ಕೋವಿಡ್-19: ಬೆಂಗಳೂರು ಮೀರಿಸಿದ ಉಡುಪಿ, ಒಂದೇ ದಿನ 230 ಹೊಸ ಪ್ರಕರಣ, 500ರ ಗಡಿಯತ್ತ ಸೋಂಕಿತರ ಸಂಖ್ಯೆ

ಕೊರೋನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ರಾಜಧಾನಿ ಬೆಂಗಳೂರನ್ನು ಮೀರಿಸಿರುವ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ  230  ಪ್ರಕರಣ ಪತ್ತೆಯಾಗಿದೆ.ಈ ಪೈಕಿ ಬಹುತೇಕ ಮಂದಿ ಕುಂದಾಪುರ ತಾಲೂಕಿನವರಾಗಿದ್ದಾರೆ.
ಕ್ವಾರಂಟೈನ್ ವ್ಯವಸ್ಥೆ ಪರಿಶೀಲಿಸುತ್ತಿರುವ ಜಿಲ್ಲಾಧಿಕಾರಿ ಡಾ. ಜಿ. ಜಗದೀಶ್
ಕ್ವಾರಂಟೈನ್ ವ್ಯವಸ್ಥೆ ಪರಿಶೀಲಿಸುತ್ತಿರುವ ಜಿಲ್ಲಾಧಿಕಾರಿ ಡಾ. ಜಿ. ಜಗದೀಶ್

ಮಂಗಳೂರು: ಕೊರೋನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ರಾಜಧಾನಿ ಬೆಂಗಳೂರನ್ನು ಮೀರಿಸಿರುವ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ  230  ಪ್ರಕರಣ ಪತ್ತೆಯಾಗಿದೆ.ಈ ಪೈಕಿ ಬಹುತೇಕ ಮಂದಿ ಕುಂದಾಪುರ ತಾಲೂಕಿನವರಾಗಿದ್ದಾರೆ.

ಆರೋಗ್ಯ ಇಲಾಖೆ ಮೂಲಗಳ ಪ್ರಕಾರ,  ಕುಂದಾಪುರ ತಾಲೂಕಿನಿಂದಲೇ 200 ಪ್ರಕರಣಗಳು ವರದಿಯಾಗಿದ್ದು, ಉಳಿದವು ಉಡುಪಿ ಮತ್ತು ಕಾರ್ಕಳ ತಾಲೂಕುಗಳಿಗೆ ಸೇರಿವೆ, ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿಯೇ ಅತಿ ಹೆಚ್ಚು ಎಂಬಂತೆ  500ರ ಗಡಿಯತ್ತ ಸಾಗಿದೆ.

ಆದಾಗ್ಯೂ, ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯ ವಲಸಿಗ ಕಾರ್ಮಿಕರ ಆಗಮನ ಹಾಗೂ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸುತ್ತಿರುವುದರಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಜಿಲ್ಲೆಯಲ್ಲಿ ವಿಶೇಷವಾಗಿ ಕುಂದಾಪುರದಲ್ಲಿನ  ಕಳಪೆ ಕ್ವಾರಂಟೈನ್ ವ್ಯವಸ್ಥೆಯೂ ಇದಕ್ಕೆ ಕಾರಣವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೆಲ ಕ್ವಾರಂಟೈನ್ ಕೇಂದ್ರಗಳಲ್ಲಿ ನಾಲ್ಕು ಸೋಂಕಿತರನ್ನು ಒಂದೇ ಕೊಠಡಿಗಳಲ್ಲಿ ಇರಿಸಲಾಗುತ್ತಿದೆ. ಅಧಿಕಾರಿಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಸಾಮಾಜಿಕ ಅಂತರ ನಿಯಮವನ್ನು ಅನುಸರಿಸುತ್ತಿಲ್ಲ ಎಂದು ಕೆಲವರು ಹೇಳುತ್ತಾರೆ. 

ಮೇ ತಿಂಗಳಿನಿಂದ ಮಹಾರಾಷ್ಟ್ರ ಒಂದರಿಂದಲೇ  8 ಸಾವಿರ ಜನರು ಉಡುಪಿಗೆ ಆಗಮಿಸಿದ್ದಾರೆ. ಈ ಪೈಕಿ ಈವರೆಗೂ 5 ಸಾವಿರ ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ಜೂನ್ 1ರಿಂದ ಅಂತರ ರಾಜ್ಯ ಮಾರ್ಗಸೂಚಿ ಜಾರಿಯಾದ ಬಳಿಕ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿ ಪೂರೈಸಿದವರನ್ನು ಮನೆಗಳಿಗೆ ಕಳುಹಿಸಲಾಗುತ್ತಿದೆ. 

ಸಾಂಸ್ಥಿಕ ಕ್ವಾರಂಟೈನ್ ಪೂರ್ಣಗೊಳಿಸಿ ಮನೆಗಳಿಗೆ ಹೋಗಿದ್ದ ಬಹುತೇಕ ಮಂದಿಯಲ್ಲಿ  ಇಂದು ಪಾಸಿಟಿವ್ ಕಂಡುಬಂದಿದ್ದು, ಅವರನ್ನು ಚಿಕಿತ್ಸೆಗಾಗಿ ಕೋವಿಡ್-19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com