ಗುತ್ತಿಗೆ ವೈದ್ಯರ ಖಾಯಂಗೆ ಸಂಪುಟ ಅಸ್ತು, ಕೊರೋನಾ ನಿಯಂತ್ರಣಕ್ಕಾಗಿ 207 ಕೋಟಿ ರೂ. ಬಿಡುಗಡೆ

ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಖಾಯಂಗೊಳಿಸುವ ವೇಳೆ ವೈದ್ಯರು ಸಲ್ಲಿಸಿರುವ ಸೇವಾ ಅವಧಿಯನ್ನು ಪರಿಗಣನೆ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಸಚಿವ ಮಾಧುಸ್ವಾಮಿ
ಸಚಿವ ಮಾಧುಸ್ವಾಮಿ

ಬೆಂಗಳೂರು: ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಖಾಯಂಗೊಳಿಸುವ ವೇಳೆ ವೈದ್ಯರು ಸಲ್ಲಿಸಿರುವ ಸೇವಾ ಅವಧಿಯನ್ನು ಪರಿಗಣನೆ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಆರು ತಿಂಗಳು ಸೇವಾ ಅವಧಿಗೆ 2.5 ಗ್ರೇಸ್ ಮಾರ್ಕ್ ನೀಡಲು ನಿರ್ಧರಿಸಲಾಗಿದೆ. ಗರಿಷ್ಠ 30 ಅಂಕಗಳನ್ನು ನೀಡುವುದಲ್ಲದೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಅಡಿಯಲ್ಲಿ ವಯೋಮಿತಿಯನ್ನು 21 ವರ್ಷದಿಂದ 26 ವರ್ಷಕ್ಕೆ ಏರಿಸಲಾಗಿದೆ ಎಂದು ಅವರು ಹೇಳಿದರು.

ಹೂಡಿಕೆದಾರರಿಗೆ ಪ್ರೋತ್ಸಾಹ ನೀಡಲು ಖಾಸಗಿ ಸಂಸ್ಥೆ ಸೇವೆಯನ್ನು ಬಳಸಿ ಕೊಳ್ಳಲು ತೀರ್ಮಾನಿಸಿದ್ದು, ಬೋಸ್ಟನ್‌ ಕನ್ಸ್‌ಲೆಂಟ್ ಅಂತರಾಷ್ಟ್ರೀಯ ಸಂಸ್ಥೆಗೆ ಒಂದು ವರ್ಷಕ್ಕೆ ಗುತ್ತಿಗೆ ಮುಂದುವರೆಸಲಾಗಿದೆ. ಇದಕ್ಕೆ 12 ಕೋಟಿ ರೂಪಾಯಿ ಸೇವಾ ಶುಲ್ಕ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದನ್ನು ಹಣಕಾಸು ಇಲಾಖೆ ಶಿಫಾರಸ್ಸು ಮಾಡಿದೆ ಎಂದರು. 

ಇನ್ನು 5 ವಿದ್ಯುತ್ ಸರಬರಾಜು ಕಂಪನಿಗಳಿಗೆ 2500 ಕೋಟಿ ರೂಪಾಯಿಗಳನ್ನು ಬಡ್ಡಿರಹಿತ ಸಾಲದ ರೂಪದಲ್ಲಿ ನೀಡಲು ಸಂಪಟು ಒಪ್ಪಿಗೆ ನೀಡಿದ್ದು, ಕರ್ನಾಟಕ ವಿದ್ಯುತ್ ಕಾರ್ಖಾನೆ ಮತ್ತು ಮೈಸೂರು ಎಲೆಕ್ಟ್ರಿಕಲ್ ಎರಡು ಕೈಗಾರಿಕೆಗಳು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿತ್ತು. ಈ ಕಾರ್ಖಾನೆಗಳನ್ನು ಮುಂದಿನ ದಿನಗಳಲ್ಲಿ ಇಂಧನ ಇಲಾಖೆಯ ವ್ಯಾಪ್ತಿಗೆ ತರಲು ನಿರ್ಧರಿಸಿದ್ದೇವೆ ಎಂದು ಅವರು ವಿವರಿಸಿದರು.

