ಕೊರೋನಾ ವೈರಸ್ ನಿರ್ವಹಣೆ: ಕರ್ನಾಟಕದ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ

ಕರ್ನಾಟಕದಲ್ಲಿ ಕೊರೋನಾ ವೈರಸ್ ನಿರ್ವಹಣೆಗೆ ಸಂಬಂಧಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ವೈರಸ್ ನಿರ್ವಹಣೆಗೆ ಸಂಬಂಧಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೆಳ್ಳಿ ಮಹೋತ್ಸವದ ಆಚರಣೆಯನ್ನು ವಿಡಿಯೋ ಲಿಂಕ್ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ, ರಾಜ್ಯದ ಕೊರೋನಾ ವೈರಸ್ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರವನ್ನು ಶ್ಲಾಘಿಸಿದರು.

'ಕೋವಿಡ್ -19 ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕರ್ನಾಟಕ ಸರ್ಕಾರದ ಪ್ರಯತ್ನವನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. ವೈರಸ್ ಅದೃಶ್ಯ ಶತ್ರುವಾಗಿರಬಹುದು. ಆದರೆ, ನಮ್ಮ ಕೊರೋನಾ ಯೋಧರು ಅಜೇಯರಾಗಿದ್ದಾರೆ ಮತ್ತು ಅದೃಶ್ಯ ಹಾಗೂ ಅಜೇಯ ವಿರುದ್ಧದ ಯುದ್ಧದಲ್ಲಿ ನಮ್ಮ ವೈದ್ಯಕೀಯ  ಕಾರ್ಯಕರ್ತರು ಗೆಲ್ಲುವುದು ಖಚಿತ. ಅಂತೆಯೇ ಕೊರೋನಾ ವಾರಿಯರ್ಸ್ ಮೇಲಿನ ಹಲ್ಲೆಗಳನ್ನು ಕಟು ಶಬ್ಧಗಳಲ್ಲಿ ಖಂಡಿಸುತ್ತೇನೆ ಎಂದು ಹೇಳಿದ ಪ್ರಧಾನಿ ಮೋದಿ, ಇಂತಹ ಅಮಾನವೀಯ ಘಟನೆಗಳನ್ನು ಸಹಿಸಲಸಾಧ್ಯ.ಕೊರೋನಾ ವಾರಿಯರ್ಸ್ ರಕ್ಷಣೆಗೆ ತೆಗೆದುಕೊಳ್ಳಬಹುದಾದ ಎಲ್ಲ ಕ್ರಮಗಳನ್ನೂ  ಕೈಗೊಳ್ಳುತ್ತೇವೆ. ಇದೇ ವೇಳೆ ಕೊರೋನಾ ವಾರಿಯರ್ಸ್ ಗೆ ನೈತಿಕ ಬಲ ತುಂಬಲು ಅವರಿಗೆ 50ಲಕ್ಷ ರೂಗಳ ವಿಮೆ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.

ಟೆಲಿಮೆಡಿಸಿನ್‌ನಲ್ಲಿ ಜನರು ಉದ್ದೇಶಪೂರ್ವಕವಾಗಿ ಮತ್ತು ಆದರ್ಶಪ್ರಾಯರಾಗಬೇಕು. '' ಮೇಕ್ ಇನ್ ಇಂಡಿಯಾ '' ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹೇಗೆ ಲಾಭ ಗಳಿಸಬಹುದು ಮತ್ತು ಹೆಚ್ಚಿನ ಐಟಿ ಸೇವೆಗಳನ್ನು ಆರೋಗ್ಯ ರಕ್ಷಣೆಯಲ್ಲಿ ಹೇಗೆ ಸೇರಿಸಿಕೊಳ್ಳಬೇಕು ಎಂದು ಮೋದಿ ಕೋರಿದರು.

