ಹಾಪ್'ಕಾಮ್ಸ್'ಗೂ ತಟ್ಟಿದ ಕೊರೋನಾ ಸಂಕಷ್ಟ: ನಷ್ಟ ಹಿನ್ನೆಲೆ ಹಲವು ಮಳಿಗೆಗಳು ಬಂದ್

ದೇಶದಲ್ಲೇ ಸಹಕಾರಿ ಕ್ಷೇತ್ರದಲ್ಲಿ ಭರವಸೆ ಉಳಿಸಿಕೊಂಡಿರುವ ಹಣ್ಣು–ತರಕಾರಿ ಬೆಳೆಗಾರರ ಸಹಕಾರಿ ಸಂಸ್ಥೆಯಾಗಿರುವ ಹಾಪ್ ಕಾಮ್ಸ್'ಗೂ ಕೊರೋನಾ ಸಂಕಷ್ಟ ತಟ್ಟಿದ್ದು, ನಷ್ಟದ ಹಿನ್ನೆಲೆಯಲ್ಲಿ ಹಲವು ಮಳಿಗೆಗಳನ್ನು ಬಂದ್ ಮಾಡುತ್ತಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶದಲ್ಲೇ ಸಹಕಾರಿ ಕ್ಷೇತ್ರದಲ್ಲಿ ಭರವಸೆ ಉಳಿಸಿಕೊಂಡಿರುವ ಹಣ್ಣು–ತರಕಾರಿ ಬೆಳೆಗಾರರ ಸಹಕಾರಿ ಸಂಸ್ಥೆಯಾಗಿರುವ ಹಾಪ್ ಕಾಮ್ಸ್'ಗೂ ಕೊರೋನಾ ಸಂಕಷ್ಟ ತಟ್ಟಿದ್ದು, ನಷ್ಟದ ಹಿನ್ನೆಲೆಯಲ್ಲಿ ಹಲವು ಮಳಿಗೆಗಳನ್ನು ಬಂದ್ ಮಾಡುತ್ತಿವೆ. 

ನಗರದಲ್ಲಿ ಅಲ್ಲಲ್ಲಿ ತರಕಾರಿ, ಹಣ್ಣುಗಳ ಅಂಗಡಿಗಳು, ತಳ್ಳುವ ಗಾಡಿಯ ಮಾರಾಟಗಾರರ ಸಂಖ್ಯೆ ಹೆಚ್ಚಾಗಿದ್ದು, ಕೊರೋನಾ ಭೀತಿ ಹಿನ್ನೆಲೆಯಲ್ಲಿ ಹೊರ ಬಾರದ ಜನರು ಇದೀಗ ಸಮೀಪ ಸಿಗುವಂತಹ ಅಂಗಡಿಗಳು, ಮನೆಗಳ ಬಳಿ ಬರುವಂತಹ ಗಾಡಿಗಳಲ್ಲಿ ತರಕಾರಿ, ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ. ಇದರ ಪರಿಣಾಮ ಹಾಪ್ ಕಾಮ್ಸ್ ಭಾರೀ ನಷ್ಟವನ್ನು ಎದುರಿಸುತ್ತಿದೆ. 

