ಪೊಲೀಸರಿಗಾಗಿ ಪ್ರತ್ಯೇಕ ಕೋವಿಡ್ ಸೆಂಟರ್ ತೆರೆಯಲು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ

ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಪೊಲೀಸರಿಗೆ ಪ್ರತ್ಯೇಕ ಕೋವಿಡ್ ಸೆಂಟರ್ ತೆರೆಯುವಂತೆ ಸರ್ಕಾರಕ್ಕೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮನವಿ ಮಾಡಿಕೊಂಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಪೊಲೀಸರಿಗೆ ಪ್ರತ್ಯೇಕ ಕೋವಿಡ್ ಸೆಂಟರ್ ತೆರೆಯುವಂತೆ ಸರ್ಕಾರಕ್ಕೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮನವಿ ಮಾಡಿಕೊಂಡಿದ್ದಾರೆ. 

ಈ ಕುರಿತು ಡಿಜಿ ಹಾಗೂ ಡಿಐಜಿ ಪ್ರವೀಣ್ ಸೂದ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ನಗರದಲ್ಲಿ ಈ ವರೆಗೂ 400 ಪೊಲೀಸರಲ್ಲಿ ವೈರಸ್ ಪತ್ತೆಯಾಗಿದ್ದು, ಇದರಲ್ಲಿ 192 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಲ್ಲದೆ, ಮಹಾಮಾರಿ ವೈರಸ್'ಗೆ ಐವರು ಪೊಲೀಸರು ಬಲಿಯಾಗಿದ್ದಾರೆಂದು ತಿಳಿಸಿದ್ದಾರೆ. 

ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 50 ವರ್ಷಕ್ಕಿಂತ ಮೇಲ್ಪಟ್ಟ ಪೊಲೀಸರು ಹಾಗೂ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿಲ್ಲ. ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದಿದ್ದಾರೆ. 

ಕರ್ತವ್ಯನಿರತ ಪೊಲೀಸರಿಗೆ ಪಿಪಿಇ ಕಿಟ್ ಗಳು, ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಸರ್ ಗಳಿಗಾಗಿ ಸರ್ಕಾರ ಆರ್ಥಿಕ ಸಹಾಯ ಮಾಡಬೇಕು. ರಾಜ್ಯದ ಪೊಲೀಸರಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಪೊಲೀಸರನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಕಿದ್ವಾಯಿ ಮೆಮೋರಿಯಲ್ ಸಂಸ್ಥೆಯಲ್ಲಿ ಕೊರೋನಾ ಪರೀಕ್ಷೆಗೆ ವ್ಯವಸ್ಥೆಗಲನ್ನು ಮಾಡಲಾಗುತ್ತಿದೆ. ಪ್ರಯೋಗಾಲಯಗಳಲ್ಲಿ ಪರೀಕ್ಷೆಗೊಳಪಡುವ ಪೊಲೀಸರ ವರದಿ ಶೀಘ್ರಗತಿಯಲ್ಲಿ ಬರುವಂತೆ ಮಾಡಬೇಕು. ಸೂಕ್ತ ಸಮಯಕ್ಕೆ ಆಸ್ಪತ್ರೆಗಳಲ್ಲಿ ಪೊಲೀಸರಿಗೆ ಚಿಕಿತ್ಸೆ ದೊರೆಯುವಂತೆ ಮಾಡಬೇಕೆಂದು ತಿಳಿಸಿದ್ದಾರೆ. 

ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ 20 ಪೊಲೀಸ್ ಠಾಣೆಗಳನ್ನು ಈಗಾಗಲೇ ಸೀಲ್'ಡೌನ್ ಮಾಡರಲಾಗಿದೆ. ಎಲ್ಲಾ ಪೊಲೀಸ್ ಠಾಣೆಗಳಿಗೂ ಈಗಾಗಲೇ ನಾನು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕೆಲವು ಪೊಲೀಸ್ ಠಾಣೆಗಳನ್ನು ವಿಶ್ವಾಸದೊಂದಿಗೆ ಪುನರಾರಂಭಿಸಲಾಗಿದೆ. 

ಲಾಕ್ಡೌನ್ ಪರಿಣಾಮ ಸಾಕಷ್ಟು ಜನರು ಕೆಲಸಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿರುವುದರಿಂದ ಇದೀಗ ಅಪರಾಧ ಪ್ರಕರಣಗಳೂ ಕೂಡ ಹೆಚ್ಚಾಗತೊಡಗಿವೆ. ಪ್ರಸ್ತುತ ಸಿಬ್ಬಂದಿಗಳ ಕೊರತೆ ಎದುರಾಗಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಿದೆ. ನಗರದ 245 ಹೊಯ್ಸಳಗಳ ಪೈಕಿ ಈಗಾಗಲೇ ಕೊರೋನಾ ಸೋಂಕು ಪರಿಣಾಮ 36 ಹೊಯ್ಸಳಗಳ ಕಾರ್ಯ ಸ್ಥಗಿತಗೊಂಡಿದೆ. ಠಾಣೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪ್ರತೀನಿತ್ಯ ಸಿಬ್ಬಂದಿಗಳು ಹಾಗೂ ಠಾಣೆಗೆ ಬರುವ ಸಾರ್ವಜನಿಕರ ಜ್ವರ ಪರಿಶೀಲಿಸುವಂತೆ ಕಠಿಣ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com