃಢಪಡಿಸಿದ್ದಾರೆ. ಈ ನಡುವೆ ಕುಟುಂಬಸ್ಥರಿಗೆ ಬಿಬಿಎಂಪಿ ಅಧಿಕಾರಿಗಳೂ ಕೂಡ ಕರೆ ಮಾಡಿದ್ದು, ಮಾಹಿತಿ ನೀಡಿದ್ದಾರೆ. ಇನ್ನು ಮಲ್ಲೇಶ್ವರಂ ಆಸ್ಪತ್ರೆಯಲ್ಲಿ ಖರ್ಚು ಭರಿಸಲು ಸಾಧ್ಯವಿಲ್ಲ ಎಂದು ಹೇಳಿದ ಕುಟುಂಬ ಇದೀಗ ಮಹಿಳೆಯನ್ನು ವಾಣಿವಿಲಾಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆಂದು ತಿಳಿದುಬಂದಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು, ನಗರರದಲ್ಲಿ ಸಾಕಷ್ಟು ಹೆರಿಗೆ ಆಸ್ಪತ್ರೆಗಳಿವೆ. ಆಸ್ಪತ್ರೆಗಳೊಂದಿಗೆ ನಿರಂತರ ಸಂಪರ್ಕ ಹೊಂದಲಾಗುತ್ತದೆ. ಶೇ.50ರಷ್ಟು ಕೋರಿಗಳಿಗೆ ಹಾಸಿಗೆಗಳನ್ನು ಕಾಯ್ದಿರಿಸಲಾಗುತ್ತದೆ. ಪ್ರಕರಣ ಸಂಬಂಧ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com