ಕೊರೋನಾ: 10 ದಿನ ಚಿಕಿತ್ಸೆಗೆ ಶಂಕಿತ ಸೋಂಕಿತನಿಗೆ ರೂ.9.09 ಲಕ್ಷ ಅಂದಾಜು ಬಿಲ್ ಮಾಡಿದ ಖಾಸಗಿ ಆಸ್ಪತ್ರೆ!

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶಂಕಿತ ಕೊರೋನಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲು ರೂ.9.09 ಲಕ್ಷ ಬಿಲ್ ಆಗುವುದಾಗಿ ನಗರದ ಖಾಸಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿ ವಾಪಸ್ ಕಳುಹಿಸಿರುವ ಘಟನೆ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶಂಕಿತ ಕೊರೋನಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲು ರೂ.9.09 ಲಕ್ಷ ಬಿಲ್ ಆಗುವುದಾಗಿ ನಗರದ ಖಾಸಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿ ವಾಪಸ್ ಕಳುಹಿಸಿರುವ ಘಟನೆ ನಡೆದಿದೆ. 

ಸುಮಾರು 67 ವರ್ಷದ ಕೋರಮಂಗಲ ನಿವಾಸಿಯೊಬ್ಬರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಕೂಡಲೇ ಸಂಬಂಧಿಕರು ಚಿಕಿತ್ಸೆ ಕೊಡಿಸಲು ನಗರದ ವೈಟ್ ಫೀಲ್ಟ್ ನಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆತಂದಿದ್ದಾರೆ. ರೋಗಿಯನ್ನು ಪರಿಶೀಲಿಸಿದ ವೈದ್ಯರು, 10 ದಿನ ಚಿಕಿತ್ಸೆ ಕೊಡಬೇಕು. ಒಟ್ಟಾರೆ ರೂ.9.09 ಲಕ್ಷ ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ. 

ವೈದ್ಯರ ಈ ಮಾತುಗಳನ್ನು ಕೇಳಿದ ಕುಟುಂಬಸ್ಥರು ಬೆಚ್ಚಿಬಿದ್ದಿದ್ದು, ಆಸ್ಪತ್ರೆಗೆ ದಾಖಲು ಮಾಡಲು ನಿರಾಕರಿಸಿದ್ದಾರೆ. ವೆಂಟಿಲೇಟರ್'ಗೆ ರೂ.1.40 ಲಕ್ಷ, ರೂ.3 ಲಕ್ಷ ಔಷಧಿಗಳಿಗೆ, ಲ್ಯಾಬ್ ಪರೀಕ್ಷೆಗಳಿಗೆ ರೂ.2 ಲಕ್ಷ, ಹಾಸಿಗೆ ಹಾಗೂ ರೂಮಿನ ಬಾಡಿಗೆ ರೂ.75,000 ನರ್ಸಿಂಗ್ ಚಾರ್ಜ್ ರೂ.58,500. ರೇಡಿಯೋಲಜಿ, ಫಿಜಿಯೋ ಥೆರಪಿಗೆ ರೂ.35,000, ಸರ್ಜಿಕಲ್ ಸಾಮಾಗ್ರಿಗಳಿಗೆ ರೂ.25,000ಗಳನ್ನು ಆಸ್ಪತ್ರೆ ಬಿಲ್ ಮಾಡಿದೆ. 

ಭಾನುವಾರವಷ್ಟೇ ಕೊರೋನಾ ಪರೀಕ್ಷೆಗೊಳಗಾಗಿದ್ದರು. ವೈದ್ಯಕೀಯ ವರದಿಗಾಗಿ ನಾವು ಕಾಯುತ್ತಿದ್ದೆವು. ಸೋಮವಾರ ಉಸಿರಾಟ ಸಮಸ್ಯೆ ಎದುರಾಗಿತ್ತು. ಹೀಗಾಗಿ ನಾವು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆತಂದಿದ್ದೆವು. ಕೂಡಲೇ ತುರ್ತುಪರಿಸ್ಥಿತಿ ವಿಭಾಗಕ್ಕೆ ಕರೆದೊಯ್ದಿದ್ದೆವು. ಈ ವೇಳೆ ಆಸ್ಪತ್ರೆಯ ವೈದ್ಯರು ವೈದ್ಯಕೀಯ ವೆಚ್ಚದ ವಿವರಣೆ ತಿಳಿಸಿದರು. ಈ ವೇಳೆ ನಮಗೆ ಆಘಾತವಾಯಿತು ಎಂದು ವ್ಯಕ್ತಿ ಸಂಬಂಧಿಕರು ಹೇಳಿದ್ದಾರೆ. 

ಕುಟುಂಬ ಸದಸ್ಯರೊಂದಿಗೆ ಮಾತನಾಡಿ, ಆಸ್ಪತ್ರೆಗೆ ದಾಖಲಿಸದಿರಲು ನಿರ್ಧರಿಸಿದೆವು. ಬಳಿಕ ಎನ್'ಜಿಒ ಸಂಸ್ಥೆ ಮೆರ್ಸಿ ಮಿಷನ್ ಸಂಪರ್ಕಿಸಿದವು. ನಂತರ ಆ ಸಂಸ್ಥೆಯು ಹೆಚ್'ಬಿಎಸ್ ಆಸ್ಪತ್ರೆ ಕುರಿತು ಮಾಹಿತಿ ನೀಡಿತು. ಅಲ್ಲಿ ನಾವು ರೂ.25,000ಕ್ಕೆ ದಾಖಲು ಮಾಡಿದೆವು. ಪರಿಸ್ಥಿತಿ ಕಠಿಣವಾಗಿದ್ದು, ಆಸ್ಪತ್ರೆಗಳು ಇಂತಹ ಪರಿಸ್ಥಿತಿಯನ್ನು ಲಾಭವಾಗಿ ಬಳಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸುಧಾಕರ್ ಅವರು, ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. 

ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ. 

ಇನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮ್ಯಾನೇಜರ್ ಮಾತನಾಡಿ, ವಯಸ್ಸಾಗ ವ್ಯಕ್ತಿ ಅತೀವ್ರ ಜ್ವರ ಹಾಗೂ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದರು. ವ್ಯಕ್ತಿಯಲ್ಲಿ ಮಧುಮೇಹ ಹಾಗೂ ಬಿಪಿ ಇದ್ದು, ಕೂಡಲೇ ಚಿಕಿತ್ಸೆ ನೀಡುವ ಅಗತ್ಯವಿತ್ತು. ವ್ಯಕ್ತಿಯಲ್ಲಿ ಇನ್ನೂ ಕೊರೋನಾ ದೃಢಪಟ್ಟಿರಲಿಲ್ಲ. ಯಾವುದೇ ಸರ್ಕಾರಿ ಆಸ್ಪತ್ರೆಗಳೂ ಕೂಡ ಅವರನ್ನು ಶಿಫಾರಸು ಮಾಡಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ರೋಗಿಗೆ ಚಿಕಿತ್ಸಾ ವೆಚ್ಚ ಎಷ್ಟಾಗಬಹುದು ಎಂಬುದನ್ನು ಮೊದಲೇ ತಿಳಿಸಿದೆವು. ಇದೇ ಅಂತಿಮ ಬಿಲ್ ಆಗಿರಲಿಲ್ಲ. ರೋಗಿಯಲ್ಲಿ ಕೊರೋನಾ ದೃಢಪಟ್ಟ ಬಳಿಕ ಸರ್ಕಾರ ನಿಯಮಗಳಂತೆ ಚಿಕಿತ್ಸೆ ನೀಡುತ್ತಿದ್ದೆವು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com