ಕೋವಿಡ್ ನಿಂದ ಸಮಸ್ಯೆಗೊಳಗಾದವರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಆಪತ್ಕಾಲಿನ ನಿಧಿ(ಸಾಧಿಲ್ವಾರು ನಿಧಿ) 50 ಕೋಟಿ ರೂ. ಗಳಿಂದ 500 ಕೋಟಿ ರೂ.ಗೆ ಹೆಚ್ಚಳ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನವಾಗಿದೆ. ಇದಕ್ಕಾಗಿ ಸಾಧಿಲ್ವಾರು ಕಾಯ್ದೆಗೆ ಸುಗ್ರೀವಾಜ್ಞೆಯನ್ನು ತಂದಿದ್ದೇವೆ ಎಂದು ಹೇಳಿದರು. 

ಕೊರೋನಾ ನಿಯಂತ್ರಣಕ್ಕಾಗಿ ಜಿಲ್ಲಾ, ತಾಲೂಕು ಆಸ್ಪತ್ರೆಗಳಿಗೆ ಹೈ ಫ್ಲೋ ಆಕ್ಸಿಜನ್ ಸಿಸ್ಟಮ್, ಬೆಡ್ ವ್ಯವಸ್ಥೆಗೆ ಹಣ ಮಂಜೂರು ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಗಳಿಗೆ 207 ಕೋಟಿ ರೂ. ಹಾಗೂ ತುರ್ತು ಕೆಲಸಗಳಿಗೆ 95 ಕೋಟಿ ಹಣ ಬಿಡುಗಡೆಗೆ ಸಂಪುಟ ಅನುಮೋದನೆ ನೀಡಿದೆ ಎಂದರು.

ವಿಜಯಪುರದಲ್ಲಿ ವಿಮಾನ ನಿಲ್ದಾಣಕ್ಕೆ ರೂ. 220 ಕೋಟಿ ಅನುದಾನ ಮೀಸಲಿಡಲಾಗಿದೆ. ಎರಡು ಹಂತದಲ್ಲಿ ಹಣ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದ್ದು ಮೊದಲ ಹಂತದಲ್ಲಿ ರೂ. 95 ಕೋಟಿ ಹಣ ಬಿಡುಗಡೆ ಮಾಡಲಾಗುವುದು. ರಾಜ್ಯದ ಎಪಿಎಂಸಿ ಗಳಲ್ಲಿ ಇದುವರೆಗೂ ಶೇ.1.5% ಸೆಸ್ ಸಂಗ್ರಹ ಮಾಡಲಾಗುತ್ತಿತ್ತು. ಅದನ್ನು ಈಗ ಶೇ.1% ಗೆ ಇಳಿಕೆ ಮಾಡಲಾಗಿದೆ. ಈ ಸಂಬಂಧ ಕಾಯ್ದೆಗಳಿಗೆ ತಿದ್ದುಪಡಿ ತರಲಾಗುವುದು ಎಂದು ಅವರು ತಿಳಿಸಿದರು.

ಕೆಪಿಎಸ್ ಸಿ ಸದಸ್ಯ ಲಕ್ಷ್ಮೀನರಸಯ್ಯ ಅವರು ಜುಲೈ 13 ರಂದು ನಿವೃತ್ತಿಯಾಗಲಿದ್ದು, ಖಾಲಿ ಹುದ್ದೆ ತುಂಬಲು ಮುಖ್ಯಮಂತ್ರಿ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ರಾಯಚೂರಿನಲ್ಲಿ ಐಐಟಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ನಾಲ್ಕು ವರ್ಷಗಳಲ್ಲಿ 44 ಕೋಟಿ ರೂ. ಒದಗಿಸಲು ಕ್ರಮ ಕೈಗೊಳ್ಳಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದರು.

ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ
ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಪ್ರಾಥಮಿಕ ವಿಚಾರಣೆಯನ್ನು 90 ದಿನದಲ್ಲಿ ಮುಗಿಸಬೇಕು. ಆರು ತಿಂಗಳ ಒಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು. ಎರಡನ್ನು ಕಡ್ಡಾಯಗೊಳಿಸಿ ಲೋಕಾಯುಕ್ತ ಕಾಯ್ದೆ ಸೆಕ್ಷನ್ 9ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com