ಪಾರ್ಕೋರ್ ತರಬೇತಿ ಪಡೆದಿದ್ದ ಕುಖ್ಯಾತ ಕೊಲಂಬಿಯಾ ಗ್ಯಾಂಗ್ ಬಂಧನ: 6‌ ಕೆಜಿ ಚಿನ್ನಾಭರಣ ವಶ

 ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರ ಪಕ್ಕದ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಅಂತಾರಾಷ್ಟ್ರೀಯ ಕಳ್ಳರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಪಾರ್ಕೋರ್ ತರಬೇತಿ ಪಡೆದಿದ್ದ ಕುಖ್ಯಾತ ಕೊಲಂಬಿಯಾ ಗ್ಯಾಂಗ್ ಬಂಧನ: 6‌ ಕೆಜಿ ಚಿನ್ನಾಭರಣ ವಶ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರ ಪಕ್ಕದ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಅಂತಾರಾಷ್ಟ್ರೀಯ ಕಳ್ಳರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕೊಲಂಬಿಯಾ ದೇಶದ ವಿಲಿಯನ್ ಪಡಿಲ್ಲಾ ಮಾರ್ಟಿನೆಜ್ (48), ಲೇಡಿ ಸ್ಟೇಫನಿಯಾ ಮುನೋಜ್ ಮೋನ್ ಸಾಲ್ವೆ (23), ಕ್ರಿಶ್ಚಿಯನ್ ಯೀನೀಸ್ ನವರೋ ಒಲಾರ್ಥೆ (34) ಬಂಧಿತ ಆರೋಪಿಗಳು.

 ಬಂಧಿತರಿಂದ ಎರಡು ಕೋಟಿ ಐವತ್ತೆಂಟು ಲಕ್ಷ ಆರು ನೂರು ರೂ. ಮೌಲ್ಯದ 6 ಕೆಜಿ 143 ಗ್ರಾಂ ತೂಕದ ಚಿನ್ನಾಭರಣ, 4,00,000 ರೂ. ಮೌಲ್ಯದ 9‌ಮಿಮಿ ಬ್ರೋವಿಂಗ್ ಪಿಸ್ತೂಲ್ ಹಾಗೂ 23 ಲೈವ್ ರೌಂಡ್ಸ್, 60 ಸಾವಿರ ರೂ. ಮೌಲ್ಯದ 2 ದ್ವಿಚಕ್ರ ವಾಹನಗಳು, 3 ಅಸಲಿ ಪಾಸ್ ಪೋರ್ಟ್, 1 ನಕಲಿ ಪಾಸ್ ಪೋರ್ಟ್ ಸೇರಿ 1 ನಕಲಿ ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು 2019ರ ಅಕ್ಟೋಬರ್ ತಿಂಗಳಲ್ಲಿ ಮಾನ್ಯತಾ ಟೆಕ್ ಪಾರ್ಕ್ ಹಿಂಭಾಗದಲ್ಲಿದ್ದ ನಟ ಶಿವರಾಜ್ ಕುಮಾರ್ ಅವರ ಮನೆಯ ಪಕ್ಕದ ಮನೆಯೊಂದರ ರಾತ್ರಿ ಬಾಗಿಲಿನ ಲಾಕ್ ಮುರಿದು ಚಿನ್ನಾಭರಣ ಕಳ್ಳವು ಮಾಡಿದ್ದರು.  ಮಾಹಿತಿ ಪಡೆದ ಸಂಪಿಂಗೇಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾಗ ಸ್ಥಳದಲ್ಲೇ ತಂದಿದ್ದ ಕಾರು ಬಿಟ್ಟು ಶಿವರಾಜ್ ಕುಮಾರ್ ಅವರ ಮನೆಯ ಪಕ್ಕದಿಂದ ಸುಮಾರು 15 ಅಡಿ ಎತ್ತರದ ಗೋಡೆ ಜಿಗಿದು ಪರಾರಿಯಾಗಿದ್ದರು. ಘಟನಾ ಸ್ಥಳದಲ್ಲಿದ್ದ ಇಂಡಿಕಾ ಕಾರು, ವಾkiಟಾಕಿ ಸೇರಿ‌ ಮತ್ತಿತರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು‌.

