ಕಲಬುರಗಿಯಲ್ಲಿ ಕೊರೊನಾ ಸೋಂಕಿತ ವೃದ್ಧೆಯನ್ನು ಮನೆಯಲ್ಲೇ ಬಿಟ್ಟ ಆರೋಗ್ಯ ಇಲಾಖೆ ಸಿಬ್ಬಂದಿ!

ಕೊರೊನಾ ಸೋಂಕು ಹೆಚ್ಚಳಗೊಂಡ ನಂತರ ರಾಜ್ಯದಲ್ಲಿ ಅಮಾನವೀಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಕೊರೊನಾ ಸೋಂಕು ಹೆಚ್ಚಳಗೊಂಡ ನಂತರ ರಾಜ್ಯದಲ್ಲಿ ಅಮಾನವೀಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಇದೀಗ ಸೂರ್ಯ ನಗರಿ ಕಲಬುರಗಿಯಲ್ಲಿ ಕೊರೊನಾ ಸೋಂಕಿತ ವೃದ್ಧೆ ಕಾಲು‌ ಮುರಿದ ಹಿನ್ನೆಲೆಯಲ್ಲಿ ಅವರನ್ನು ಮನೆಯಿಂದ ಆಸ್ಪತ್ರೆಗೆ ಕರೆದ್ಯೊಯಲು ಆರೋಗ್ಯ ಇಲಾಖೆ ಸಿಬ್ಬಂದಿ ಹಿಂದೇಟು ಹಾಕಿ, ಸೋಂಕಿತ ವೃದ್ಧೆಯ ಮನೆಯವರೆಗೂ ಬಂದು ವಾಪಸ್ಸಾಗಿದ್ದಾರೆ.

ಮಂಗಳವಾರ ರಾತ್ರಿ ನಗರದ ಅತ್ತರ ಕೌಂಪೌಂಡ್ ನಲ್ಲಿ 70 ವರ್ಷದ‌ ಕೊರೊನಾ ಸೋಂಕಿತ ವೃದ್ಧೆಯನ್ನು ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್‌ ಬಂದಿತ್ತು.‌ ಸೋಂಕಿತ ವೃದ್ಧೆ 3ನೇ ಮಹಡಿಯಲ್ಲಿ ವಾಸವಾಗಿದ್ದರು. ಅಲ್ಲದೇ, ಅವರ ಕಾಲು ಮುರಿದಿದ್ದರಿಂದ ನಡೆದುಕೊಂಡು ಹೊರಬರುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಅಲ್ಲದೇ, ವೃದ್ಧೆ ಜತೆ ಮನೆಯಲ್ಲಿ ಇಬ್ಬರು ಮಹಿಳೆಯರು ಮಾತ್ರ ಇದ್ದರು. ಹೀಗಾಗಿ ಅವರಿಗೆ ವೃದ್ಧೆಯನ್ನು ಆ್ಯಂಬುಲೆನ್ಸ್ ವರೆಗೂ ಎತ್ತಿಕೊಂಡು ಬರುವುದಕ್ಕೆ ಸಾಧ್ಯವಾಗಲಿಲ್ಲ.

ಇಂತಹ ಸಂಕಷ್ಟ ಸ್ಥಿತಿಯನ್ನು ಕಣ್ಣಾರೆ ನೋಡುತ್ತಿದ್ದ ಆ್ಯಂಬುಲೆನ್ಸ್ ಸಿಬ್ಬಂದಿ ಮಾತ್ರ ಅವರ ಸಹಾಯಕ್ಕೆ ದೌಡಾಯಿಸಿಲ್ಲ. 

ತಾವು ವೃದ್ಧೆಯನ್ನು ಹೊತ್ತು ತಂದು ವಾಹನದಲ್ಲಿ ಕೂರಿಸಿದರೇ ಮಾತ್ರ ಕರೆದೊಯ್ಯುತ್ತೇವೆ. ಇಲ್ಲದಿದ್ದರೆ, ಕರೆದುಕೊಂಡು ಹೋಗುವುದಿಲ್ಲ ಎಂದು ಅಮಾನವೀಯವಾಗಿ ಪ್ರತಿಕ್ರಿಯಿಸಿದ್ದಾರೆ.

ನಂತರ‌ ಮನೆಯಲ್ಲಿದ್ದ ಇಬ್ಬರೂ ಮಹಿಳೆಯರಿಗೆ ಸೋಂಕಿತ ವೃದ್ಧೆಯನ್ನು ಮನೆಯಿಂದ ಹೊತ್ತು ತರಲು ಸಾಧ್ಯವಾಗಿಲ್ಲ. ಹೀಗಾಗಿ ವೃದ್ಧೆಯನ್ನು ಮನೆಯಲ್ಲೇ ಬಿಟ್ಟು ಸಿಬ್ಬಂದಿ ವಾಪಸ್ಸಾಗಿದ್ದಾರೆ. 

ಬೇಜವಾಬ್ದಾರಿ ಮೆರೆದ ಆರೋಗ್ಯ ಇಲಾಖೆಯ ಸಿಬ್ಬಂದಿಯ ಅಮಾನವೀಯ ನಡೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com