ರಂಗಭೂಮಿ ಹಿರಿಯ ಕಲಾವಿದೆ ಸುಭದ್ರಮ್ಮ ಮನ್ಸೂರ್ ಇನ್ನಿಲ್ಲ

ರಂಗಭೂಮಿ ಹಿರಿಯ ಕಲಾವಿದೆ, ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ಅವರು ಬುಧವಾರ ಇಹಲೋಕ ತ್ಯಜಿಸಿದ್ದಾರೆ. 
ಸುಭದ್ರಮ್ಮ ಮನ್ಸೂರ್
ಸುಭದ್ರಮ್ಮ ಮನ್ಸೂರ್

ಬಳ್ಳಾರಿ: ರಂಗಭೂಮಿ ಹಿರಿಯ ಕಲಾವಿದೆ, ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ಅವರು ಬುಧವಾರ ಇಹಲೋಕ ತ್ಯಜಿಸಿದ್ದಾರೆ. 

ನಗರದ ರೇಡಿಯೋ ಪಾರ್ಕ್ ಪ್ರದೇಶದ ಮನೆಯಲ್ಲಿ ರಾತ್ರಿ 11.30ರ ಸುಮಾರಿಗೆ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡೇ ಅವರನ್ನು ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಸುಭದ್ರಮ್ಮ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ. 

ಸುಭದ್ರಮ್ಮ ಅವರು ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಇವರ ಪತಿ ಲಿಂಗರಾಜ ಮನ್ಸೂರ್ ಅವರು ಹಲವರು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. 

ಸುಭದ್ರಮ್ಮ ಅವರು 50 ವರ್ಷಗಳ ಕಾಲ ರಂಗಭೂಮಿಯಲ್ಲಿ ಮಿಂಚಿದ ಪ್ರತಿಭೆಯಾಗಿದ್ದು, 27ನೇ ವಯಸ್ಸಿಗೆ ರಂಗಭೂಮಿ ಪ್ರವೇಶಿಸಿದ್ದರು. ಕುಂತಿ, ಗಾಂಧಾರಿ, ದ್ರೌಪತಿ, ಉತ್ತರೆ, ಸೀತೆ ಪಾಕ್ರಗಳ ಮೂಲಕ ಜನಮನದಲ್ಲಿ ಅಚ್ಚೊತ್ತಿದ್ದರು. ಬಳ್ಳಾರಿ ಸುಭದ್ರಮ್ಮ ಎಂದೇ ಖ್ಯಾತಿ ಗಳಿಸಿದ್ದ ಅವರು 2,000ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಿಗೆ ಬಣ್ಣ ಹಚ್ಚಿದ್ದಾರೆ. ಇವರ ರಂಗಭೂಮಿ ಸೇವೆಯನ್ನು ಗುರ್ತಿಸಿದ್ದ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. 

ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯ ಗೌರವ ಡಾಕ್ಟರೇಟ್, ಗುಬ್ಬಿ ವೀರಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಸುಭದ್ರಮ್ಮ ಅವರು ಪಡೆದಿದ್ದಾರೆ. 

ಮುಖ್ಯಮಂತ್ರಿ ತೀವ್ರ ಸಂತಾಪ:
ಹಿರಿಯ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್‌ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿ.ಎಸ್.ಯಡಿಯೂರಪ್ಪ, ಹಿರಿಯ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್‌ ನಿಧನರಾದ ಸುದ್ದಿ ಅತೀವ ದುಃಖ ತಂದಿದೆ. ಸುಮಾರು 5 ದಶಕಗಳ ಕಾಲ ರಂಗಭೂಮಿಯಲ್ಲಿ ಕಲಾವಿದರಾಗಿ ಮತ್ತು ಸಂಗೀತಗಾರರಾಗಿ ಅವರ ಸಾಧನೆ ಅನುಪಮವಾದದ್ದು. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ, ಕುಟುಂಬದವರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಸಂತಾಪ ಸೂಚಿಸಿದ್ದು, ರಂಗಭೂಮಿ ಹಿರಿಯ ಕಲಾವಿದೆ, ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ಅವರು ಇಹಲೋಕ ತ್ಯಜಿಸಿರುವುದು ದುಃಖ ತಂದಿದೆ. 50 ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಕಲಾವಿದೆ. ಐತಿಹಾಸಿಕ, ಪೌರಾಣಿಕ ಪಾತ್ರಗಳ ಮೂಲಕ ಜನಮಾನಸದಲ್ಲಿ ಹೆಸರುವಾಸಿಯಾಗಿದ್ದರು. ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com