ಬಿಬಿಎಂಪಿ ಕಂದಾಯ ಮೌಲ್ಯಮಾಪಕ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೊರೋನಾಗೆ ಬಲಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಧಿಕಾರಿ ಹಾಗೂ ಕೊರೋನಾ ವಾರಿಯರ್ ಪಿಎಸ್ ಐ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.  
ಬಿಬಿಎಂಪಿ ಕಂದಾಯ ಮೌಲ್ಯಮಾಪಕ ನಟರಾಜ್
ಬಿಬಿಎಂಪಿ ಕಂದಾಯ ಮೌಲ್ಯಮಾಪಕ ನಟರಾಜ್

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಧಿಕಾರಿ ಹಾಗೂ ಕೊರೋನಾ ವಾರಿಯರ್ ಪಿಎಸ್ ಐ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

58 ವರ್ಷದ ಯಲಹಂಕ ಹಳೆಪಟ್ಟಣ ಉಪವಿಭಾಗದಲ್ಲಿ ಕಂದಾಯ ಮೌಲ್ಯಮಾಪಕ ನಟರಾಜ್ ಮಂಗಳವಾರ ಮೃತಪಟ್ಟಿದ್ದಾರೆ. ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ನಟರಾಜ್‌ ಅವರ ಪುತ್ರಿಗೆ ಸೋಂಕು ತಗುಲಿದ್ದು, ಅವರಿಂದ ನಟರಾಜ್‌ ಅವರಿಗೂ ಸೋಂಕು ದೃಢಪಟ್ಟಿತ್ತು. ಇವರನ್ನು ಜೂನ್ 27ರಂದು ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ನಟರಾಜ್‌ ಅವರ ಕುಟುಂಬಕ್ಕೆ 30 ಲಕ್ಷ ರೂ. ಕೋವಿಡ್‌ ವಿಮೆಯ ಮೊತ್ತ ಬಿಡುಗಡೆ ಮಾಡಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದೆ.

ಮತ್ತೊಂದು ಪ್ರಕರಣದಲ್ಲಿ  ಮಹಾಮಾರಿ ಕೋವಿಡ್-19 ಗೆ ನಗರದ ಮತ್ತೋರ್ವ ಕೊರೋನಾ ವಾರಿಯರ್ ಪಿಎಸ್ ಐ ಬಲಿಯಾಗಿದ್ದಾರೆ.ಈ ಮೂಲಕ ನಗರದಲ್ಲಿ ಕೊರೋನಾದಿಂದ ಮೃತಪಟ್ಟ ಪೊಲೀಸರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.ನಗರದ ಕಂಟ್ರೋಲ್ ರೂಮ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 59 ವರ್ಷದ ಪಿಎಸ್ಐ  ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಚಿಕಿತ್ಸೆಗೆಂದು ಅತ್ತಿಬೆಲೆಯ ಸಾಯಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.ಸದ್ಯ ನಗರದಲ್ಲಿ ಒಟ್ಟು 578 ಪೊಲೀಸರಿಗೆ ಸೋಂಕು ತಗಲಿದ್ದು, 732 ಪೊಲೀಸ್ ಸಿಬ್ಬಂದಿ ಕ್ವಾರಂಟೈನ್ ನಲ್ಲಿದ್ದಾರೆ.

ವಯಸ್ಸಾದವರಿಗೆ ಕೊರೊನಾ ಬಹುಬೇಗನೆ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಐವತ್ತು ವರ್ಷ ಮೇಲ್ಪಟ್ಟ ಪೊಲೀಸರಿಗೆ ಮನೆಯಿಂದ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.ಹೀಗಾಗಿ ಮೃತ ಪಿಎಸ್ಐ ಅವರು ಕಳೆದ ಹಲವು ದಿನಗಳಿಂದ ಮನೆಯಲ್ಲಿದ್ದರು ಎನ್ನಲಾಗಿದೆ.

ದಿನಗಳು ಉರುಳಿದಂತೆ ಪೊಲೀಸರಿಗೆ ಸೋಂಕು ಹೆಚ್ಚಾಗುತ್ತಿದ್ದು, ಮರಣ ಹೊಂದುತ್ತಿರುವ ಪೊಲೀಸರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇದು ಇಲಾಖೆಯಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com