ಕಾರ್ಮಿಕ ಕಾನೂನು ತಿದ್ದುಪಡಿಗೆ ಕಾರ್ಮಿಕ ಸಂಘಟನೆಗಳಿಂದ ವಿರೋಧ

ಕಾರ್ಮಿಕ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೇ ವಿವಾದಿತ ಕೈಗಾರಿಕಾ ಕಾಯ್ದೆಗೆ ತಿದ್ದುಪಡಿ ತರಲು ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಇದು ಕಾರ್ಮಿಕರ ಹಕ್ಕಿನ ಉಲ್ಲಂಘನೆ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾರ್ಮಿಕ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೇ ವಿವಾದಿತ ಕೈಗಾರಿಕಾ ಕಾಯ್ದೆಗೆ ತಿದ್ದುಪಡಿ ತರಲು ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಇದು ಕಾರ್ಮಿಕರ ಹಕ್ಕಿನ ಉಲ್ಲಂಘನೆ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ವ್ಯವಹಾರ ಸುಲಭಗೊಳಿಸುವುದಕ್ಕಾಗಿ ಕಾರ್ಖಾನೆಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ ಮತ್ತು ಗುತ್ತಿಗೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ನಿನ್ನೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾರ್ಮಿಕ ಸಂಘಟನೆಗಳು, ಕೊರೋನಾ ಸಂಕಷ್ಟದಲ್ಲಿ ಕಾರ್ಮಿಕರ ಹಕ್ಕಿನ ಉಲ್ಲಂಘನೆ ಎಂದು ಹೇಳಿವೆ.

ರಾಜ್ಯ ಸರ್ಕಾರ ಕೈಗಾರಿಕೆಗಳ ಹಿತ ಕಾಯುವ ಉದ್ದೇಶದಿಂದ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇದರಿಂದ 300ರವರೆಗೆ ಕಾರ್ಮಿಕರಿರುವ ಕಾರ್ಖಾನೆ ಮುಚ್ಚಲು ಸರ್ಕಾರದ ಅನುಮತಿ ಬೇಕಿಲ್ಲ.

ಈ ತಿದ್ದುಪಡಿ ಅನುಸಾರ ಕೈಗಾರಿಕಾ ವ್ಯಾಜ್ಯ ಕಾಯಿದೆಯ ಸೆಕ್ಷನ್‌ 25(ಕೆ) ಅನ್ವಯ ಕಾರ್ಮಿಕರ ಮಿತಿಯನ್ನು 100 ರಿಂದ 300ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು 100 ಕಾರ್ಮಿಕರನ್ನು ಹೊಂದಿರುವ ಉದ್ಯಮ ಕಂಪನಿಗಳು ಸಂಸ್ಥೆಯನ್ನು ಮುಚ್ಚಲು ಹಾಗೂ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲು ಸರ್ಕಾರದ ಅನುಮತಿ ಪಡೆಯಬೇಕಿತ್ತು. ಕಾಯಿದೆಗೆ ತಿದ್ದುಪಡಿ ತಂದಿರುವುದರಿಂದ ಇಲ್ಲಿ ಕಾರ್ಮಿಕರ ಮಿತಿ 300ಕ್ಕೆ ಹೆಚ್ಚಿದಂತಾಗಿದೆ.

ಸರ್ಕಾರದ ಈ ನಿರ್ಧಾರ ಕೇವಲ ಉದ್ಯಮಗಳ ಪರವಾಗಿದೆ. ಕಾರ್ಮಿಕರ ಪರವಾಗಿಲ್ಲ. ಸರ್ಕಾರ ಕಾರ್ಮಿಕರ ಹಿತ ಕಾಪಾಡುವಲ್ಲ ಸಂಪೂರ್ಣ ವಿಫಲವಾಗಿದೆ. ಈ ಕಾನೂನಿಂದ ಕೈಗಾರಿಕೆಗಳು ಪ್ರತಿ ಘಟಕವನ್ನು ಸ್ವತಂತ್ರ ಕಾರ್ಖಾನೆ ಎಂದು ತೋರಿಸಲು ಮತ್ತು ಯಾವುದೇ ಭಯವಿಲ್ಲದೆ ಕಾರ್ಮಿಕರನ್ನು ವಜಾಗೊಳಿಸಲು ಅನುವು ಮಾಡಿಕೊಟ್ಟಂತಾಗಿದೆ ಎಂದು ಅಖಿಲ ಭಾರತ ಕೇಂದ್ರ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್‌ಗಳ ರಾಜ್ಯ ಸಮಿತಿ ಸದಸ್ಯ ಮೈತ್ರೇಯಿ ಕೃಷ್ಣನ್ ಆರೋಪಿಸಿದ್ದಾರೆ.

ಫ್ಯಾಕ್ಟರಿ ಕಾಯಿದೆ 63(3)(4) ಸೆಕ್ಷನ್‌ಗೂ ತಿದ್ದುಪಡಿ ತರಲಾಗಿದೆ. ಅದರಂತೆ ಓವರ್‌ ಟೈಮ್‌ (ಓಟಿ) ಡ್ಯೂಟಿ ಅವಧಿ ಯಾವುದೇ ತ್ರೈಮಾಸಿಕದಲ್ಲಿ 75 ಗಂಟೆಯಿಂದ 125 ಗಂಟೆಗೆ ಹೆಚ್ಚಿಸಬಹುದು. ಕೋವಿಡ್‌ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಇದಲ್ಲದೆ ಮಹಿಳಾ ಉದ್ಯೋಗಿಗಳು ರಾತ್ರಿ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಕೆಲಸ ಮಾಡುವ ಸಂಬಂಧವೂ ಅವಕಾಶ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com