ಬಂಗಾಳ ಕೊಲ್ಲಿಯಿಂದ ಬೀಸುತ್ತಿದೆ ನೈರುತ್ಯ ಮುಂಗಾರು: ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ

ಈ ವರ್ಷ ಮುಂಗಾರು ಮಳೆಯ ವಿಧಾನದಲ್ಲಿ ಬದಲಾವಣೆಯಿದೆ. ಅರೇಬಿಯನ್ ಸಮುದ್ರದ ಬದಲಿಗೆ ಬಂಗಾಳ ಕೊಲ್ಲಿ ಮೂಲಕ ಮುಂಗಾರು ಗಾಳಿ ಬೀಸುತ್ತಿದೆ. ಇದರ ಪರಿಣಾಮ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡುಗಳಲ್ಲಿ ನಿರೀಕ್ಷೆಗಿಂತ ಈಗಾಗಲೇ ದುಪ್ಪಟ್ಟು ಮಳೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಈ ವರ್ಷ ಮುಂಗಾರು ಮಳೆಯ ವಿಧಾನದಲ್ಲಿ ಬದಲಾವಣೆಯಿದೆ. ಅರೇಬಿಯನ್ ಸಮುದ್ರದ ಬದಲಿಗೆ ಬಂಗಾಳ ಕೊಲ್ಲಿ ಮೂಲಕ ಮುಂಗಾರು ಗಾಳಿ ಬೀಸುತ್ತಿದೆ. ಇದರ ಪರಿಣಾಮ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡುಗಳಲ್ಲಿ ನಿರೀಕ್ಷೆಗಿಂತ ಈಗಾಗಲೇ ದುಪ್ಪಟ್ಟು ಮಳೆಯಾಗಿದೆ.

ಆದರೆ ಮಲೆನಾಡು,ಕರಾವಳಿ ಭಾಗಗಳಲ್ಲಿ ಮಳೆಯ ಕೊರತೆಯಾಗಿದೆ. ಇದು ರೈತರಿಗೆ ಆತಂಕವನ್ನು ತಂದಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ(ಕೆಎಸ್ಎನ್ ಡಿಎಂಸಿ) ಪ್ರಕಾರ ಜುಲೈ 1ರಿಂದ 19ರವರೆಗೆ ಸರಾಸರಿ ಮಳೆ ರಾಜ್ಯದಲ್ಲಿ 165 ಮಿಲಿ ಮೀಟರ್ ಬೀಳಬೇಕಾಗಿತ್ತು. ಆದರೆ ಈಗಾಗಲೇ 179 ಮಿಲಿ ಮೀಟರ್ ಮಳೆಯಾಗಿದೆ. ಕಳೆದ 20 ದಿನಗಳಲ್ಲಿ ದಕ್ಷಿಣ ಮತ್ತು ಉತ್ತರ ಒಳನಾಡು ಭಾಗಗಳಲ್ಲಿ ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 78 ಮಿಲಿ ಮೀಟರ್ ಮಳೆಯಾಗಿದೆ. ಪ್ರತಿವರ್ಷ ಇಲ್ಲಿ ಸರಾಸರಿ ಮಳೆಯ ಪ್ರಮಾಣ 45 ಮಿಲಿ ಮೀಟರ್ ಆಗಿದೆ.

ಉತ್ತರ ಒಳನಾಡಿನಲ್ಲಿ 104 ಮಿಲಿ ಮೀಟರ್ ಮಳೆಯಾಗಿದ್ದು ಇಲ್ಲಿನ ಸರಾಸರಿ ಮಳೆಯ ಪ್ರಮಾಣ 67 ಮಿಲಿ ಮೀಟರ್. ಬೆಂಗಳೂರು, ರಾಮನಗರ, ಕೋಲಾರ, ಮೈಸೂರು, ಮಂಡ್ಯ, ತುಮಕೂರು ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ದಕ್ಷಿಣ ಕರ್ನಾಟಕ ಒಳಗೊಂಡಿದ್ದರೆ, ವಿಜಯಪುರ, ಬೀದರ್, ಕಲಬುರಗಿ, ಬೆಳಗಾವಿ, ರಾಯಚೂರು, ಬಳ್ಳಾರಿ ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಉತ್ತರ ಒಳನಾಡು ಭಾಗಗಳು ಒಳಗೊಂಡಿವೆ.

ಜುಲೈಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಮಳೆಯಾಗುತ್ತದೆ. ಆದರೆ ಈ ವರ್ಷ ಮಳೆ ಕಡಿಮೆಯಾಗಿದೆ. ಸರಾಸರಿ ಪ್ರತಿವರ್ಷ 370 ಮಿಲಿ ಮೀಟರ್ ಮಳೆಯಾಗುವ ಮಲೆನಾಡಿನಲ್ಲಿ 277 ಮಿಲಿ ಮೀಟರ್ ಈ ವರ್ಷ ಸುರಿದಿದೆ. ಕರಾವಳಿ ಕರ್ನಾಟಕದಲ್ಲಿ 756 ಮಿಲಿ ಮೀಟರ್ ಮಳೆಯಾಗಿದ್ದು ಇಲ್ಲಿ ಸರಾಸರಿ 706 ಮಿಲಿ ಮೀಟರ್ ಸುರಿದಿದೆ. ಮಂಗಳೂರು, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರಗಳನ್ನು ಕರಾವಳಿ ಭಾಗ ಹೊಂದಿದ್ದರೆ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳನ್ನು ಮಲೆನಾಡು ಭಾಗಗಳು ಹೊಂದಿವೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕೆಎಸ್ಎನ್ ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಮಾನ್ಸೂನ್ ಗಾಳಿ ಸಾಮಾನ್ಯವಾಗಿ ಅರೇಬಿಯನ್ ಸಮುದ್ರದ ಮೂಲಕ ಬೀಸುತ್ತದೆ, ಇದೇ ಮೊದಲ ಬಾರಿಗೆ ಬಂಗಾಳ ಕೊಲ್ಲಿಯಿಂದ ಬೀಸುತ್ತಿದ್ದು ಇದರಿಂದಾಗಿ ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಆದರೆ ಮಲೆನಾಡು, ಕರಾವಳಿ ಭಾಗಗಳಲ್ಲಿ ಕಡಿಮೆಯಾಗಿದೆ ಎಂದರು.

ಮುಂದಿನ 2-3 ದಿನ ಭಾರೀ ಮಳೆ: ಸಾಧಾರಣದಿಂದ ಕೂಡಿದ ಭಾರೀ ಮಳೆ ಮುಂದಿನ ಮೂರು ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದ್ದು ಹಲವು ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಬಹುದು ಎಂದು ಕೆಎಸ್ಎನ್ ಡಿಎಂಸಿ ವಿಜ್ಞಾನಿ ಸುನಿಲ್ ಗವಾಸ್ಕರ್ ಹೇಳುತ್ತಾರೆ. ಈ ನಿಟ್ಟಿನಲ್ಲಿ ತಗ್ಗು ಪ್ರದೇಶದ ಜಿಲ್ಲಾಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com