ಶ್ರಾವಣ ಮಾಸಕ್ಕೆ ಕವಿದಿದೆ ಕೊರೋನಾ ಕಾರ್ಮೋಡ!

ಹಿಂದೂ ಧರ್ಮೀಯರಿಗೆ ಅತ್ಯಂತ ಪವಿತ್ರ ತಿಂಗಳು, ಹಬ್ಬ ಹರಿದಿನಗಳ ಸಮಯವಾಗಿರುವ ಶ್ರಾವಣ ಮಾಸ ನಾಳೆ ಆರಂಭ. ಆದರೆ ಈ ಬಾರಿ ಕೊರೋನಾ ವೈರಸ್ ಕಾರ್ಮೋಡ ಕವಿದಿದೆ.
ದೇವಸ್ಥಾನ ಹೊರಗೆ ಕೈಮುಗಿದು ನಿಂತಿರುವ ಭಕ್ತರು
ದೇವಸ್ಥಾನ ಹೊರಗೆ ಕೈಮುಗಿದು ನಿಂತಿರುವ ಭಕ್ತರು

ಹಿಂದೂ ಧರ್ಮೀಯರಿಗೆ ಅತ್ಯಂತ ಪವಿತ್ರ ತಿಂಗಳು, ಹಬ್ಬ ಹರಿದಿನಗಳ ಸಮಯವಾಗಿರುವ ಶ್ರಾವಣ ಮಾಸ ನಾಳೆ ಆರಂಭ. ಆದರೆ ಈ ಬಾರಿ ಕೊರೋನಾ ವೈರಸ್ ಕಾರ್ಮೋಡ ಕವಿದಿದೆ. ಹಿಂದೂ ಭಕ್ತರು ಎಲ್ಲಿಯೂ ಹೋಗದೆ,ದೇವಸ್ಥಾನಗಳಿಗೆ ಹೋಗಲು ಸಾಧ್ಯವಾಗದೆ ತಮ್ಮ ತಮ್ಮ ಮನೆಗಳಲ್ಲಿ ಸಾಧ್ಯವಾದಷ್ಟು ದೇವರ ಪ್ರಾರ್ಥನೆ, ಪೂಜೆ, ಪುನಸ್ಕಾರ ಮಾಡಿಕೊಂಡು ಇರಬೇಕಾದ ಪರಿಸ್ಥಿತಿ ಬಂದಿದೆ.

ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ, ಪುರಾಣ ಕಥೆಗಳ ವಾಚನ, ಪಠಣ ಮುಂತಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತವೆ.ಆದರೆ ಕೋವಿಡ್-19 ಈ ಎಲ್ಲಾ ಚಟುವಟಿಕೆಗಳಿಗೆ ಈ ವರ್ಷ ಬ್ರೇಕ್ ಹಾಕಿದೆ.

ಶ್ರಾವಣ ಮಾಸದಲ್ಲಿ ಸೋಮವಾರ ಶಿವನ ದೇವಸ್ಥಾನಗಳು, ಶನಿವಾರ ವೆಂಕಟೇಶ್ವರ ಮತ್ತು ಹನುಮನ ದೇವಸ್ಥಾನಗಳು ಭಕ್ತರಿಂದ ತುಂಬಿರುತ್ತವೆ. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ಹೋಗುವ ಹಾಗಿಲ್ಲ. ಯಾವುದೇ ವಿಜ್ರಂಭಣೆ, ಸಂಭ್ರಮ-ಸಡಗರಗಳು ಇಲ್ಲದಾಗಿದೆ.

ರಾಜ್ಯದ ದೊಡ್ಡ ದೊಡ್ಡ ದೇವಾಲಯಗಳಲ್ಲಿ ಕೂಡ ಈ ವರ್ಷ ಸರಳವಾಗಿ ಶ್ರಾವಣ ಮಾಸದಲ್ಲಿ ಆಗಬೇಕಾದ ಪೂಜೆಗಳನ್ನು ಮಾಡಲು ನಿರ್ಧರಿಸಲಾಗಿದ್ದು ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ದೇವಸ್ಥಾನಕ್ಕೆ ಕೆಲವು ಭಕ್ತರು ಹೋದರೂ ಕೂಡ ಅಲ್ಲಿ ತೀರ್ಥ, ಪ್ರಸಾದ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಚಿತ್ರದುರ್ಗ ಜಿಲ್ಲಾಡಳಿತ ಸರಳವಾಗಿ ದೇವಸ್ಥಾನಗಳಲ್ಲಿ ಪೂಜೆಗಳನ್ನು ನಡೆಸಲು ಅವಕಾಶ ನೀಡಲು ನಿರ್ಧರಿಸಿದೆ.

ಕುಂಚಿಟಿಗ ಗುರುಪೀಠ ಮಾರ್ಚ್ ನಿಂದ ಬಂದ್ ಆಗಿದ್ದು ಅಲ್ಲಿನ ಮಠಾಧೀಶರಾದ ಡಾ ಶಾಂತವೀರ ಸ್ವಾಮೀಜಿ ಚಿತ್ರದುರ್ಗದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೋವಿಡ್-19 ಲಸಿಕೆ ಕಂಡುಹಿಡಿಯುವವರೆಗೆ ಮಠದ ಬಾಗಿಲು ತೆಗೆಯುವುದಿಲ್ಲ ಎಂದಿದ್ದಾರೆ.

ಹರಿಹರ ತಾಲ್ಲೂಕಿನ ಬೆಳ್ಳುಡಿ ಮಠ ಕೂಡ ತಾತ್ಕಾಲಿಕವಾಗಿ ಮುಚ್ಚಿದೆ. ಹಾವೇರಿಯ ಕಾಗಿನೆಲೆ, ಹೊಸದುರ್ಗ ತಾಲ್ಲೂಕಿನ ಕೆಳ್ಳೊಡು, ಬಳ್ಳಾರಿ ಜಿಲ್ಲೆಯ ಮೈಲಾರ ಮಠಗಳಲ್ಲಿ ಭಕ್ತರು ಮಠಕ್ಕೆ ಬರದಂತೆ ಮನವಿ ಮಾಡಲಾಗಿದೆ. ಇಲ್ಲಿನ ಮಠಾಧೀಶರುಗಳೆಲ್ಲ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕೋವಿಡ್-19 ನಮ್ಮ ವೃತ್ತಿ ಮೇಲೆ ತೀರಾ ಹೊಡೆತ ಬಿದ್ದಿದೆ. ಹಲವು ಮದುವೆಗಳು ರದ್ದಾಗಿವೆ. ಹಲವರು ತಮ್ಮ ಮನೆಗಳಲ್ಲಿ ಪೂಜೆ ಮಾಡಿಸಲು ಕೂಡ ಭಯಪಡುತ್ತಿದ್ದಾರೆ ಎನ್ನುತ್ತಾರೆ ಶಿಕಾರಿಪುರ ತಾಲ್ಲೂಕಿನ ಪುರೋಹಿತ ಹರೀಶ್ ಜೋಯಿಸ್.

ಹೀಗೆ ಕೋವಿಡ್-19 ಯಾವ ವರ್ಗವನ್ನೂ, ಯಾವ ಉದ್ಯೋಗವನ್ನೂ, ಯಾವ ವಿಷಯದ ಮೇಲೂ ಪರಿಣಾಮ ಬೀರದೆ ಬಿಟ್ಟಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com