ಜುಲೈನಿಂದ ಶಾಲೆ ತೆರೆಯುವ ಸರ್ಕಾರದ ನಿರ್ಧಾರಕ್ಕೆ ತಜ್ಞರ ವಿರೋಧ, ಪೋಷಕರಿಂದ ಆನ್ ಲೈನ್ ಅಭಿಯಾನ!

ರಾಜ್ಯದಲ್ಲಿ ಕೊರೋನಾ ಸೋಂಕು ಆತಂಕಕಾರಿಯಾಗಿ ವ್ಯಾಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಜುಲೈ ತಿಂಗಳಿಂದ ಶಾಲೆಗಳನ್ನು ತೆರೆಯಲು ಮುಂದಾಗಿರುವುದಕ್ಕೆ ಸಾರ್ವಜನಿಕರು, ಶಿಕ್ಷಕರು ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

Published: 03rd June 2020 07:16 PM  |   Last Updated: 03rd June 2020 07:16 PM   |  A+A-


BSY

ಬಿಎಸ್ ಯಡಿಯೂರಪ್ಪ

Posted By : vishwanath
Source : UNI

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಆತಂಕಕಾರಿಯಾಗಿ ವ್ಯಾಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಜುಲೈ ತಿಂಗಳಿಂದ ಶಾಲೆಗಳನ್ನು ತೆರೆಯಲು ಮುಂದಾಗಿರುವುದಕ್ಕೆ ಸಾರ್ವಜನಿಕರು, ಶಿಕ್ಷಕರು ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

ಒಂದೆಡೆ ಶಿಕ್ಷಣ ತಜ್ಞರು, ಶಾಲಾ ಶಿಕ್ಷಕರು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಸರ್ಕಾರದ ನಿರ್ಧಾರ ಮೂರ್ಖತನದಿಂದ ಕೂಡಿದೆ ಎಂದು ಪೋಷಕರು ಆನ್ ಲೈನ್ ಅಭಿಯಾನ ಆರಂಭಿಸಿದ್ದಾರೆ.

ಈ ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸರ್ಕಾರಕ್ಕೆ ಪತ್ರ ಬರೆದು, ಶಿಕ್ಷಕರನ್ನು ಶಾಲೆಗೆ ಆಗಮಿಸಿ ಸಿದ್ಧತೆ ಮಾಡಿಕೊಳ್ಳುವಂತೆ ಹಾಗೂ ಶಾಲೆ ತೆರೆಯುವ ಕುರಿತು ಪೋಷಕರ ಅಭಿಪ್ರಾಯ ಸಂಗ್ರಹಿಸುವಂತೆ ಸೂಚಿಸಿರುವುದು ಸೂಕ್ತ ನಿರ್ಧಾರವಲ್ಲ ಎಂದು ಒತ್ತಾಯಿಸಿದೆ. 

ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬರೆದ ಪತ್ರದಲ್ಲಿ, ಜೂನ್ 5ರಿಂದ ಶಾಲಾ ಕಚೇರಿ ತೆರೆಯುವಂತೆ ನೀಡಿರುವ ಸುತ್ತೋಲೆ ಹಿಂಪಡೆಯಬೇಕು. ಶಿಕ್ಷಕರು ಕೋವಿಡ್‌ ನಿಯಂತ್ರಣಕ್ಕಾಗಿ ಕೆಲಸ ಮಾಡಿದ್ದಾರೆ. ಶಾಲೆ ಆರಂಭದ ದಿನಾಂಕ ನಿಗದಿಯಾಗುವ ಮುನ್ನವೇ ಅವರನ್ನು ಕರೆಸಿಕೊಂಡಿರುವ ಔಚಿತ್ಯವೇನು ಎಂದು ಪ್ರಶ್ನಿಸಿದ್ದಾರೆ. ಈ ನಡುವೆ, ವಿಧಾನ ಪರಿಷತ್‌ ಸದಸ್ಯ ರಘು ಆಚಾರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಕೋವಿಡ್‌ ನಿಯಂತ್ರಣಕ್ಕೆ ಬರುವವರೆಗೆ ಶಾಲೆ ಆರಂಭ ಬೇಡ ಹಾಗೂ 4ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣದ ಅಗತ್ಯವಿಲ್ಲ ಎಂದು ಒತ್ತಾಯಿಸಿದ್ದಾರೆ.

ಆನ್ ಲೈನ್ ಅಭಿಯಾನ:
ಪೋಷಕರು ಸರ್ಕಾರದ ಶಾಲೆ ಆರಂಭಿಸುವ ತರಾತುರಿಯ ನಿರ್ಧಾರದಿಂದ ಸಿಡಿದೆದ್ದಿದ್ದು, ಫೇಸ್ ಬುಕ್ ನಲ್ಲಿ "ಈ ಶೈಕ್ಷಣಿಕ ವರ್ಷ 2020ರಲ್ಲಿ ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ-ನನಗೆ ನನ್ನ ಮಕ್ಕಳ ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ" ಎಂಬ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ, ಸಾಮಾಜಿಕ ಜಾಲತಾಣದಲ್ಲಿ 'ರಾಜ್ಯದಲ್ಲಿ ಶೂನ್ಯ ಕೋವಿಡ್‌ ಪ್ರಕರಣ ದಾಖಲಾಗುವವರೆಗೆ ಅಥವಾ ಔಷಧ ಕಂಡುಹಿಡಿಯುವವರೆಗೆ ಶಾಲೆ ಇಲ್ಲ’ ಎಂಬ ಡಿಜಿಟಲ್‌ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಇದು ಒಟ್ಟು 5 ಲಕ್ಷ ಸಹಿ ಸಂಗ್ರಹಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಕಳುಹಿಸುವ ಗುರಿ ಹೊಂದಿವೆ.

