108 ಚಾಲಕನ ಮೇಲಿನ ಹಲ್ಲೆ ವಿಡಿಯೋ ವೈರಲ್: ಟ್ವಿಟ್ಟರ್ ನಲ್ಲಿ ಸುಧಾಕರ್ ಅಸಮಾಧಾನ

108 ಆ್ಯಂಬುಲೆನ್ಸ್‌ ಚಾಲಕನಿಗೆ ಆಸ್ಪತ್ರೆ ಆವರಣದಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಗುರುವಾರ ಜರುಗಿದೆ. ಚಾಲಕನ ಮೇಲಿನ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 108 ಆ್ಯಂಬುಲೆನ್ಸ್‌ ಚಾಲಕನಿಗೆ ಆಸ್ಪತ್ರೆ ಆವರಣದಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಗುರುವಾರ ಜರುಗಿದೆ. ಚಾಲಕನ ಮೇಲಿನ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

75 ವರ್ಷ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಸಂಜೆ 4ರ ಸುಮಾರಿಗೆ ಯೋಗೇಶ್‌ ಆ್ಯಂಬುಲೆನ್ಸ್‌ ತೆಗೆದುಕೊಂಡು ಆ ವ್ಯಕ್ತಿಯನ್ನು ನಗರದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ 20 ನಿಮಿಷ ಬಳಿಕ ದಾಖಲು ಮಾಡಿಕೊಳ್ಳುವುದಾಗಿ ಹೇಳಿದ್ದು, ಅಲ್ಲಿಯವರೆಗೂ ಆ್ಯಂಬುಲೆನ್ಸ್‌ನಲ್ಲಿ ಸೋಂಕಿತ ಇರಲಿ ಎಂದಿದ್ದಾರೆ.

ಈ ನಡುವೆ ಸೋಂಕಿತ ಮೃತಪಟ್ಟಿದ್ದಾರೆ. ಈ ವೇಳೆ ಮೃತ ಸೋಂಕಿನ ಕಡೆಯವರು ಆ್ಯಂಬುಲೆನ್ಸ್‌ ಚಾಲಕನಿಗೆ ಆಕ್ಸಿಜನ್‌ ನೀಡದಿರುವುದೇ ಸಾವಿಗೆ ಕಾರಣ ಎಂದು ಆರೋಪಿಸಿ, ಆಸ್ಪತ್ರೆ ಆವರಣದಲ್ಲೇ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ. ಈ ವೇಳೆ ಸದಾಶಿವನಗರ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ

ಆಸ್ಪತ್ರೆಯ ಆವರಣದಲ್ಲಿ ಆ್ಯಂಬುಲೆನ್ಸ್‌ ಚಾಲಕ ಯೋಗೇಶ್‌ ಮೇಲೆ ಮೃತ ಸೋಂಕಿತನ ಕಡೆಯವರು ಹಲ್ಲೆ ಮಾಡುತ್ತಿರುವ 14 ಸೆಂಕೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದ್ದು, ಚಾಲಕನ ಮೇಲಿನ ಹಲ್ಲೆಗೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್‌ ಅವರೇ ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಹಾಕಿ ಘಟನೆಯನ್ನು ಖಂಡಿಸಿದ್ದಾರೆ. ಶೀಘ್ರ ದಾಖಲಿಸಿಕೊಂಡಿದ್ದರೆ ಪ್ರಾಣ ಉಳಿಯುತ್ತಿತ್ತು,: ಆಸ್ಪತ್ರೆಯಲ್ಲಿ ರೋಗಿಯನ್ನು ದಾಖಲು ಮಾಡಿಕೊಳ್ಳದೆ ಕಾಯಿಸಿದ ಪರಿಣಾಮ ರೋಗಿ ಆ್ಯಂಬುಲೆನ್ಸ್‌ನಲ್ಲೇ ಮೃತಪಟ್ಟಿದ್ದಾರೆ ಎಂಬ ಸುದ್ದಿ ನಿಜಕ್ಕೂ ನೋವಿನ ಸಂಗತಿ. ಸರ್ಕಾರ ಸಾವಿನ ಸಂಖ್ಯೆಯನ್ನು ಇಳಿಸಲು ಶತಪ್ರಯತ್ನ ಮಾಡುತ್ತಿದೆ. ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ಬೇಗ ದಾಖಲಿಸಿಕೊಂಡಿದ್ದರೆ ಪ್ರಾಣ ಉಳಿಯುತ್ತಿತ್ತು ಎಂದು ಟ್ವೀಟ್‌ ಮಾಡಿದ್ದಾರೆ. ವೈದ್ಯರ ಮೇಲೆ ಹಲ್ಲೆ ನಂತರ ಆ್ಯಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದು ಆಸ್ಪತ್ರೆ ವೈದ್ಯ ನರೇಶ್ ಶೆಟ್ಟಿ ಹೇಳಿದ್ದಾರೆ, ಕೊರೋನಾ ವಾರಿಯರ್ಸ್ ಗಳಿಗೆ ರಕ್ಷಣೆ ನೀಡಬೇಕೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com