ನಿಮ್ಹಾನ್ಸ್ ಗುತ್ತಿಗೆ ಕಾರ್ಮಿಕರು, ವಿಕ್ಟೋರಿಯಾ ಆಸ್ಪತ್ರೆ ಹೌಸ್ ಕೀಪಿಂಗ್ ಸಿಬ್ಬಂದಿಗಳಿಂದ ಧರಣಿ

ಆಸ್ಪತ್ರೆಯ ಆಡಳಿತ ಮಂಡಳಿಗಳ ವಿರುದ್ಧ ನಿಮ್ಹಾನ್ಸ್ ಆಸ್ಪತ್ರೆಯ 600 ಗುತ್ತಿಗೆ ನೌಕರರು ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಶುಶ್ರೂಷಕರು, ವೈದ್ಯರು ಹಾಗೂ ವೈದ್ಯ ಸಿಬ್ಬಂದಿಗೆ ನೀಡುವ ಸೌಲಭ್ಯವನ್ನು ಗ್ರೂಪ್ ಡಿ ನೌಕರರಿಗೂ ನೀಡುವಂತೆ ಒತ್ತಾಯಿಸಿ ವಿಕ್ಟೋರಿಯಾ ಆಸ್ಪತ್ರೆಯ 30-40 ಹೌಸ್ ಕೀಪಿಂಗ್ ಸಿಬ್ಬಂದಿಗಳು ಸೋಮವಾರ ಪ್ರತಿಭಟನೆ ನಡೆಸಿದರು. 
ನಿಮ್ಹಾನ್ಸ್ ಆಸ್ಪತ್ರೆ
ನಿಮ್ಹಾನ್ಸ್ ಆಸ್ಪತ್ರೆ

ಬೆಂಗಳೂರು: ಆಸ್ಪತ್ರೆಯ ಆಡಳಿತ ಮಂಡಳಿಗಳ ವಿರುದ್ಧ ನಿಮ್ಹಾನ್ಸ್ ಆಸ್ಪತ್ರೆಯ 600 ಗುತ್ತಿಗೆ ನೌಕರರು ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಶುಶ್ರೂಷಕರು, ವೈದ್ಯರು ಹಾಗೂ ವೈದ್ಯ ಸಿಬ್ಬಂದಿಗೆ ನೀಡುವ ಸೌಲಭ್ಯವನ್ನು ಗ್ರೂಪ್ ಡಿ ನೌಕರರಿಗೂ ನೀಡುವಂತೆ ಒತ್ತಾಯಿಸಿ ವಿಕ್ಟೋರಿಯಾ ಆಸ್ಪತ್ರೆಯ 30-40 ಹೌಸ್ ಕೀಪಿಂಗ್ ಸಿಬ್ಬಂದಿಗಳು ಸೋಮವಾರ ಪ್ರತಿಭಟನೆ ನಡೆಸಿದರು. 

ಕೆಲಸ ಮಾಡುವ ವೇಳೆ ನಮಗೇನಾದರೂ ಸೋಂಕು ತಟ್ಟಿದರೆ, ನಮಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಲಾಗುತ್ತಿದೆ. ಶಾಶ್ವತವಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗಷ್ಟೇ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಶ್ವತ ಸಿಬ್ಬಂದಿಗಳಿಗೆ 50 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಈಗಾಗಲೇ ನಮ್ಮಲ್ಲಿ ಮೂವರು ಸಿಬ್ಬಂದಿಗಳಿಗೆ ಸೋಂಕು ತಗುಲಿದ್ದು, ಇವರಾರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿಲ್ಲ. ಒಬ್ಬರನ್ನು ಜಿಕೆವಿಕೆಗೆ ಕಳುಹಿಸಿದ್ದರೆ, ಮತ್ತಿಬ್ಬರು ಮನೆಯಲ್ಲಿಯೇ ಇದ್ದಾರೆ. ನಾವು ಸಣ್ಣ ಸಣ್ಣ ಮನೆಗಳಲ್ಲಿದ್ದು, ಮನೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ನಿಮ್ಹಾನ್ಸ್ ಪ್ರಗತಿಪರ ಕಾರ್ಮಿಕರು ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅವರು ಹೇಳಿದ್ದಾರೆ. 

