'ರೈತರ ಭೂಮಿ ಮಾರಾಟಕ್ಕಿಲ್ಲ' ಫಲಕ ಹಳ್ಳಿಗಳಲ್ಲಿ ಹಾಕಿ ರಾಜ್ಯಾದ್ಯಂತ ಸರ್ಕಾರ ವಿರುದ್ಧ ಪ್ರತಿಭಟನೆಗೆ ರೈತ ಸಂಘ ಮುಂದು

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಅಭಿಯಾನ ಆರಂಭಿಸಲು ಕರ್ನಾಟಕ ರಾಜ್ಯ ರೈತ ಸಂಘ(ಕೆಆರ್ ಆರ್ ಎಸ್) ಮುಂದಾಗಿದ್ದು ಆಗಸ್ಟ್ 8ರಿಂದ ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಕೃಷಿ ಭೂಮಿ ಮಾರಾಟಕ್ಕಿಲ್ಲ ಎಂಬ ಫಲಕ ಹಾಕಲಾಗುವುದು ಎಂದು ಘೋಷಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಅಭಿಯಾನ ಆರಂಭಿಸಲು ಕರ್ನಾಟಕ ರಾಜ್ಯ ರೈತ ಸಂಘ(ಕೆಆರ್ ಆರ್ ಎಸ್) ಮುಂದಾಗಿದ್ದು ಆಗಸ್ಟ್ 8ರಿಂದ ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಕೃಷಿ ಭೂಮಿ ಮಾರಾಟಕ್ಕಿಲ್ಲ ಎಂಬ ಫಲಕ ಹಾಕಲಾಗುವುದು ಎಂದು ಘೋಷಿಸಿದೆ.

ಮೈಸೂರಿನಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಬಡಗಲ್ಪುರ ನಾಗೇಂದ್ರ, ಕ್ವಿಟ್ ಇಂಡಿಯಾ ಚಳವಳಿಗೂ ಸರ್ಕಾರದ ಈ ವಿಧೇಯಕ ವಿರುದ್ಧ ನಮ್ಮ ಹೋರಾಟಕ್ಕೂ ಯಾವುದೇ ವ್ಯತ್ಯಾಸವಿರುವುದಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರ ಮಟ್ಟದಲ್ಲಿ ಮಾಡಲಿದ್ದೇವೆ ಎಂದು ಹೇಳಿದರು.

ಅಂದು ಬ್ರಿಟಿಷರು ನಮ್ಮ ವಿರುದ್ಧ ಕಾನೂನುಗಳನ್ನು ಜಾರಿಗೆ ತಂದಿದ್ದರು. ಇಂದು ನಮ್ಮನ್ನು ಆಡಳಿತ ನಡೆಸುವ ಜನಪ್ರತಿನಿಧಿಗಳು ವಿರುದ್ಧವಾಗಿದ್ದಾರೆ. ವಿಧೇಯಕ ಜಾರಿಗೆ ತರುವ ಮೂಲಕ ಅಸಹಾಯಕ ರೈತರಿಂದ ಲಾಭ ಮಾಡಿಕೊಳ್ಳಲು ನೋಡುತ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟವಾಗಿದ್ದು ಈ ಸಂದರ್ಭದಲ್ಲಿ ರೈತ ವೇದಿಕೆ ರಾಜ್ಯಾದ್ಯಂತ ಶುಚಿತ್ವ ಅಭಿಯಾನವನ್ನು ನಡೆಸಲಿದೆ. ವಿಧೇಯಕದಡಿ ರೈತರಲ್ಲದವರಿಂದ ವಸ್ತುಗಳನ್ನು ರೈತರು ಖರೀದಿ ಮಾಡಬೇಡಿ ಎಂದು ಅರಿವು ಮೂಡಿಸಲಿದ್ದೇವೆ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೊಂದಿಗೆ ತಾವು ಸಭೆಯಲ್ಲಿ ಭಾಗವಹಿಸಿದ್ದು ಇದನ್ನು ರಾಜಕೀಯಗೊಳಿಸಲು ಅಲ್ಲ. ನಾವು ಎಲ್ಲಾ ರಾಜಕೀಯ ಪಕ್ಷಗಳಿಂದ ದೂರವುಳಿದಿದ್ದೇವೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ತಿರಸ್ಕರಿಸುವವರನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಗ್ರಾಮಗಳಲ್ಲಿ ಸ್ಮಾರ್ಟ್ ಫೋನ್, ಮೊಬೈಲ್ , ಇಂಟರ್ನೆಟ್ ಗಳ ಸಂಪರ್ಕ ಇಲ್ಲದಿರುವ ಅನೇಕ ಸ್ಥಳಗಳಿವೆ. ಇನ್ನು ಕೆಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಇಲ್ಲ. ಹೀಗಿರುವಾಗ ಮಕ್ಕಳಿಗೆ ಆನ್ ಲೈನ್ ತರಗತಿಗಳನ್ನು ನಡೆಸುವುದಕ್ಕೆ ನಮ್ಮ ವಿರೋಧವಿದೆ. ಸರ್ಕಾರ ಖಾಸಗಿ ಸಂಸ್ಥೆಗಳ ಒತ್ತಡಕ್ಕೆ ಸಿಲುಕಿ ಇಂತಹ ಜನ ವಿರೋಧಿ ಕ್ರಮಕ್ಕೆ ಮುಂದಾಗಿದೆ ಎಂದು ನಾಗೇಂದ್ರ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com