ಮಂಡ್ಯ: ಐಟಿ ವೃತ್ತಿ ಬಿಟ್ಟು ರಸ್ತೆಬದಿ ತರಕಾರಿ ಮಾರಿ ಕುಟುಂಬಕ್ಕೆ ಆಧಾರವಾಗಿರುವ ಯುವತಿ!

ಕೊರೋನಾ ಲಾಕ್ ಡೌನ್ ನಂತರ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಗಳು ಮನೆಯಿಂದಲೇ ಕಚೇರಿ ಕೆಲಸ ಮಾಡುವ ಆಯ್ಕೆಯನ್ನು ಪಡೆದುಕೊಳ್ಳುತ್ತಾರೆ. ಬಹುತೇಕ ಮಂದಿ ಕಚೇರಿ ಕೆಲಸ ಮಾಡಿ ತಮ್ಮ ಮನೆಯ ಕೆಲಸ ಮಾಡಿಕೊಂಡು ತಿಂಗಳ ಕೊನೆಗೆ ಕೈತುಂಬಾ ಸಂಬಳ ಪಡೆದು ಆರಾಮಾಗಿರುತ್ತಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಲಾಕ್ ಡೌನ್ ನಂತರ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಗಳು ಮನೆಯಿಂದಲೇ ಕಚೇರಿ ಕೆಲಸ ಮಾಡುವ ಆಯ್ಕೆಯನ್ನು ಪಡೆದುಕೊಳ್ಳುತ್ತಾರೆ. ಬಹುತೇಕ ಮಂದಿ ಕಚೇರಿ ಕೆಲಸ ಮಾಡಿ ತಮ್ಮ ಮನೆಯ ಕೆಲಸ ಮಾಡಿಕೊಂಡು ತಿಂಗಳ ಕೊನೆಗೆ ಕೈತುಂಬಾ ಸಂಬಳ ಪಡೆದು ಆರಾಮಾಗಿರುತ್ತಾರೆ.

ಆದರೆ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಟೆಕ್ಕಿ ಯುವತಿ ಈಗ ತರಕಾರಿ ಮಾರಾಟ ಮಾಡಿ ತಮ್ಮ ಅನಾರೋಗ್ಯ ತಾಯಿಗೆ ಸಹಾಯ ಮಾಡುತ್ತಿದ್ದಾರೆ ಎಂದರೆ ನಂಬುತ್ತೀರಾ? ಹೌದು, ಲ್ಯಾಪ್ ಟಾಪ್ ಮುಂದೆ ಕುಳಿತು ಆನ್ ಲೈನ್ ನಲ್ಲಿ ಕೆಲಸ ಮಾಡುವುದರ ಬದಲಿಗೆ, ಎಸಿ ರೂಂನಲ್ಲಿ ಕೂರುವ ಬದಲು ರಸ್ತೆಬದಿಗೆ ಯುವತಿ ಕೆಲಸ ವರ್ಗವಾಗಿದೆ. ಕೆಲಸದಲ್ಲಿ ಮೇಲು,ಕೀಳು ಎಂಬುದಿಲ್ಲ, ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಮುಖ್ಯ ಎಂಬುದು ಈ 25 ವರ್ಷದ ಯುವತಿಯ ದೃಢ ನಿಲುವು.

ಅನುಕುಮಾರಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಪದವೀಧರೆ, ಕಳೆದ ಫೆಬ್ರವರಿಯವರೆಗೆ ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಉತ್ತಮ ವೇತನ ಪಡೆಯುತ್ತಿದ್ದರು, ಈ ಸಮಯದಲ್ಲಿ ಮಂಡ್ಯದಲ್ಲಿದ್ದ ತಮ್ಮ ತಾಯಿಗೆ ಅನಾರೋಗ್ಯ ಉಂಟಾಯಿತು ಎಂದು ಊರಿಗೆ ಹೋದರು. ಸ್ವಲ್ಪ ದಿನ ಕಳೆದ ನಂತರ ಮತ್ತೆ ಉದ್ಯೋಗಕ್ಕೆ ಬೆಂಗಳೂರಿಗೆ ಬರಬೇಕಾಗಿತ್ತು, ಆದರೆ ಆ ಸಮಯದಲ್ಲಿ ಕೊರೋನಾ ಬಂದು ಲಾಕ್ ಡೌನ್ ಘೋಷಣೆಯಾಯಿತು. ಐಟಿ ಮಾರುಕಟ್ಟೆ ಉದ್ಯಮ ಕೂಡ ಕುಸಿಯಿತು.

ಅನುವಿನ ತಂದೆ ವೀರೇಂದ್ರ ಸಿಂಗ್ ಸಣ್ಣ ಪಾನಿಪುರಿ ಅಂಗಡಿ ನಡೆಸುತ್ತಿದ್ದರು. ತಾಯಿ ರಸ್ತೆ ಬದಿ ತರಕಾರಿ ಮಾರಾಟ ಮಾಡುತ್ತಿದ್ದರು. ಆಕೆಯ ಸೋದರಿ ಓದುತ್ತಿದ್ದಾಳೆ. ಮನೆಯ ಪರಿಸ್ಥಿತಿ ಕಂಡು ಅನುಕುಮಾರಿ ಬೇರೆ ಯೋಚನೆ ಮಾಡದೆ ಆ ಸಮಯದಲ್ಲಿ ಮನೆಯವರ ಬೆಂಬಲಕ್ಕೆ ನಿಲ್ಲಲು ಯೋಚಿಸಿದಳು. ತಾಯಿಗೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು.

