ತಗಡಿನ ಶೀಟ್ ನಿಂದ ಸೋಂಕಿತನ ಮನೆ ಸೀಲ್ಡೌನ್: ಮತ್ತೆ ಬಿಬಿಎಂಪಿ ಅಧಿಕಾರಿಗಳ ಎಡವಟ್ಟು

ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಮನೆಯ ಬಾಗಿಲಿಗೆ ಅಡ್ಡಲಾಗಿ ತಗಡಿನ ಶೀಟ್ ಅಳವಡಿಸಿದ್ದ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತದೇ ರೀತಿ ನಡೆದ ಘಟನೆ ಬೆಳಕಿಗೆ ಬಂದಿದೆ.
ಶೀಟ್ ಹೊಡೆದಿರುವ ಬಿಬಿಎಂಪಿ ಅಧಿಕಾರಿಗಳು
ಶೀಟ್ ಹೊಡೆದಿರುವ ಬಿಬಿಎಂಪಿ ಅಧಿಕಾರಿಗಳು

ಬೆಂಗಳೂರು: ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಮನೆಯ ಬಾಗಿಲಿಗೆ ಅಡ್ಡಲಾಗಿ ತಗಡಿನ ಶೀಟ್ ಅಳವಡಿಸಿದ್ದ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತದೇ ರೀತಿ ನಡೆದ ಘಟನೆ ಬೆಳಕಿಗೆ ಬಂದಿದೆ. 

ನಗರದ ದೊಮ್ಮಲೂರು ಅಪಾರ್ಟ್'ಮೆಂಟ್ ವೊಂದರ ಫ್ಲ್ಯಾಟ್ ನಲ್ಲಿ ವಾಸವಿದ್ದವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತರು ಹಾಗೂ ಅವರ ನೆರೆಮನೆಯವರ ಬಾಗಿಲುಗಳಿಗೆ ತಗಡಿನ ಶೀಟ್ ಅಳವಡಿಸಿ ಗುರುವಾರ ಸೀಲ್ಡೌನ್ ಮಾಡಿದ್ದರು. ಬಿಬಿಎಂಪಿ ಸಿಬ್ಬಂದಿಯ ಎಡವಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ, ಬಳಿಕ ಶೀಟನ್ನು ತೆರವುಗೊಳಿಸಿತ್ತು. ಈ ಘಟನೆ ಬಗ್ಗೆ ಆಯುಕ್ತರು ಕೂಡ ಕ್ಷಮೆಯಾಚಿಸಿದ್ದರು. 

ಇದೀಗ ಇದೇ ರೀತಿಯ ಘಟನೆ ವನ್ನಾರ್ ಪೇಟೆ ವಾರ್ಡ್'ನ ವಿವೇಕನಗರದಲ್ಲಿ ಸೋಂಕು ದೃಢಪಟ್ಟ ಹುಡುಗ ವಾಸವಿದ್ದ ಕಟ್ಟಡವನ್ನೇ ಬಿಬಿಎಂಪಿ ಅಧಿಕಾರಿಗಳು ತಗಡಿನ ಶೀಟ್ ಹಾಕಿ ಸೀಲ್ಡೌನ್ ಮಾಡಿದ್ದಾರೆ. ಕಳೆದ ಭಾನುವಾರ ಮನೆಯ ಮುಂಭಾದ ಗೇಟ್'ಗೆ ತಗಡಿನ ಶೀಟ್ ಹಾಕಿ ಮನೆಯಿಂದ ಯಾರು ಹೊರಬರದಂತೆ ಕಂಪ್ಲೀಟ್ ಬಂದ್ ಮಾಡಲಾಗಿತ್ತು. ಇದರಿಂದ ಕಳೆದ 5 ದಿನಗಳಿಂದ ಆ ಕಟ್ಟಡದ ನಿವಾಸಿಗಳು ಮನೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಅಗತ್ಯ ವಸ್ತುಗಳನ್ನು ಕೂಡ ನೀಡಲು ನೆರೆಹೊರೆಯವರು ಸಹಾಯ ಮಾಡಿಲ್ಲ. 

ಕೊನೆಗೆ ಬಿಬಿಎಂಪಿ ಅಧಿಕಾರಿಗಳಿಗೆ ಫೋನ್ ಮಾಡಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಐದು ದಿನಗಳಾದರೂ ಯಾವ ಅಧಿಕಾರಿಯೂ ಬಂದಿರಲಿಲ್ಲ ಎನ್ನಲಾಗಿದೆ. 

ಸುದ್ದಿ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಬಂದು ತಗಡಿನ ಶೀಟ್ ತೆರವುಗೊಳಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಎಡವಟ್ಟಿಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. 

ಘಟನೆ ಕುರಿತು ಮೇಯರ್ ಗೌತಮ್ ಕುಮಾರ್ ಅವರು ಮಾತನಾಡಿ, ಗುರುವಾರ ನಡೆದ ಘಟನೆ ತಪ್ಪು. ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಕೂಡಲೇ ಶೀಟ್ ಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ. ಜನರಿಗೆ ಪಾಠ ಕಲಿಸಬೇಕೆಂದು ಬಿಬಿಎಂಪಿ ಏನನ್ನೂ ಮಾಡಿಲ್ಲ. ಸ್ಥಳೀಯ ಸಿಬ್ಬಂದಿಗಳೂ ಈ ರೀತಿ ಮಾಡುತ್ತಿದ್ದಾರೆ. ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಮತ್ತೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com