ಬೆಂಗಳೂರು ವಿಭಾಗದ ಹಾಪ್‌ಕಾಮ್ಸ್ ಒಟ್ಟಾರೆ 320 ಮಳಿಗೆಗಳನ್ನು ಹೊಂದಿದ್ದು, ಅದರಲ್ಲಿ 270 ಮಳಿಗೆಗಳು ಬೆಂಗಳೂರಿನಲ್ಲಿವೆ. ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿಯೂ ಹಾಪ್ ಕಾಮ್ಸ್ ಮಳಿಗೆಗಳಿವೆ. ಈ ಮಳಿಗೆಗಳಲ್ಲಿ ಪ್ರತೀನಿತ್ಯ 70 ಟನ್ಸ್ ಗಳಷ್ಟು ಹಣ್ಣು ಹಾಗೂ ತರಕಾರಿ ಮಾರಾಟವಾಗುತ್ತಿತ್ತು. ಆದರೆ, ಮಾರ್ಚ್ ನಿಂದ ರಾಜ್ಯದಲ್ಲಿ ಹೊರಡಿಸಲಾಗಿದ್ದ ಲಾಕ್ಡೌನ್ ಬಳಿಕ ಭಾರೀ ನಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಉದ್ಯಾನವನಗಳ, ಆಸ್ಪತ್ರೆಗಳ ಆವರಣಗಳಲ್ಲಿ ಹಾಗೂ ಇತರೆ ಪ್ರದೇಶಗಳಲ್ಲಿ ತೆರೆಯಲಾಗಿದ್ದ 25 ಮಳಿಗೆಗಳನ್ನು ಬಂದ್ ಮಾಡಲಾಗಿದೆ. ಇಲ್ಲದೆ, ಕಂಟೈನ್ಮೆಂಟ್ ಝೋನ್ ಗಳಲ್ಲಿದ್ದ 20-30 ಮಳಿಗೆಗಳನ್ನು ಬಂದ್ ಮಾಡಲಾಗಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್. ಪ್ರಸಾದ್ ಅವರು, ಉದ್ಯಾನವಗಳು, ಕೆಸಿ.ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಲಾಲ್'ಬಾಗ್ ಹಾಗೂ ಇತರೆ ಪ್ರದೇಶಗಳಲ್ಲಿದ್ದ ಹಾಪ್ ಕಾಮ್ಸ್ ಮಳಿಗೆಗಳನ್ನು ಬಂದ್ ಮಾಡಲಾಗಿದೆ. ಇದಲ್ಲದೆ ಕಂಟೈನ್ಮೆಂಟ್ ಝೋನ್ ಗಳಲ್ಲಿದ್ದ ಮಳಿಗೆಗಳನ್ನು ಬಂದ್ ಮಾಡಲಾಗಿದೆ. ಪ್ರತೀ ತಿಂಗಳು ನಮಗೆ ರೂ.75 ಲಕ್ಷದಷ್ಟು ನಷ್ಟ ಎದುರಾಗುತ್ತಿದ್ದ ಹಿನ್ನೆಲೆಯಲ್ಲಿ ಮಳಿಗೆಗಳನ್ನು ಬಂದ್ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಕೇವಲ ಮಳಿಗೆಗಳಲ್ಲಷ್ಟೇ ಅಲ್ಲದೆ, ಹಾಪ್ ಕಾಮ್ಸ್ ಹಾಸ್ಟೆಲ್ ಹಾಗೂ 100 ಶೈಕ್ಷಣಿಕ ಸಂಸ್ಥೆಗಳು, ಕ್ಯಾಂಟೀನ್ ಗಳಿಗೆ ತರಕಾರಿಗಳನ್ನು ಸರಬರಾಜು ಮಾಡುತ್ತಿದ್ದು, ಈ ಸರಬರಾಜು ಕೂಡ ಇದೀಗ ಸ್ಥಗಿತಗೊಂಡಿದೆ. ಪ್ರತೀ ತಿಂಗಳು ನಮಗೆ ರೂ.1 ಕೋಟಿಯಷ್ಟು ನಷ್ಟ ಎದುರಾಗುತ್ತಿದೆ ಎಂದು ತಿಳಿಸಿದ್ದಾರೆ. 

ಕೊರೋನಾ ಹಿನ್ನೆಲೆಯಲ್ಲಿ ಹಲವರು ಕೆಲಸ ಕಳೆದುಕೊಂಡಿದ್ದು, ವ್ಯವಹಾರಗಳು ಸರಿಯಾಗಿ ನಡೆಯದ ನಷ್ಟ ಎದುರಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿದೆ. ಆಟೋ ಚಾಲಕರು ಇದೀಗ ತರಕಾರಿ, ಹಣ್ಣುಗಳನ್ನು ಮನೆ ಬಾಗಿಲುಗಳಿಗೇ ಮಾರಾಟ ಮಾಡಲು ಆರಂಭಿಸಿದ್ದಾರೆ. ನಾವು ಆ ರೀತಿ ಕೆಲಸ ಮಾಡಲು ಸಾಧ್ಯವಿಲ್ಲ. ಪ್ರತೀ ಬೀದಿಗಳಿಗೂ ಹೋಗಿ ಮಾರಾಟ ಮಾಡಲು ಸಾಧ್ಯವಿಲ್ಲ. ಅವರೊಂದಿಗೆ ಸ್ಪರ್ಧೆ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಅದು ಅವರ ಜೀವನಾಧಾರವಾಗಿದೆ ಎಂದು ಅಧಿಕಾರಿಗಳ ಮೂಲಗಳು ಮಾಹಿತಿ ನೀಡಿವೆ. 

ಇನ್ನು ಹಾಪ್ ಕಾಮ್ಸ್ ನಲ್ಲಿ ಸಾಮಾನ್ಯವಾಗಿ 52 ವರ್ಷ ಮತ್ತು 55 ವರ್ಷದ ವ್ಯಕ್ತಿಗಳಷ್ಟೇ ಕಾರ್ಯ ನಿರ್ವಹಿಸುತ್ತಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಅವರ ಆರೈಕೆ ಕೂಡ ನಮಗೆ ಮುಖ್ಯವಾಗಿದೆ ಎಂದು ಪ್ರಸಾದ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com