ಒಂದೆಡೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ; ಇನ್ನೊಂದೆಡೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವೈದ್ಯರು, ದಾದಿಯರ ಕೊರತೆ!

ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಹಲವು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸಿಬ್ಬಂದಿ ಕೊರತೆಯನ್ನು ಅನುಭವಿಸುತ್ತಿವೆ. ಇದರ ಮಧ್ಯೆ ವೈದ್ಯರು, ನರ್ಸ್ ಗಳು, ಪ್ರಯೋಗಾಲಯ ತಂತ್ರಜ್ಞರು ಮತ್ತು ಇತರ ಸಿಬ್ಬಂದಿಯನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಹಲವು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸಿಬ್ಬಂದಿ ಕೊರತೆಯನ್ನು ಅನುಭವಿಸುತ್ತಿವೆ. ಇದರ ಮಧ್ಯೆ ವೈದ್ಯರು, ನರ್ಸ್ ಗಳು, ಪ್ರಯೋಗಾಲಯ ತಂತ್ರಜ್ಞರು ಮತ್ತು ಇತರ ಸಿಬ್ಬಂದಿಯನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಆದರೆ ಆಸ್ಪತ್ರೆಗಳಲ್ಲಿ ಹಲವು ಸೌಕರ್ಯ, ಸೌಲಭ್ಯಗಳನ್ನು ನೀಡಿದರೂ ವೈದ್ಯರು, ದಾದಿಯರು ಕರ್ತವ್ಯಕ್ಕೆ ಬರುತ್ತಿಲ್ಲ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕರ್ನಾಟಕ ವೈದ್ಯಕೀಯ ಮಂಡಳಿಯ ಅಂದಾಜು ಪ್ರಕಾರ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಮತ್ತು ತಾಂತ್ರಿಕ ವರ್ಗಗಗಳ ಶೇಕಡಾ 40ರಿಂದ 50ರಷ್ಟು ಕೊರತೆಯಿದೆ.

ರಾಜ್ಯ ಕೋವಿಡ್ ತಾಂತ್ರಿಕ ಸಮಿತಿಯ ಮೂಲಗಳ ಪ್ರಕಾರ, ಆರೋಗ್ಯ ವಲಯ ಸಿಬ್ಬಂದಿಯ ಕೊರತೆ ಅದರಲ್ಲೂ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ತೀವ್ರವಾಗಿ ಕಾಡುತ್ತಿದ್ದು ಹಲವರು ಹೋಂ ಐಸೊಲೇಷನ್ ಗೊಳಗಾಗಿದ್ದಾರೆ. ಬೆಂಗಳೂರಿನ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ 7 ಮಂದಿ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಇತರ ಸಿಬ್ಬಂದಿಗೆ ಆತಂಕ ಎದುರಾಗಿದೆ. ಹಲವು ಗ್ರೂಪ್ ಡಿ ಸಿಬ್ಬಂದಿ ಮತ್ತು ನರ್ಸ್ ಗಳು ರಜೆಯ ಮೇಲೆ ತೆರಳಿದ್ದಾರೆ.

ಈ ಪರಿಸ್ಥಿತಿಯಲ್ಲಿ ಯಾರೂ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಆರೋಗ್ಯ ವಲಯ ಕಾರ್ಯಕರ್ತರಲ್ಲಿ ಕೆಲವರಿಗೆ ಸೋಂಕು ತಗಲಿದೆ. ಸಿಬ್ಬಂದಿ ನಿಜಕ್ಕೂ ಆತಂಕಕ್ಕೀಡಾಗಿದ್ದಾರೆ. ಜುಲೈ 4ರಿಂದೀಚೆಗೆ ನಾವು ವಾಕ್ ಇನ್ ಸಂದರ್ಶನ ನಡೆಸುತ್ತಿದ್ದು ಇಬ್ಬರು ವಿಶೇಷ ತಜ್ಞರು, ನಾಲ್ಕು ನರ್ಸ್ ಗಳು ಮತ್ತು 5 ಗ್ರೂಪ್ ಡಿ ನೌಕರರ ಹುದ್ದೆಗೆ ಸಂದರ್ಶನಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು, ನರ್ಸ್ ಗಳು ಮತ್ತು ಇತರ ಸಿಬ್ಬಂದಿಗಳು ಬೇಕು. ಆದರೆ ಕರ್ತವ್ಯ ನಿರ್ವಹಿಸಲು ಯಾರೂ ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಹಿರಿಯ ವೈದ್ಯರೊಬ್ಬರು.

ಜಿಗಣಿಯಲ್ಲಿರುವ ಏಸ್ ಸುಹಾಸ್ ಆಸ್ಪತ್ರೆಯ ಡಾ ಜಗದೀಶ್ ಹೀರೇಮಠ್, ಮಾರ್ಚ್ ತಿಂಗಳಲ್ಲಿ ಕೋವಿಡ್-19 ಕೆಲಸಕ್ಕೆ ನಮ್ಮಲ್ಲಿ 60 ಮಂದಿ ಸಿಬ್ಬಂದಿಯಿದ್ದರು. ಆದರೆ ಈಗ 28 ಮಂದಿಯಿದ್ದಾರಷ್ಟೆ. ಇಷ್ಟು ಸಿಬ್ಬಂದಿಯಿಟ್ಟುಕೊಂಡು ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳುವುದು ಹೇಗೆ? ಇರುವ ಸಿಬ್ಬಂದಿ ಬೇರೆ ವಾರ್ಡ್ ಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ದರಿದ್ದಾರೆ ಹೊರತು ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳಲು ಸಿದ್ದರಿಲ್ಲ. ವೇತನ ಜೊತೆಗೆ ಶೇಕಡಾ 100ರಷ್ಟು ಅಪಾಯ ಭತ್ಯೆ ನೀಡಿದರೂ ಮುಂದೆ ಬರುತ್ತಿಲ್ಲ ಎಂದು ಕಷ್ಟ ತೋಡಿಕೊಂಡರು.

ವೈದ್ಯಕೀಯ ಕಾಲೇಜುಗಳಿಂದ ಅಂತಿಮ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ಕೆಲಸಕ್ಕೆ ನೇಮಕ ಮಾಡಲಿ ಸರ್ಕಾರ ಎಂದು ಆಸ್ಪತ್ರೆಗಳ ವ್ಯವಸ್ಥಾಪಕ ಮಂಡಳಿ ಮತ್ತು ಹಿರಿಯ ವೈದ್ಯರು ಒತ್ತಾಯಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com