ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ; ಪ್ರಥಮ ಅಧ್ಯಕ್ಷ ಹುದ್ದೆಗಾಗಿ ಪೈಪೋಟಿ!

ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ರಚನೆಗೆ ಎಲ್ಲೆಡೆ ವ್ಯಾಪಕ ಸ್ವಾಗತ ವ್ಯಕ್ತವಾಗುತ್ತಿದೆ. ಮುಳುಗಡೆ ಸಂತ್ರಸ್ತರಲ್ಲದವರಿಗೆ ಅದರಿಂದ ಪ್ರಯೋಜನವಿಲ್ಲ ಎನ್ನುತ್ತಿದ್ದವರ ಪಾಲಿಗೆ ನಗರಾಭಿವೃದ್ಧಿ ಪ್ರಾಧಿಕಾರ ಆಸರೆ ಆಗಲಿದೆ ಎನ್ನುವ ವಿಶ್ವಾಸವನ್ನು ನಗರದ ಜನತೆ ವ್ಯಕ್ತ ಪಡಿಸುತ್ತಿದ್ದಾರೆ.
ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ
ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ

ಬಾಗಲಕೋಟೆ: ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ರಚನೆಗೆ ಎಲ್ಲೆಡೆ ವ್ಯಾಪಕ ಸ್ವಾಗತ ವ್ಯಕ್ತವಾಗುತ್ತಿದೆ. ಮುಳುಗಡೆ ಸಂತ್ರಸ್ತರಲ್ಲದವರಿಗೆ ಅದರಿಂದ ಪ್ರಯೋಜನವಿಲ್ಲ ಎನ್ನುತ್ತಿದ್ದವರ ಪಾಲಿಗೆ ನಗರಾಭಿವೃದ್ಧಿ ಪ್ರಾಧಿಕಾರ ಆಸರೆ ಆಗಲಿದೆ ಎನ್ನುವ ವಿಶ್ವಾಸವನ್ನು ನಗರದ ಜನತೆ ವ್ಯಕ್ತ ಪಡಿಸುತ್ತಿದ್ದಾರೆ.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ಕೇವಲ ಆಲಮಟ್ಟಿ ಜಲಾಶಯ ಮುಳುಗಡೆ ಸಂತ್ರಸ್ತರಿಗೆ ಮಾತ್ರ ಅನುಕೂಲವಾಗುತ್ತಿದೆ. ಅದು ರಚನೆ ಆಗಿದ್ದೇ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವುದು, ಸ್ಥಳಾಂತರ, ಪುನರ್‌ವಸತಿ ಕಲ್ಪಿಸುವ ಸಲುವಾಗಿ ರಚನೆ ಆಗಿದ್ದು. ಬಾಗಲಕೋಟೆ ಜಿಲ್ಲಾ ಕೇಂದ್ರವಾದ ಬಳಿಕ ವೇಗದಲ್ಲಿ ಬೆಳೆಯುತ್ತಿದೆ. ಬೆಳೆಯುತ್ತಿರುವ ನಗರದಲ್ಲಿನ ಜನತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಗತ್ಯವಿತ್ತು.

ಸ್ಥಳೀಯ ಶಾಸಕ ವೀರಣ್ಣ ಚರಂತಿಮಠರ ಇಚ್ಛಾಶಕ್ತಿ ಫಲವಾಗಿ ರಾಜ್ಯ ಸರ್ಕಾರ ಇದೀಗ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಆದೇಶಿಸಿರುವುದು ನಗರದಲ್ಲಿನ ಮುಳುಗಡೆ ಸಂತ್ರಸ್ತರಲ್ಲದ ಜನತೆಯಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಸದ್ಯ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ನಗರಸಭೆ ವ್ಯಾಪ್ತಿ ಮಾತ್ರ ಬರಲಿದ್ದು, ನಗರಸಭೆ ಮಹಾ ನಗರ ಪಾಲಿಕೆ ಆದ ಬಳಿಕ ಸುತ್ತಲಿನ ಗ್ರಾಮಗಳು ಇದರ ವ್ಯಾಪ್ತಿಗೆ ಸೇರಲಿವೆ. ಆಗ ನಗರದ ಸುತ್ತಲೂ ಬುಡಾ ಹೊಸ ನಗರಗಳ ನಿರ್ಮಾಣಕ್ಕೆ ಅನುಕೂಲವಾಗಲಿದೆ.