ಪಾರ್ಕೋರ್ ತರಬೇತಿ ಪಡೆದವರು ಮಾತ್ರ 15 ಅಡಿ ಗೋಡೆ ಜಿಗಿಯಲು ಸಾಧ್ಯ ಎಂದು ಸಿಸಿಟಿವಿ ಪರಿಶೀಲಿಸಿದಾಗ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.
ಸಿಸಿಟಿವಿ ಪರಿಶೀಲಿಸಿದಾಗ 2018ರಲ್ಲಿ ಜಯನಗರದಲ್ಲಿ ನಡೆದ ಕಳವು ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಆಗಿದ್ದ ಗುಸ್ತಾವೋ ಅಲಿಯಾಸ್ ತಾವೋ ಈ ಪ್ರಕರಣದಲ್ಲೂ ಭಾಗಿಯಾಗಿರುವುದು ಖಾತರಿಯಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾಸಿ ವೀಸಾದಡಿ ದೆಹಲಿಗೆ ಬರುತ್ತಿದ್ದ ಆರೋಪಿಗಳು ಮಾಸ್ಟರ್ ಮೈಂಡ್ ಗುಸ್ತಾವೋ ನನ್ನು ಸಂಪರ್ಕಿಸಿ ಬೆಂಗಳೂರಿನ ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುತ್ತಿದ್ದರು. ಸೈಕಲ್ ಮೇಲೆ ನಗರದ ವಿವಿಧೆಡೆ ಪ್ರದಕ್ಷಿಣೆ ಹಾಕಿ ನಂತರ ಯಾರೂ ಕಾಣದ ರೀತಿಯಲ್ಲಿ ಮನೆಯನ್ನು ಟಾರ್ಗೆಟ್ ಮಾಡಿ ರಾತ್ರಿ ಬಂದು ಕಳ್ಳತನ ಎಸಗುತ್ತಿದ್ದರು ಎಂದು ತಿಳಿದು ಬಂದಿದೆ.

ಬಂಧಿತರ ಬಂಧನದಿಂದ ಒಟ್ಟು 31 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿಚಾರಣೆಗಾಗಿ ಕೊತ್ತನೂರು ಪೊಲೀಸರು ಸ್ಪ್ಯಾನಿಷ್ ಭಾಷೆ ಕಲಿತ್ತಿದ್ದು ವಿಶೇಷವಾಗಿತ್ತು. ಆರೋಪಿಗಳು ಸೈಕಲ್ ನಲ್ಲಿ ಸುತ್ತಾಡಿ, ವಾಕಿಟಾಕಿ ಹಿಡಿದು ಕಳ್ಳತನ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಮಾಸ್ಟರ್ ಮೈಂಡ್  ಗುಸ್ತಾವೋ  ಕಳವು ಮಾಡಿದ್ದ ಆಭರಣಗಳನ್ನು ಕರಗಿಸುವಲ್ಲಿ ಪರಿಣಿತಿ ಹೊಂದಿದ್ದು, ಆತನ ಪಾಲಿಗೆ ಬಂದಿದ್ದ ಒಡವೆಗಳನ್ನು ಮನೆಯಲ್ಲೇ ಕರಗಿಸಿ ಚಿನ್ನದ ಇಂಗೋಟ್ ಗಳನ್ನು ಮಾಡಿ ಇಟ್ಟುಕೊಳ್ಳುತ್ತಿದ್ದನು. ಚಿನ್ನ ಕರಗಿಸುವ ಕಲೆಯನ್ನು ಯೂಟ್ಯೂಬ್ ನಲ್ಲಿ ಕಲಿತಿರುವುದಾಗಿ ಆತ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಗೋಟ್ ಗಳನ್ನು ಮಾಡಿದ್ದ ಆರೋಪಿ ನೇಪಾಳ ಮಾರ್ಗವಾಗಿ ಹೊರದೇಶಕ್ಕೆ ಸಾಗಬೇಕು ಎಂಬ ಸಂಚು ರೂಪಿಸಿ ಒಂದು ವಾರದಲ್ಲಿ ಪಲಾಯನ ಮಾಡುವವನಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com