ಸಾಫ್ಟ್ ವೇರ್ ಎಂಜಿನಿಯರ್ ಕೆಲಸದಿಂದ ಅನುವಿನ ಕೆಲಸ ಮಾರ್ಚ್ ತಿಂಗಳಲ್ಲಿ ತರಕಾರಿ ಮಾರುವುದಕ್ಕೆ ವರ್ಗವಾಯಿತು. ಪ್ರತಿದಿನ ಬೆಳಗ್ಗೆ ಅನು ಮತ್ತು ಅವಳ ತಂದೆ 3.30ಕ್ಕೆ ಏಳುತ್ತಾರೆ. ಮಂಡ್ಯ ಮಾರುಕಟ್ಟೆಗೆ ಹೋಗಿ ತರಕಾರಿ ಖರೀದಿಸಿ ತರುತ್ತಾರೆ. 5.30ಕ್ಕೆ ಮನೆಗೆ ಹಿಂತಿರುಗುತ್ತಾರೆ. ಬೆಳಗ್ಗೆ 7 ಗಂಟೆ ಹೊತ್ತಿಗೆ ಚಾಮುಂಡೇಶ್ವರಿ ನಗರದಲ್ಲಿ ರಸ್ತೆಬದಿ ತರಕಾರಿಯನ್ನು ಹರಡಿ ಕುಳಿತು ಮಾರಾಟ ಮಾಡಲು ಆರಂಭಿಸುತ್ತಾರೆ.

ನಾನು ತರಕಾರಿ ಮಾರುವಾಗ ತಂದೆ ಮತ್ತು ಸೋದರಿ ಮನೆಯನ್ನು ನೋಡಿಕೊಳ್ಳುತ್ತಾರೆ. ಬೆಳಗ್ಗೆ 8 ಗಂಟೆಯವರೆಗೆ ತರಕಾರಿ ಮಾರಿ ನಂತರ ಮನೆಗೆ ಹೋಗುತ್ತೇನೆ. ಪ್ರತಿದಿನ ಸುಮಾರು ಸಾವಿರ ರೂಪಾಯಿ ತರಕಾರಿ ಮಾರಾಟದಿಂದ ಲಾಭ ಬರುತ್ತದೆ.ಅದನ್ನು ತಾಯಿಯ ಔಷಧೋಪಚಾರ ಖರ್ಚಿಗೆ ಬಳಸುತ್ತೇವೆ. ಮೈಸೂರಿನಲ್ಲಿ ಆಸ್ಪತ್ರೆಗೆ ತಾಯಿಯನ್ನು ಕರೆದುಕೊಂಡು ಹೋಗಬೇಕಾಗುತ್ತದೆ ಎನ್ನುತ್ತಾರೆ ಅನುಕುಮಾರಿ.

ನಾನು ಟೆಕ್ಕಿಯಾಗಿ ಇನ್ನೂ ಕೆಲಸ ಮಾಡಬೇಕು: ಕೆಲಸದಲ್ಲಿ ಮೇಲು, ಕೀಳು ಎಂಬುದಿಲ್ಲ, ನಾವು ಎಷ್ಟು ಚೆನ್ನಾಗಿ ಮಾಡುತ್ತೇವೆ ಎನ್ನುವುದು ಮುಖ್ಯ ಎಂಬ ಅನುಕುಮಾರಿ ಎರಡೂ ಕೆಲಸ ಶ್ರೇಷ್ಟ ಎನ್ನುತ್ತಾರೆ. ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡಲು ಮಾನಸಿಕವಾಗಿ ಹೆಚ್ಚು ಶ್ರಮ ಬೇಕಿದ್ದರೆ, ತರಕಾರಿ ಮಾರಾಟಕ್ಕೆ ಶಾರೀರಿಕ ಶ್ರಮ ಮುಖ್ಯ. ನಮ್ಮ ಜೀವನಶೈಲಿಯನ್ನು ಅವಲಂಬಿಸಿಕೊಂಡು ಎಲ್ಲ ನಿರ್ಧಾರವಾಗುತ್ತದೆ ಎನ್ನುತ್ತಾರೆ.

ಕೊರೋನಾ ಸಮಸ್ಯೆಯೆಲ್ಲ ಮುಗಿದ ಮೇಲೆ ಮತ್ತೆ ಬೆಂಗಳೂರಿಗೆ ಹೋಗಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮುಂದುವರಿಸುತ್ತೇನೆ ಎಂದು ಅನು ವಿಶ್ವಾಸದಿಂದ ಹೇಳುತ್ತಾರೆ. ನನ್ನ ಕುಟುಂಬದಲ್ಲಿ ಕಾಲೇಜಿಗೆ ಹೋದವರು ಯಾರೂ ಇಲ್ಲ, ನಾನು ಎಂಜಿನಿಯರ್ ಆಗಬೇಕೆಂಬುದು ನನ್ನ ತಂದೆಯ ಕನಸಾಗಿತ್ತು. ನಮಗೆ ಒಳ್ಳೆ ಶಿಕ್ಷಣ ನೀಡಬೇಕೆಂದು ನಮ್ಮ ತಂದೆ ತಾಯಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಈಗ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ನನ್ನ ಕರ್ತವ್ಯ ಎಂದು ಅನು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com