ಟಿಪ್ಪು, ಅಬ್ಬಕ್ಕ, ರಾಯಣ್ಣ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಠ್ಯ ಕಡಿತ ಅಂತಿಮವಾಗಿಲ್ಲ: ಸುರೇಶ್ ಕುಮಾರ್

ಕೋವಿಡ್-19 ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಒಂದರಿಂದ ಹತ್ತನೇ ತರಗತಿವರೆಗೆ ಎಲ್ಲ ವಿಷಯಗಳ ವೈಜ್ಞಾನಿಕ ಪಠ್ಯ ಕಡಿತಕ್ಕೆ ಮುಂದಾಗಿದ್ದು, ಇನ್ನೂ ಶೈಕ್ಷಣಿಕ ವರ್ಷದ ಅವಧಿ ನಿಗದಿಯಾಗದ ಹಿನ್ನೆಲೆಯಲ್ಲಿ ಪಠ್ಯಾಂಶಗಳನ್ನು ಅಂತಿಮಗೊಳಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.
ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಒಂದರಿಂದ ಹತ್ತನೇ ತರಗತಿವರೆಗೆ ಎಲ್ಲ ವಿಷಯಗಳ ವೈಜ್ಞಾನಿಕ ಪಠ್ಯ ಕಡಿತಕ್ಕೆ ಮುಂದಾಗಿದ್ದು, ಇನ್ನೂ ಶೈಕ್ಷಣಿಕ ವರ್ಷದ ಅವಧಿ ನಿಗದಿಯಾಗದ ಹಿನ್ನೆಲೆಯಲ್ಲಿ ಪಠ್ಯಾಂಶಗಳನ್ನು ಅಂತಿಮಗೊಳಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಹಾಗೂ ವಿಪಕ್ಷ ನಾಯಕರ ಟ್ವೀಟ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಶೈಕ್ಷಣಿಕ ವರ್ಷ ಪ್ರಾರಂಭವಾಗದಿರುವುದರಿಂದ ನಮಗೆ ಎಷ್ಟು ದಿನಗಳು ದೊರೆಯುತ್ತವೆಂಬುದು ಇನ್ನೂ ಅಸ್ಪಷ್ಟವಾಗಿರುವುದರಿಂದ ಸಿಲೆಬಸ್‍ನ್ನು ಅಂತಿಮಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಲಭ್ಯ ಅವಧಿಯ ಆಧಾರದ ಮೇಲೆ ನಿರ್ಧರಿಸಲಾಗುವುದು. ಪಠ್ಯ ಕಡಿತವು ವೈಜ್ಞಾನಿಕವಾಗಿರಲಿದ್ದು, ಯಾವುದೇ ಪಠ್ಯವನ್ನು ಅನಗತ್ಯವಾಗಿ ಕಡಿತ ಮಾಡುವುದಿಲ್ಲ. ಹಾಗಾಗಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ.

ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಪಠ್ಯಕ್ರಮದಲ್ಲಿ ಶೇ. 30ರಷ್ಟು ಕಡಿತಗೊಳಿಸುವ ಪ್ರಸ್ತಾವನೆ ಇಲ್ಲ. ಪಠ್ಯದಲ್ಲಿ ಜೀಸರ್, ಪ್ರವಾದಿ ಮೊಹಮದ್, ಹೈದರಾಲಿ, ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪಠ್ಯಗಳನ್ನು ಕಡಿತ ಮಾಡಿಲ್ಲ. 2020-21ನೇ ಸಾಲಿನ ಶೈಕ್ಷಣಿಕ ಪಠ್ಯಕ್ರಮಗಳ ತಯಾರಿಯ ಕರಡು ಪ್ರತಿ ಇದಾಗಿದ್ದು, ಇದಿನ್ನೂ ಅಂತಿಮಗೊಳಿಸಿಲ್ಲ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ವಿವರಿಸಿದರು.

ಈ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಾಗಬಹುದಾದ ಬೋಧನಾ ಅವಧಿ, ಸಮೂಹಮಾಧ್ಯಮಗಳು ಅಥವಾ ತಂತ್ರ ಜ್ಞಾನಾಧಾರಿತ ಬೋಧನೆಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬಹುದಾದ ಪಠ್ಯಗಳನ್ನು ಗುರುತಿಸಿ ಇಲಾಖೆಯ ತಂತ್ರಜ್ಞಾನಾಧಾರಿತ ಕಲಿಕಾ ನೀತಿಗನುಗುಣವಾಗಿ ಪಠ್ಯ ಬೋಧನೆಯ ಮಾದರಿಗಳನ್ನು ರಚನೆ ಮಾಡಲು ತಾವು ಇಲಾಖಾಧಿಕಾರಿಗಳಿಗೆ ಸೂಚಿಸಿದ್ದು, ಈ ಎಲ್ಲ ಕ್ರಮಗಳು ಅಂತಿಮಗೊಳ್ಳುವ ಪೂರ್ವ ದಲ್ಲಿಯೇ ಅಚಾತುರ್ಯ ದಿಂದ ಇಲಾಖೆಯ ಜಾಲತಾಣದಲ್ಲಿ ಅನುಮೋದಿತವಾಗದ ಪಠ್ಯಾಂಶಗಳನ್ನು ಪ್ರಕಟಿಸಲಾಗಿದೆ. ಇದನ್ನು ಕೂಡಲೇ ಹಿಂಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 

ಇತಿಹಾಸಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ, ದಾಖಲೆಯ, ಸಂಗತಿಯ ಐತಿಹ್ಯವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರವು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆಯೇ ವಿನಾ ಕೆಡವುವ ಕೆಲಸವನ್ನು ಮಾಡುವುದಿಲ್ಲ. ಇದು ಅನವಶ್ಯಕ ರಾಜಕೀಯ ಗೊಂದಲಗಳಿಗೆ ಅವಕಾಶ ಕಲ್ಪಿಸಬೇಕಿಲ್ಲ ಎಂದು ಸುರೇಶ್‍ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com