ಬಾಗಲಕೋಟೆ ನಗರಸಭೆ ಮಹಾನಗರ ಪಾಲಿಕೆ ಆದಾಗಲೇ ಅದಕ್ಕೊಂದು ಖದರ್ ಬರಲಿದೆ. ಬುಡಾ ಜತೆ ಜತೆಗೆ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಗಳು ಸರ್ಕಾರದ ಮಟ್ಟದಲ್ಲಿ ನಡೆದಿದ್ದು, ಎಷ್ಟು ಬೇಗ ನಗರಸಭೆ ಮಹಾ ನಗರ ಪಾಲಿಕೆ ಆಗುತ್ತದೋ ಅಷ್ಟು ಬೇಗ ನಗರ ಸುತ್ತಲಿನ ಪ್ರದೇಶದಲ್ಲಿ ಬುಡಾದಿಂದ ಹೊಸ ಬಡಾವಣೆಗಳ ನಿರ್ಮಾಣ ಸಾಧ್ಯವಾಗಲಿದೆ. ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗಲು ನಗರಸಭೆ ಆದಷ್ಟು ಬೇಗ ಮಹಾನಗರ ಪಾಲಿಕೆ ಆಗಿ ಮೇಲ್ದರ್ಜೆಗೇರಲೇ ಬೇಕಿದೆ. ಅಲ್ಲಿಯ ವರೆಗೂ ಬುಡಾ ನಾಮ್ ಕಾ ವಾಸ್ತೆ ಎನ್ನುವಂತಾಗಲಿದೆಯಾದರೂ ಭವಿಷ್ಯದಲ್ಲಿ ನಗರ ಬೆಳವಣಿಗೆಯಲ್ಲಿ ಅದರ ಪಾತ್ರ ಅನನ್ಯವಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಿಂದ ರಾಜಕೀಯವಾಗಿಯೂ ಕಮಲ ಪಾಳೆಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಸೇರಿದಂತೆ ಸದಸ್ಯ ಹುದ್ದೆಗಳು ಸೃಷ್ಟಿಯಾಗಿದ್ದು, ಸಹಜವಾಗಿಯೇ ಅಧ್ಯಕ್ಷ ಗಾದಿಗೆ ಆಕಾಂಕ್ಷಿಗಳು ಹುಟ್ಟಿಕೊಳ್ಳಲಿದ್ದಾರೆ. ಪ್ರಾಧಿಕಾರದ ಪ್ರಥಮ ಅಧ್ಯಕ್ಷರು ಯಾರಾಗಲಿದ್ದಾರೆ ಎನ್ನುವ ಕುರಿತು ಚರ್ಚೆಗಳು ಆರಂಭಗೊಂಡಿವೆ.  ಈಗಾಗಲೇ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಶಾಸಕರೇ ನೇಮಕಗೊಂಡಿದ್ದು, ಇತರ ಪ್ರಬಲ ಸಮುದಾಯಗಳಿಗೆ ಸೇರಿರುವ ಪಕ್ಷದ ಮೂವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇದೀಗ ಬುಡಾ ಅಧ್ಯಕ್ಷಗಿರಿ ಕೂಡ ಪ್ರಬಲ ಸಮುದಾಯದ ಪಾಲಾಗಲಿದ್ದು, ಶಾಸಕ ನಿಷ್ಠರೊಬ್ಬರು ನೇಮಕಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ. 

ಏತನ್ಮಧ್ಯೆ ಸಂಘ ಪರಿವಾರ ಮತ್ತು ಪಕ್ಷದ ಸಕ್ರೀಯ ಕಾರ್ಯಕರ್ತರೊಬ್ಬರಿಗೆ ಅವಕಾಶ ಸಿಗಬಹುದು ಎನ್ನುವ ಲೆಕ್ಕಾಚಾರ ನಡೆದಿದೆ. ಪ್ರಾಧಿಕಾರದ ಸದಸ್ಯ ಸ್ಥಾನಗಳು ಸಂಘ ನಿಷ್ಠ ಕಾರ್ಯಕರ್ತರಿಗೆ, ಅಧ್ಯಕ್ಷ ಸ್ಥಾನ ಮಾತ್ರ ಶಾಸಕರ ಆಪ್ತರ ಪಾಲಾಗುವುದಂತೂ ಸ್ಪಷ್ಟವಾಗಿದ್ದು, ಬುಡಾ ರಚನೆಯಿಂದ ಖಾಸಗಿ ಬಡಾವಣೆಗಳ ನಿರ್ಮಾಣ ಶಕ್ತಿಗಳಿಗೆ ಭಾರಿ ಹೊಡೆ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com