ಎಲ್ಲಾ ಆಯಾಮಗಳನ್ನೂ ಪರಿಗಣಿಸಬೇಕು:
ಈ ಕುರಿತು "ಯುಎನ್ಐ" ಸುದ್ದಿಸಂಸ್ಥೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ, ಶಾಲೆಗಳನ್ನು ಪುನಾರಂಭಿಸುವ ಕುರಿತು ಚರ್ಚೆಗಳು ಕೇವಲ ಮೇಲ್ವರ್ಗ ಮತ್ತು ನಗರ ಕೇಂದ್ರೀಕೃತವಾಗಿ ಚರ್ಚೆಗಳು ನಡೆಯುತ್ತಿವೆ. ಈ ವಿಷಯದಲ್ಲಿ ಗ್ರಾಮೀಣ ಪ್ರದೇಶಗಳು, ಬಡವರು ಮತ್ತು ಕೂಲಿಕಾರ್ಮಿಕರ ಮಕ್ಕಳ ಆಯಾಮಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಈ ಮಹಾಮಾರಿಯಿಂದ ಆರ್ಥಿಕ ದಿವಾಳಿಯಾಗಿರುವ ಕುಟುಂಬಗಳು ಮನೆಯಲ್ಲಿ ಕೈಕಟ್ಟಿ ಕೂರಲು ಸಾಧ್ಯವಿಲ್ಲ . ಅವರು ಕೂಲಿನಾಲಿ ಮಾಡಿ ಜೀವನ ನಿರ್ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ ಮಕ್ಕಳಿಗೆ ಸೂಕ್ತ ರಕ್ಷಣೆ ಆರೈಕೆ ಪೋಷಣೆ ಸರ್ಕಾರದ ಜವಾಬ್ದಾರಿಯಾಗುತ್ತದೆ. ಈ ಎಲ್ಲಾ ಅಂಶಗಳನ್ನು ಸಮಗ್ರವಾಗಿ ನೋಡಬೇಕಾದ ಅವಶ್ಯಕತೆಯಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಶಾಲೆಯ ಪುನರಾರಂಭದ ಚರ್ಚೆಗಳು ಕೇವಲ ಶಾಲೆಯ ಅರಂಭವಾಗ ಬೇಕೋ-ಬೇಡವೋ ಎಂಬುದನ್ನು ಕೇವಲ ಕಲಿಕೆಯ ದೃಷ್ಟಿಯಿಂದ ಮಾತ್ರವಲ್ಲದೆ ಮಕ್ಕಳ ಆರೈಕೆ , ರಕ್ಷಣೆ, ಪೋಷಣೆ ಹಾಗು ಕೆಳಸ್ಥರದ ಕುಟುಂಬಗಳು ಜೀವನಾಧಾರ ಕೆಲಸಗಳನ್ನು ಒತ್ತಡ –ಆತಂಕವಿಲ್ಲದೆ ನಿರ್ವಹಿಸಲು ಪೂರಕ ಬೆಂಬಲ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಚರ್ಚಿಸಬೇಕಿದೆ. ಈ ವಿಷಯದಲ್ಲಿ ಪಾಲಕರ ಜೊತೆ ಜೊತೆಗೆ ವೈದ್ಯಕೀಯ ಕ್ಷೇತ್ರದ ಹಾಗು ಶಿಕ್ಷಣ ಕ್ಷೇತ್ರದ ಪರಿಣಿತರನ್ನು ಒಳಮಾಡಿಕೊಳ್ಳುವುದು ಅತಿ ಮುಖ್ಯ ಎಂದಿದ್ದಾರೆ.

ಶಿಕ್ಷಣಕ್ಕಿಂತ ಜೀವನ ಮುಖ್ಯ:
ಚೈಲ್ಡ್ ಟ್ರಸ್ಟ್ ನ ನಾಗಸಿಂಹ ಜಿ., ಸಂವಿಧಾನದ 21ನೇ ಪರಿಚ್ಛೇದದಲ್ಲಿ ಮನುಷ್ಯನಿಗೆ ಜೀವಿಸುವ ಹಕ್ಕಿದ್ದರೆ, 21(ಎ)ನಲ್ಲಿ ಶಿಕ್ಷಣದ ಹಕ್ಕಿದೆ. ಆದರೆ, ಇಲ್ಲಿ ಜೀವನವೇ ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಶಾಲೆ ಆರಂಭಿಸುವುದರಿಂದ ಮಕ್ಕಳ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಿದಂತಾಗುತ್ತದೆ. ಒಂದೊಮ್ಮೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಒಪ್ಪಿಕೊಂಡರೂ ಶಾಲೆಯಲ್ಲಿ ಮಕ್ಕಳ ಸುರಕ್ಷತೆಗೆ ಯಾವ ಯಾವ ಕ್ರಮಗಳನ್ನು ಕೈಗೊಳ್ಳ ಲಾಗುತ್ತದೆ ಎಂಬ ವಿವರವಾದ ಕೈಪಿಡಿಯನ್ನು ಸರ್ಕಾರ ಸಿದ್ಧಪಡಿಸಬೇಕಾದ ಅವಶ್ಯಕತೆ ಇದೆ ಎಂದಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಕೊನೆಗೊಳ್ಳುವವರೆಗೆ ಶಾಲಾ ಕಚೇರಿಯನ್ನೂ ತೆರೆಯಬಾರದು. ಬಳಿಕ ಪರಿಸ್ಥಿತಿ ನೋಡಿಕೊಂಡು ಶಾಲೆ ಆರಂಭಿಸುವ ಚಿಂತನೆ ನಡೆಸಬಹುದು ಎಂದು ಕೆಲ ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Stay up to date on all the latest ರಾಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp