ಜಾನುವಾರುಗಳಿಗೆ ಅಂಟುತ್ತಿರುವ ಚರ್ಮಗಂಟು ರೋಗ: ಕೊರೋನಾ ನಡುವಲ್ಲೇ ರೈತರಿಗೆ ಮತ್ತೊಂದು ಆತಂಕ ಶುರು!

ಕೊರೋನಾ ವೈರಸ್ ನಿಂದಾಗಿ ಈಗಾಗಲೇ ಕಂಗಾಲಾಗಿರುವ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ನಿಂದಾಗಿ ಈಗಾಗಲೇ ಕಂಗಾಲಾಗಿರುವ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 

ಗ್ರಾಮಗಳಲ್ಲಿರುವ ಜಾನುವಾರುಗಳಿಗೆ ಚರ್ಮ ಗಂಟು (ಲಂಫಿ ಸ್ಕಿನ್ ಡಿಸೀಸ್- Lumpy Skin Disease)ರೋಗ ಕಾಣಿಸಿಕೊಳ್ಳುತ್ತಿದೆ. ಇದು ವೈರಸ್ ನಿಂದ ದನ ಮತ್ತು ಎಮ್ಮೆ ಹಾಗೂ ಹಸುಗಳಿಗೆ ರೋಗ ಬರುತ್ತವೆ. ಈ ರೋಗ ಮೂಲತಃ ಆಫ್ರಿಕಾ ದೇಶದ್ದಾಗಿದ್ದು, ನಂತರ ಮಧ್ಯಪ್ರಾಚ್ಯ, ದಕ್ಷಿಣ-ಪೂರ್ವ ಯುರೋಪ್, ರಷ್ಯಾ ಮತ್ತು ಕಜಕಿಸ್ಥಾನಗಳಲ್ಲಿ ಕಂಡು ಬಂದಿತ್ತು. ಇತ್ತೀಚೆಗೆ, ಭಾರತದ ಕೇರಳ ಮತ್ತು ಒಡಿಶಾದಲ್ಲೂ ಕಂಡು ಬಂದಿತ್ತು. 

ಇದೀಗ ನಮ್ಮ ರಾಜ್ಯದ ಚನ್ನರಾಯಪಟ್ಟಣ, ಕಲಬುರಗಿ ವ್ಯಾಪ್ತಿಯಲ್ಲಿ ವಿರಳವಾಗಿ ಕಂಡು ಬರುತ್ತಿದೆ. ಈ ರೋಗ ಬೇಸಿಗೆ ಮುಗಿಯುವ-ಮುಂಗಾರು ಆರಂಭದ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಜಾನುವಾರುಗಳಿಗೆ ಕಚ್ಚುವ ನೊಣಗಳು, ಉಣ್ಣೆಗಳಿಂದ ರೋಗವಿರುವ ಪ್ರಾಣಿಗಳ ನೇರ ಸಂಪರ್ಕದಿಂದಲೂ ಈ ರೋಗ ಪ್ರಾಣಿಗಳಲ್ಲಿ ಹರಡುತ್ತವೆ. ಕೆಲವೊಮ್ಮೆ ಕಲುಷಿತ ನೀರು, ಮೇವಿನಿಂದಲೂ ಹರಡುತ್ತವೆ. ಆದರೆ, ಈ ರೋಗ ಮನುಷ್ಯರಿಗೆ ಹರಡುವುದಿಲ್ಲ ಎಂದು ತಿಳಿದುಬಂದಿದೆ. 