ಕಾರ್ಮಿಕರಿಗೆ ಸರಿಯಾಗಿ ವೇತನ ನೀಡಲಾಗುತ್ತಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಆಸ್ಪತ್ರೆಗೆ ಬರಲು ಕಾರ್ಮಿಕರು ಸಂಕಷ್ಟ ಪಡುವಂತಾಗಿದೆ. ಪ್ರಧಾನಮಂತ್ರಿ ಗರೀಬಿ ಕಲ್ಯಾಣ ಯೋಜನೆ ಅಡಿಯಲ್ಲಿ ನಮಗೆಲ್ಲರಿಗೂ ವಿಮೆಯನ್ನು ರೂ.50ಲಕ್ಷಕ್ಕೆ ವಿಸ್ತರಿಸಿಲ್ಲ ಎಂದು ತಿಳಿಸಿದ್ದಾರೆ. 

ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಿಹ್ಮಾನ್ಸ್ ನಿರ್ದೇಶಕ ಡಾ.ಬಿಎನ್.ಗಂಗಾಧರ್ ಅವರು, ಶಾಶ್ವತ ಹಾಗೂ ಗುತ್ತಿಗೆ ಆರೋಗ್ಯ ಸಿಬ್ಬಂದಿಗಳಿಗೆ ಈಗಾಗಲೇ ಉಚಿತವಾಗಿ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಲಾಕ್ಡೌನ್ ಸಮಯದಲ್ಲಿ ವೇತನ ನೀಡಲಾಗುತ್ತಿಲ್ಲ ಎಂಬುದೆಲ್ಲಾ ಸುಳ್ಳು ಆರೋಪ. ಗುತ್ತಿಗೆ ಸಂಸ್ಥೆಗಳ ಮೂಲಕವೇ ಕಾರ್ಮಿಕರಿಗೆ ಇಎಸ್ಐ, ಪಿಎಫ್ ಎಲ್ಲವನ್ನೂ ನೀಡಲಾಗುತ್ತಿದೆ. ಇಎಸ್ಐ ಅಡಿಯಲ್ಲಿ ಎಲ್ಲಾ ಆರೋಗ್ಯ ಲಾಭಗಳ ಪಡೆಯಲು ಅರ್ಹರಾಗಿದ್ದಾರೆ. ನಿಮ್ಹಾನ್ಸ್ ಕೋವಿಡ್ ವೈರಸ್'ಗೆ ಚಿಕಿತ್ಸೆ ನೀಡಲು ನಿಯೋಜಿಸಲಾಗಿರುವ ಆಸ್ಪತ್ರೆಯಲ್ಲ. ಆದರೂ ನಾವು ಶಾಶ್ವತ ನೌಕರರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಅದಕ್ಕಾಗಿ ಅವರು ಹಣವನ್ನು ಪಾವತಿ ಮಾಡುತ್ತಿದ್ದಾರೆ. ಗುತ್ತಿಗೆ ಕಾರ್ಮಿಕರಿಗೂ ನಾವು ಕೋವಿಡ್ ಕೇರ್ ಕೇಂದ್ರವನ್ನು ಕ್ಯಾಂಪಸ್ ನಲ್ಲಿ ಸ್ಥಾಪನೆ ಮಾಡಿದ್ದೇವೆಂದಿದ್ದಾರೆ. 

ಇನ್ನು ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಿಬ್ಬಂದಿಗಳು ಮಾತನಾಡಿ, ಕೆಲಸ ಮಾಡಿದ ಬಳಿಕ ನಮ್ಮನ್ನು 1 ವಾರಗಳ ಕಾಲ ಕ್ವಾರಂಟೈನ್ ಮಾಡುತ್ತಾರೆ. ಆದರೆ ಆ ಕ್ವಾರಂಟೈನ್ ಮಾಡಿದ ಜಾಗವನ್ನು ಸ್ಯಾನಿಟೈಸ್ ಮಾಡಲಾಗುತ್ತಿಲ್ಲ. ಪರೀಕ್ಷಾ ವೈದ್ಯಕೀಯ ವರದಿ ಬರುವವರೆಗೂ ಎಲ್ಲರೂ ಅಲ್ಲಿಯೇ ಇರುತ್ತೇವೆ. ವೈರಸ್ ಪಾಸಿಟಿವ್ ಇರುವವರೂ ಕೂಡ ಇಲ್ಲಿಯೇ ಇರುತ್ತಾರೆ. ವೈದ್ಯರು ಹಾಗೂ ನರ್ಸ್ ಗಳಿಗೆ ಉತ್ತಮವಾದ ಪಿಪಿಇ ಕಿಟ್ ಗಳನ್ನು ನೀಡುಲಾಗುತ್ತದೆ. ಆದರೆ, ಹೌಸ್ ಕೀಪಿಂಗ್ ಹಾಗೂ ಸೇವಕರಿಗೂ ಉತ್ತಮ ಗುಣಮಟ್ಟದ ಪಿಪಿಇ ಕಿಟ್ ನೀಡಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com