ಆರೋಗ್ಯ ಸಿಬ್ಬಂದಿಗಳ ಕೊರತೆ, ಕೊರೋನಾ ವಿರುದ್ಧದ ರಾಜ್ಯದ ಹೋರಾಟಕ್ಕೆ ಹಿನ್ನಡೆ?

ಕೊರೋನಾ ವಿರುದ್ಧ ರಾಜ್ಯ ಸರ್ಕಾರ ದಿಟ್ಟ ಹೋರಾಟ ನಡೆಸುತ್ತಿರುವ ನಡುವಲ್ಲೇ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸಿಬ್ಬಂದಿಗಳ ಕೊರತೆ ಎದುರಾಗಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವಿರುದ್ಧ ರಾಜ್ಯ ಸರ್ಕಾರ ದಿಟ್ಟ ಹೋರಾಟ ನಡೆಸುತ್ತಿರುವ ನಡುವಲ್ಲೇ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸಿಬ್ಬಂದಿಗಳ ಕೊರತೆ ಎದುರಾಗಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ. 

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಪ್ರಕಾರ 58,961 ಖಾಲಿಯಿರುವ ಹುದ್ದೆಗಳ ಪೈಕಿ ಈ ವರೆಗೂ 26,265 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಇನ್ನೂ 3,227 ಹುದ್ದೆಗಳು, ತಾಲೂಕು ಆಸ್ಪತ್ರೆಗಳಲ್ಲಿ 5,853 ಹುದ್ದೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 4,061 ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 11,854 ಹುದ್ದೆಗಳು ಖಾಲಿ ಇವೆ ಎಂದು ತಿಳಿದುಬಂದಿದೆ. 

ರಾಜ್ಯ ಆರೋಗ್ಯ ಇಲಾಖೆಯ ಗ್ರೂಪ್ ಸಿ (10,025), ಗ್ರೂಪ್ ಡಿ (12,054)ಯಲ್ಲಿ ಬರುವ ಸಿಬ್ಬಂದಿಗಳು, ಲ್ಯಾಬ್ ಟೆಕ್ನಿಷಿಯನ್ಸ್, ಪ್ಯಾರಾಮೆಡಿಕ್ಸ್, ಫಾರ್ಮಸಿಸ್ಟ್, ಕ್ಲಿರಿಕಲ್ ಸಿಬ್ಬಂದಿ, ದ್ವಾರಪಾಲಕರು, ಗುಮಾಸ್ತರು ಹಾಗೂ ಆ್ಯಂಬುಲೆನ್ಸ್ ಚಾಲಕ ಹುದ್ದೆಗಳು ಖಾಲಿಯಿವೆ. 

ಹುದ್ದೆಗಳು ಖಾಲಿಯಿದ್ದರು, ಭೀತಿಯಿಂದಾಗಿ ಜನರು ಕೆಲಸ ಮಾಡಲು ಮುಂದಕ್ಕೆ ಬರುತ್ತಿಲ್ಲ. ಕೆಲವರು ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ಈ ನಡುವಲ್ಲೇ ಆರೋಗ್ಯ ಸಿಬ್ಬಂದಿಗಳ ಕೊರತೆ ಎದುರಾಗಿದೆ. 

ಎಂಬಿಬಿಎಸ್ ಕೋರ್ಸ್ ನಲ್ಲಿ ಸಾಮಾನ್ಯ ವಿಷಯಗಳನ್ನು ಅಧ್ಯಯನ ಮಾಡಿದ್ದು, ಸಾಂಕ್ರಾಮಿಕ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಮುಂದೆ ಬರುವಂತೆ ದಂತ ವೈದ್ಯರು ಹಾಗೂ ಆಯುರ್ವೇದ ವೈದ್ಯರ ಬಳಿ ಮನವಿ ಮಾಡಿಕೊಳ್ಳಲಾಗುತ್ತಿದೆ ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಸರ್ಕಾರ ಮನವಿ ಮಾಡಿಕೊಂಡರೂ ಕೂಡ ಪ್ರತಿಕ್ರಿಯೆಗಳು ಕಡಿಮೆಯಾಗಿವೆ ಎಂದು ಮೂಲಗಳು ತಿಳಿಸಿವೆ. 

ಕೋರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಕೆ.ಆರ್.ಪುರಂನಲ್ಲಿರುವ ಖಾಸಗಿ ಆಸ್ಪತ್ರೆಯೊಂದು ನಿರ್ಧಾರ ಕೈಗೊಳ್ಳುತ್ತಿದ್ದಂತೆಯೇ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ವೈದ್ಯರು ರಾಜೀನಾಮೆ ನೀಡಿದ್ದಾರೆ. ಮನೆಯಲ್ಲಿ ಮಕ್ಕಳಿದ್ದಾರೆ. ವಯಸ್ಸಾದ ತಂದೆ ತಾಯಿಯಿದ್ದಾರೆಂದು ಕಾರಣ ನೀಡಿದ್ದಾರೆ. ಶೇ.50ರಷ್ಟು ವಾರ್ಡ್ ಬಾಯ್ಸ್ ಗಳ ಕೊರತೆ ಕೂಡ ಎದುರಾಗಿದೆ. ನರ್ಸ್ ಗಳ ಕೊರತೆ ಶೇ.30ರಷ್ಟು ಎದುರಾಗಿದೆ. ದುಪ್ಪಟ್ಟು ವೇತನ ನೀಡುತ್ತೇವೆಂದರೂ ಕೆಲಸಕ್ಕೆ ಬರುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ.ಆರ್.ರವೀಂದ್ರ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com