ರೋಗಕ್ಕೀಡಾದ ಪ್ರಾಣಿಗಳಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಒಂದು ವಾರದ ಬಳಿಕ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತದೆ. ಬಳಿಕ ಚರ್ಮದಲ್ಲಿ ತುರಿಕೆಗಳು ಶುರುವಾಗುತ್ತದೆ. ಇವುಗಳಲ್ಲಿ ವೈರಸ್ ಬರೋಬ್ಬರಿ 35 ದಿನಗಳ ಕಾಲ ಬದುಕುಳಿದಿರುತ್ತದೆ. ರಕ್ತ, ವೀರ್ಯ, ಜೊಲ್ಲು, ಕಣ್ಣು ಮತ್ತು ಮೂಗಿನ ಸ್ರವಿಕೆಗಳಲ್ಲಿ ಈ ವೈರಾಣು ಇರುತ್ತವೆ. ರೋಗ ಕಾಣಿಸಿಕೊಂಡ ಆಕಳುಗಳಲ್ಲಿ ಹಾಲು ಕೊಡುವ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತದೆ. ಕೆಲವು ರಾಸುಗಳು ಮೇವು ತಿನ್ನದೆ ಕ್ರಮೇಣವಾಗಿ ಕುಗ್ಗುತ್ತವೆ. ತಳಿ ಸಂವರ್ಧನೆ ಹೋರಿಗಳಲ್ಲಿ ಬಂಜೆತನ ಕಾಣಿಸಿಕೊಳ್ಳಬಹುದು. ಗರ್ಭಧರಿಸಿದ ಹಸುಗಳಲ್ಲಿ ಗರ್ಭಪಾತವಾಗಿ, ಬಹುಕಾಲದವರೆಗೆ ಗರ್ಭದರಿಸದಂತೆ ಆಗಬಹುದು. ಅಲ್ಲದೆ ಮಾಸು ಚೀಲದ ಮೂಲಕ ರೋಗ ಪ್ರಸರಣದ ಸಾಧ್ಯತೆಗಳೂ ಇವೆ. 

ಈ ರೋಗಕ್ಕೆ ತುರ್ತಾಗಿ ಚಿಕಿತ್ಸೆ ಕೊಡಿಸದೆ ಹಾಗೇ ಇದ್ದರೆ, ಚರ್ಮದಲ್ಲಿ ಗಂತಿಗಳು ಕೊಳೆತು, ನೊಣಗಳ ಉಪಟಳದಿಂದ ಚರ್ಮದಲ್ಲಿ ಆಳವಾದ ರಂಧ್ರಗಳಾಗುತ್ತವೆ. 

ರಾಜ್ಯದಲ್ಲಿ ಈ ರೋಗ ರಾಮನಗರ, ಕನಕಪುರ, ಹೊಸಕೋಟೆ, ಕೆ.ಆರ್.ಪುರಂನಲ್ಲಿ ಒಟ್ಟು 700 ಪ್ರಕರಣಗಳು ವರದಿಯಾಗಿವೆ ಎಂದು ಪಶುಸಂಗೋಪನಾ ಇಲಾಖೆ ಮಾಹಿತಿ ನೀಡಿದೆ. 

ಗೋಟ್ ಪೋಕ್ಸ್ ಲಸಿಕೆ ಬಳಕೆ ಮೂಲಕ ರೋಗವನ್ನು ನಿಯಂತ್ರಿಸಬಹುದು. ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆಹಚ್ಚುವುದರಿಂದ ಸೋಂಕು ಹರಡುವುದನ್ನು ತಪ್ಪಿಸಬಹುದು. ರೋಗಪೀಡಿತ ಜಾನುವಾರುಗಳಿಗೆ ಆ್ಯಂಟಿಬಯೋಟಿಕ್ಸ್, ಆ್ಯಂಟಿ ಇನ್ಫ್ಲಮೇಟರಿ ಮತ್ತು ಆ್ಯಂಟಿ ಹಿಸ್ಟಮೈನ್‌ಗಳೊಂದಿಗೆ ಚಿಕಿತ್ಸೆ ನೀಡಬಹುದು. ಇದರ ಜೊತೆಗೆ ಲಿವರ್ ಟಾನಿಕ್ ಗಳು, ಫ್ಲೈ ರೆಪೆಲ್ಲೆಂಟ್ಸ್ ಗಳನ್ನು ಬಳಕೆ ಮಾಡಬಹುದಾಗಿದೆ ಎಂದು ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಬಿ ಎಂ ವೀರಗೌಡ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com