ಆಧುನಿಕ ಭಗೀರಥ ಕಾಮೇಗೌಡರಿಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು!

ಆಧುನಿಕ ಭಗೀರಥನೆಂಬ ಖ್ಯಾತಿಯ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಕಾಮೇಗೌಡರು ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಮೇಗೌಡ
ಕಾಮೇಗೌಡ

ಮಂಡ್ಯ: ಆಧುನಿಕ ಭಗೀರಥನೆಂಬ ಖ್ಯಾತಿಯ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಕಾಮೇಗೌಡರು ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಹಿಂದಿನಿಂದಲೂ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಾಮೇಗೌಡರ  ಬಲಗಾಲಿನಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ಗುರುವಾರ  ಸಂಜೆ ದಾಖಲಾಗಿದ್ದಾರೆ.
 

ಡಿಹೆಚ್ಓ, ತಹಸೀಲ್ದಾರ್ ಭೇಟಿ:
ಅನಾರೋಗ್ಯದಿಂದ ಕಾಮೇಗೌಡರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಪಿ.ಮಂಚೇಗೌಡ,ತಾಲ್ಲೂಕು ತಹಸೀಲ್ದಾರ್,ಇಓ ಸೇರಿದಂತೆ ಅಧಿಕಾರಿಗಳ ದಂಡೇ ಆಸ್ಪತ್ರೆಗೆ ನೀಡಿ ಕಾಮೇಗೌಡರ ಆರೋಗ್ಯ ವಿಚಾರಿಸಿದರು.

ವೈದ್ಯರು ಮತ್ತು ಕಾಮೇಗೌಡರ ಅಭಿಪ್ರಾಯ ಸಂಗ್ರಹಿಸಿ,ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದು ಅಗತ್ಯಬಿದ್ದರೆ,ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಉತ್ತಮ ಚಿಕಿತ್ಸೆಕೊಡಿಸುವುದಕ್ಕೂ ಚಿಂತನೆ ನಡೆಸಲಾಗಿದೆ.

ಕಾಮೇಗೌಡರು ಕುರಿ ಕಾಯುತ್ತಲೇ ಸ್ವಂತ ಹಣದಿಂದ ಸುಮಾರು ೧೬ ಕೆರೆ ನಿರ್ಮಿಸುವ ಮೂಲಕ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ನಲ್ಲಿ  ಪ್ರಶಂಸೆಗೆ ಒಳಗಾಗಿ ಇಡೀ ದೇಶ ಮಾತ್ರವಲ್ಲ ವಿಶ್ವದಲ್ಲೇ ಹೆಸರುವಾಸಿಯಾಗಿದ್ದರು.

ಕೆರೆ ಮಾತ್ರವಲ್ಲದೆ ನೂರಾರು ಮರಗಿಡ ಬೆಳೆಸುವ ಮೂಲಕ ಪರಿಸರ ಕಾಳಜಿ ಮೆರೆದಿದ್ದ ಕಾಮೇಗೌಡರ ಸಾಮಾಜಿಕ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ ಬಳಿಕ ಅಭಿನಂದನೆಯ ಮಹಾಪೂರವೇ ಹರಿದುಬಂದಿತ್ತು. ವಾರದ ಹಿಂದೆಯಷ್ಟೇ ವಿಶೇಷ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಜೀವಿತಾವಧಿಯವರೆಗೆ ರಾಜ್ಯ ಸರ್ಕಾರ ಉಚಿತ ಬಸ್ ಪಾಸ್  ನೀಡಿ ಗೌರವ ಸೂಚಿಸಿತ್ತು.

ಜಿಲ್ಲಾಡಳಿತ ಕೂಡ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ನೇತೃತ್ವದಲ್ಲಿ ಗೌರವ ಸಲ್ಲಿಸುವುದರ ಜೊತೆಗೆ ಕಾಮೇಗೌಡರ ಬೇಡಿಕೆಯಂತೆಯೇ, ಅವರ ಮಗನಿಗೆ ಉದ್ಯೋಗ,ಮನೆ ಕಟ್ಟಿಸಿಕೊಡುವುದು ಹಾಗೂ ಪಿಂಚಣಿ ಸೌಲಭ್ಯವನ್ನು ಕಲ್ಪಿಸಿಕೊಡುವುದಾಗಿ ಘೋಷಿಸಲಾಗಿತ್ತು.

ಆದರೆ, ಈ ನಡುವೆಯೇ ಕಾಮೇಗೌಡರು ದಿಢೀರ್ ಆನಾರೋಗ್ಯಕ್ಕೆ ತುತ್ತಾಗಿರುವುದು ದುರಾದೃಷ್ಠಕರ ಸಂಗತಿಯಾಗಿದೆ. ಏನೇ ಆಗಲಿ ಕೆರೆ ನಿರ್ಮಾಣದ ಕಾಮೇಗೌಡರು ಬೇಗಗುಣಮುಖರಾಗಲಿ ಅನ್ನೋದು ಎಲ್ಲರ ಹಾರೈಕೆಯಾಗಿದೆ.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com