ವೈದ್ಯಕೀಯ ವಿಮೆ ಇದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಐಐಎಸ್ ಸಿ ಕ್ಯಾಂಪಸ್ ಪ್ರವೇಶ!

ಮಾರಕ ಕೊರೋನಾ ವೈರಸ್ ನಿಂದಾಗಿ ಸ್ಥಗಿತವಾಗಿದ್ದ ಭಾರತೀಯ ವಿಜ್ಞಾನ ಸಂಸ್ಥೆ(IISc) ಕೊನೆಗೂ ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ನಿರ್ಧರಿಸಿದೆ. ಆದರೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಐಐಎಸ್ ಸಿ ಕೆಲ ಷರತ್ತುಗಳನ್ನು ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರಕ ಕೊರೋನಾ ವೈರಸ್ ನಿಂದಾಗಿ ಸ್ಥಗಿತವಾಗಿದ್ದ ಭಾರತೀಯ ವಿಜ್ಞಾನ ಸಂಸ್ಥೆ(IISc) ಕೊನೆಗೂ ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ನಿರ್ಧರಿಸಿದೆ. ಆದರೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಐಐಎಸ್ ಸಿ ಕೆಲ ಷರತ್ತುಗಳನ್ನು ವಿಧಿಸಿದೆ.

ಹೌದು.. ಮಾರಕ ಕೊರೋನಾ ವೈರಸ್ ಹಾವಳಿಯಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳು ಮಾತ್ರವಲ್ಲದೇ ಶೈಕ್ಷಣಿಕ ಚಟುವಟಿಕೆಗಳೂ ಕೂಡ ಸ್ಥಗಿತವಾಗಿದ್ದು, ಸೋಂಕು ಪ್ರಸರಿಸುವ ಭೀತಿ ಎಲ್ಲರನ್ನೂ ಭಯಭೀತಗೊಳಿಸಿದೆ. ಏತನ್ಮಧ್ಯೆ IISc ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವ ಕುರಿತು ಸಾಕಷ್ಟು ಯೋಚಿಸಿ, ತಜ್ಞರೊಂದಿಗೆ ಚರ್ಚಿಸಿ ಇದೀಗ ಕೊನೆಗೂ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ತೆರೆಯಲು ನಿರ್ಧರಿಸಿದೆ. 

ಐಐಎಸ್ಸಿ ಕ್ಯಾಂಪಸ್ ತೆರೆಯಲು ವಿದ್ಯಾರ್ಥಿಗಳಿಗೆ IISc ಆಡಳಿತ ಮಂಡಳಿ ಕೆಲ ಷರತ್ತುಗಳನ್ನು ವಿಧಿಸಿದ್ದು, ಈ ಷರತ್ತುಗಳ ಪೈಕಿ ವಿದ್ಯಾರ್ಥಿಗಳ ಆರೋಗ್ಯ ವಿಮೆ ಕೂಡ ಸೇರಿದೆ.

ಜೂನ್ 29ರಂದು ಕೈಗೊಂಡ ನಿರ್ಣಯಗಳಂತೆ, ಕುಟುಂಬದಲ್ಲಿ ಯಾರಿಗೇ ಕೊರೋನಾ ಪಾಸಿಟಿವ್ ಬಂದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ರವೇಶ ಕಡ್ಡಾಯ ನಿಷಿದ್ಧ ಎನ್ನಲಾಗಿದೆ. ಇದೀಗ ಹಿರಿಯ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಅವಕಾಶ ನೀಡಿದ್ದು, ಇದಕ್ಕಾಗಿ ವಿದ್ಯಾರ್ಥಿಗಳು ವೈದ್ಯಕೀಯ ವಿಮೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ. ಇದಕ್ಕಾಗಿ ಆಡಳಿತ ಮಂಡಳಿಯೇ ವಿದ್ಯಾರ್ಥಿಗಳಿಗೆ ಸಮೂಹ ವೈದ್ಯಕೀಯ ವಿಮೆ ಸೌಲಭ್ಯ ನೀಡುತ್ತಿದ್ದು, ಈ ಸಂಬಂಧ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರಾಧ್ಯಾಪಕರೊಂದಿಗೆ ಚರ್ಚಿಸಿ ಕ್ಯಾಂಪಸ್ ಗೆ ವಾಪಸ್ ಆಗುವ ದಿನಾಂಕ ತಿಳಿಸಬೇಕು ಎಂದು ಹೇಳಿದೆ.

ಆಡಳಿತ ಮಂಡಳಿಯ ಷರತ್ತು ಪಾಲಿಸದ ವಿದ್ಯಾರ್ಥಿಗಳಿಗೆ ಪ್ರವೇಶ ನಿಷಿದ್ಧಗೊಳಿಸಲಾಗಿದ್ದು, ಅಂತಹ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಲ್ಲಿ ಯಾವುದೇ ಕೊಠಡಿ ವ್ಯವಸ್ಥೆ ಇರುವುದಿಲ್ಲ. ಕ್ಯಾಂಪಸ್ ನಿಂದ ಹೊರಗೆ ಇರುವ ಪಿಜಿಗಳಲ್ಲಿ ವಿದ್ಯಾರ್ಥಿಗಳೇ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಂಸ್ಥೆ ಹೇಳಿದೆ. ಅಂತೆಯೇ ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದರೆ ಅಂತಹ ವಿದ್ಯಾರ್ಥಿಗಳು ಮತ್ತು ಅವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲು ಕ್ಯಾಂಪಸ್ ನ ಹಾಸ್ಟೆಲ್ ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆಯಾಗಬಹುದು. ಈ ಬಗ್ಗೆ ಪ್ರಾಧ್ಯಾಪಕರಲ್ಲಿ ಮಾಹಿತಿ ಪಡೆಯಬೇಕು ಎಂದು ಐಐಎಸ್ಸಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com