ಕೊರೋನಾ ಉಪಕರಣಗಳ ಖರೀದಿ ಕುರಿತು ವಿವರಣೆ ನೀಡಿ: ಸಿಎಂ ಯಡಿಯೂರಪ್ಪಗೆ ಕಾಂಗ್ರೆಸ್ ಆಗ್ರಹ

ಕೊರೋನಾ ನಿಯಂತ್ರಣ ನೆಪದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಉಪಕರಣಗಳ ಖರೀದಿಯಲ್ಲಿ ಬಿಜೆಪಿ ಸರ್ಕಾರದ ಸಚಿವರು ವ್ಯಾಪಕವಾಗಿ ಭ್ರಷ್ಟಾಚಾರ ನಡೆಸುತ್ತಿದ್ದು, ಉಪಕರಣಗಳ ಖರೀದಿ ಕುರಿತು ವಿವರಣೆ ನೀಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಕಾಂಗ್ರೆಸ್ ಆಗ್ರಹಿಸಿದೆ. 
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ಕೊರೋನಾ ನಿಯಂತ್ರಣ ನೆಪದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಉಪಕರಣಗಳ ಖರೀದಿಯಲ್ಲಿ ಬಿಜೆಪಿ ಸರ್ಕಾರದ ಸಚಿವರು ವ್ಯಾಪಕವಾಗಿ ಭ್ರಷ್ಟಾಚಾರ ನಡೆಸುತ್ತಿದ್ದು, ಉಪಕರಣಗಳ ಖರೀದಿ ಕುರಿತು ವಿವರಣೆ ನೀಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಕಾಂಗ್ರೆಸ್ ಆಗ್ರಹಿಸಿದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಕೊರೋನಾ ಸಂಬಂಧಿ ಖರೀದಿಯಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿಗಳಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಉತ್ತರ ನೀಡಬೇಕು. ಕೋವಿಡ್ ವಿಚಾರದಲ್ಲಿ ಹಾಸಿಗೆ, ದಿಂಬಿನಿಂದ ಹಿಡಿದು ವೆಂಟಿಲೇಟರ್, ಪಿಪಿಇ ಕಿಟ್ ಖರೀದಿವರೆಗೂ ಅಕ್ರಮ ನಡೆದಿದೆ. ಇಲ್ಲಿ ಶೇ.5, 10 ಅಥವಾ 30 ರಷ್ಟು ಭ್ರಷ್ಟಾಚಾರವಾಗಿಲ್ಲ. ಬದಲಿಗೆಶೇ.20-50ರಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. 

ತಮಿಳುನಾಡು ರಾಜ್ಯದಲ್ಲಿ ಒಂದೊಂದು ವೆಂಟಿಲೇಟರ್ ಗಳನ್ನು ರೂ.4.78 ಲಕ್ಷಕ್ಕೆ ಖರೀದಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ರೂ.18.20 ಲಕ್ಷಕ್ಕೆ ಖರೀದಿ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಈ ಆರೋಪಗಳನ್ನು ತಳ್ಳಿಹಾಕಿರುವ ವೆಂಟಿಲೇಟರ್ ಖರೀದಿ ಮಾಡಿದ ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಆ್ಯಂಡ್ ವೇರ್ಹೌಸಿಂಗ್ ಸೊಸೈಟಿಯು, ರೂ.18.20 ಲಕ್ಷಕ್ಕೆ 200 ಐಸಿಯು ವೆಂಟಿಲೇಟರ್ ಗಳನ್ನು ಖರೀದಿ ಮಾಡಲಾಗಿದೆ ಎಂಬುದು ಆಧಾರರಹಿತವಾಗಿದೆ. ತಮಿಳುನಾಡು ಸರ್ಕಾರ ಖರೀದಿ ಮಾಡಿರುವ ವೆಂಟಿಲೇಟರ್ ಗಳಿಗೆ ನಾವು ಖರೀದಿ ಮಾಡಿರುವ ವೆಂಟಿಲೇಟರ್ ಗಳನ್ನು ಹೋಲಿಕೆ ಮಾಡುವುದು ತಪ್ಪು ಎಂದು ತಿಳಿಸಿದ್ದಾರೆ. 

ವೆಂಟಿಲೇಟರ್ ಗಳಲ್ಲಿರುವ ವ್ಯವಸ್ಥೆ ಹಾಗೂ ತಂತ್ರಜ್ಞಾನಗಳ ಮೇಲೆ ಅವುಗಳ ದರ ನಿಗದಿಯಾಗುತ್ತದೆ. ಕೆಎಸ್‌ಡಿಎಲ್‌ಡಬ್ಲ್ಯೂಎಸ್ ಹಾಗೂ ಆರೋಗ್ಯ ಇಲಾಖೆಯು ಮಾರ್ಚ್ 22 ರಂದು ಸ್ಕ್ಯಾನ್ರೇ ಟೆಕ್ನಾಲಜೀಸ್‌ನಿಂದ 130 ವೆಂಟಿಲೇಟರ್‌ಗಳನ್ನು ತಲಾ ರೂ. 5,60,000 ರಂತೆ ಖರೀದಿ ಮಾಡಲು ಆರ್ಡರ್ ಮಾಡಿದೆ. ಸಂಸ್ಥೆಯು ಈವರೆಗೆ 80 ವೆಂಟಿಲೇಟರ್ ಗಳನ್ನು ರಾಜ್ಯಕ್ಕೆ ನೀಡಿದೆ. ಇಲಾಖೆಯು 2,149 ವೆಂಟಿಲೇಟರ್‌ಗಳಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಇದರಲ್ಲಿ 1,600 ವೆಂಟಿಲೇಟರ್ ಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ ಮತ್ತು 640 ವೆಂಟಿಲೇಟರ್ ಸರಬರಾಜು ಮಾಡಿದೆ. ಉನ್ನುಳಿದ ವೆಂಟಿಲೇಟರ್ ಗಳಿಗಾಗಿ ಎದುರು ನೋಡಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿದೆ. 

ಉಪಕರಣಗಳ ಖರೀದಿ ಕುರಿತು ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಬಹುದು. ವಿಧಾನಸಭಾ ಅಧಿವೇಶನದಲ್ಲಿಯೂ ಪ್ರಶ್ನೆ ಮಾಡಬಹುದು. ಕಾಂಗ್ರೆಸ್ ನಾಯಕರು ರಾಜಕೀಯ ಮಾಡುವ ಬದಲು ಜನರಿಗೆ ಸಹಾಯ ಮಾಡಲು ಹೊರಬರುವಂತೆ ಮನವಿ ಮಾಡಿಕೊಳ್ಳುತ್ತೇನೆಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com