ಕಳೆದ ಆರು ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಮಾಡಿದ್ದು, ಪ್ರಮುಖ ನಾಲ್ಕು ಅಂಶಗಳಿಗೆ ಆದ್ಯತೆ ನೀಡಿದೆ. ಅದರಲ್ಲಿ ರೋಗಬಾರದಂತೆ ತಡೆಯುವುದು ಪ್ರಮುಖವಾಗಿದ್ದು, ಯೋಗ, ಆಯುರ್ವೇದ ವಲಯಕ್ಕೆ ಒತ್ತು ನೀಡಿದೆ. ದೇಶದಲ್ಲಿ 40 ಸಾವಿರ ವೆಲ್ ನೆಸ್ ಕೇಂದ್ರಗಳನ್ನು ತೆರೆಯಲಾಗಿದ್ದು,  ಮೂಲಕ ಜೀವನ ಶೈಲಿಯಿಂದ ಬರುವ ರೋಗಗಳ ನಿಯಂತ್ರಣಕ್ಕೆ ಆದ್ಯತೆ ನೀಡಲಾಗಿದೆ ಎಂದರು. ಸ್ವಚ್ಛ ಭಾರತ್ ಅಭಿಯಾನದ ಯಶಸ್ಸಿನಿಂದಲೂ ರೋಗ ನಿಯಂತ್ರಣಕ್ಕೆ ಆದ್ಯತೆ ದೊರೆತಿದೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತಿದ್ದು, ನಮ್ಮ ಸರ್ಕಾರ  ದೇಶಾದ್ಯಂತ 22 ಎಮ್ಸ್ ಮಾದರಿಯ ವೈದ್ಯಕೀಯ ಕಾಲೇಜುಗಳನ್ನು ತೆರೆದಿದೆ. ಎಂ.ಬಿ.ಬಿ.ಎಸ್ ನಲ್ಲಿ 30 ಸಾವಿರ, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದಲ್ಲಿ 15 ಸಾವಿರ ಸೀಟುಗಳನ್ನು ಹೆಚ್ಚಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ವೈದ್ಯಕೀಯ ಶಿಕ್ಷಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ವೈದ್ಯಕೀಯ ಕ್ಷೇತ್ರಕ್ಕೆಸಂಬಂಧಿಸಿದಂತೆ 50 ಕ್ಕೂ ಹೆಚ್ಚು ವೃತ್ತಿಪರರನ್ನು ಒಳಗೊಂಡಂತೆ ಹೊಸ ಕಾನೂನು ಜಾರಿಗೆ ತರುತ್ತಿದ್ದು, ಇದು ಅನುಮೋದನೆಗೊಂಡರೆ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ನಿವಾರಣೆಯಾಗಲಿದೆ ಎಂದರು, 

ಸರ್ಕಾರ ಆಧುನಿಕ ವೈದ್ಯಕೀಯ ಚಿಕಿತ್ಸೆಗೆ ಒತ್ತು ನೀಡುತ್ತಿದ್ದು, ಬರುವ ದಿನಗಳಲ್ಲಿ ಟೆಲಿ ಮೆಡಿಸನ್ ಪದ್ಥತಿಯನ್ನು ದೊಡ್ಡಮಟ್ಟದಲ್ಲಿ ವಿಸ್ತರಿಸಲು ಉದ್ದೇಶಿಸಿದೆ. ಜತೆಗೆ ಆರೋಗ್ಯ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾಗೆ ಒತ್ತು ನೀಡುತ್ತಿದ್ದು, ದೇಶದ ಕೊರೋನಾ ವಾರಿಯರ್ಸ್ ಗೆ ಒಂದು ಕೋಟಿ ಪಿಪಿಇ ಕಿಟ್ ಗಳು, 1.20  ಕೋಟಿ ಎನ್ 95 ಮಾಸ್ಕ್ ಗಳನ್ನು ವಿತರಿಸಲಾಗಿದೆ. 12 ಕೋಟಿ ಮಂದಿ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಂಡಿರುವುದು ಸಹ ಮತ್ತೊಂದು ಮಹತ್ವದ ಬೆಳವಣಿಗೆ ಎಂದು ನರೇಂದ್ರ ಮೋದಿ ಹೇಳಿದರು. ರಾಜೀವ್ ಗಾಂಧಿ ವಿ.ವಿ. ಅದ್ಭುತವಾದ ಕೆಲಸ ಮಾಡಿದೆ.25 ವರ್ಷಗಳ ಬೋಧನೆ, ತರಬೇತಿ,  ಸಹಸ್ರಾರು ವೈದ್ಯರನ್ನು ನಿರ್ಮಿಸುವ ಮೂಲಕ ತನ್ನ ಯಶೋಗಾಥೆ ನಿರ್ಮಿಸಿದೆ. ದೇಶದ ವೈದ್ಯಕೀಯ ವಲಯದಲ್ಲಿ ಮತ್ತಷ್ಟು ಸೇವೆ ಸಲ್ಲಿಸಲಿ ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಪಾಲ ವಜುಭಾಯ್ ವಾಲಾ, ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್, ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ನಾರಾಯಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com