ಕಲಬುರಗಿಯಲ್ಲಿ 500 ಗಡಿ ದಾಟಿದ ಕೊರೋನಾ, ರಾಜ್ಯದಲ್ಲಿ ಹೊಸದಾಗಿ 267 ಪ್ರಕರಣ, ಸೋಂಕಿತರ ಸಂಖ್ಯೆ 4063ಕ್ಕೆ ಏರಿಕೆ

ಲಾಕ್ ಡೌನ್ ಸಡಿಲಗೊಳಿಸಿದ ನಂತರ ನೆರೆಯ ಮಹಾರಾಷ್ಟ್ರ ಕರುನಾಡಿಗೆ ಕಂಟಕವಾಗಿ ಕಾಡುತ್ತಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಾಕ್ ಡೌನ್ ಸಡಿಲಗೊಳಿಸಿದ ನಂತರ ನೆರೆಯ ಮಹಾರಾಷ್ಟ್ರ ಕರುನಾಡಿಗೆ ಕಂಟಕವಾಗಿ ಕಾಡುತ್ತಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬುಧವಾರ ಒಂದೇ ದಿನ 267 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 4063ಕ್ಕೆ ಏರಿಕೆಯಾಗಿದೆ.

ಕಲಬುರಗಿಯಲ್ಲಿ ಇಂದು ಬರೋಬ್ಬರಿ 106 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 500 ಗಡಿ ದಾಟಿದೆ.

ದಾವಣಗೆರೆ ಜಿಲ್ಲೆಯ 80 ವರ್ಷದ ಮಹಿಳೆ ಮೇ 29ರಂದು ಮೃತಪಟ್ಟಿದ್ದರು. ಇವರ ಮರಣೋತ್ತರ ವರದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಇವರು ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಕಲಬುರಗಿಯಲ್ಲಿ 106, ಉಡುಪಿಯಲ್ಲಿ 62, ಬೆಂಗಳೂರು ನಗರದಲ್ಲಿ 20, ಮಂಡ್ಯದಲ್ಲಿ 13, ಯಾದಗಿರಿಯಲ್ಲಿ 9, ರಾಯಚೂರಿನಲ್ಲಿ 35, ಹಾಸನ 1, ದಾವಣಗೆರೆಯಲ್ಲಿ 3, ವಿಜಯಪುರದಲ್ಲಿ 6, ದಕ್ಷಿಣ ಕನ್ನಡ, ಮೈಸೂರು, ಬಾಗಲಕೋಟೆ, ಶಿವಮೊಗ್ಗದಲ್ಲಿ ತಲಾ 2, ಬಳ್ಳಾರಿ, ಧಾರವಾಡದಲ್ಲಿ ತಲಾ 1, ಕೋಲಾರದಲ್ಲಿ 2, ಬೆಂಗಳೂರು ಗ್ರಾಮಾಂತರದಲ್ಲಿ 1 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 250 ಮಂದಿ ಹೊರರಾಜ್ಯಗಳಿಂದ ಆಗಮಿಸಿದವರಾಗಿದ್ದಾರೆ.

ರಾಜ್ಯದಲ್ಲಿ ಬುಧವಾರ 111 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ 1514 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ರಾಜ್ಯದಲ್ಲಿ 2494 ಸಕ್ರಿಯ ಪ್ರಕರಣಗಳಿವೆ. ಒಟ್ಟು 55 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಕಲಬುರಗಿ 510 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನಕ್ಕೇರಿಕೆಯಾಗಿದೆ. ಉಡುಪಿ 472 ಸೋಂಕಿತರೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಬೆಂಗಳೂರು ನಗರ ಮತ್ತು ಮಂಡ್ಯ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಯಾದಗಿರಿ ಐದನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com