ಕ್ವಾರಂಟೈನ್ ನಿಂದ ಬಿಡುಗಡೆಯಾಗಿದ್ದಕ್ಕೆ ಪಾರ್ಟಿ ಕೊಟ್ಟ ಭೂಪನಿಗೆ ಬಂತು ಕೊರೋನಾ!

ಕ್ವಾರಂಟೈನ್ ನಿಂದ ಬಿಡುಗಡೆಯಾಗಿದ್ದಕ್ಕೆ ಪಾರ್ಟಿ ಕೊಟ್ಟ ವ್ಯಕ್ತಿಯೊಬ್ಬ, ಮರುದಿನ ಬಂದ ವೈದ್ಯಕೀಯ ವರದಿ ನೋಡಿ ಬೆಸ್ತು ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿವಾಡಿ ಗ್ರಾಮದಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಕ್ವಾರಂಟೈನ್ ನಿಂದ ಬಿಡುಗಡೆಯಾಗಿದ್ದಕ್ಕೆ ಪಾರ್ಟಿ ಕೊಟ್ಟ ವ್ಯಕ್ತಿಯೊಬ್ಬ, ಮರುದಿನ ಬಂದ ವೈದ್ಯಕೀಯ ವರದಿ ನೋಡಿ ಬೆಸ್ತು ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿವಾಡಿ ಗ್ರಾಮದಲ್ಲಿ ನಡೆದಿದೆ. 

ಕ್ವಾರಂಟೈನ್ ನಿಂದ ಬಿಡುಗಡೆಯಾದ ಖುಷಿಗೆ 35 ವರ್ಷದ ವ್ಯಕ್ತಿ ತನ್ನ 13-14 ಮಂದಿ ಸ್ನೇಹಿತರನ್ನು ಮನೆಗೆ ಕರೆಸಿಕೊಂಡು ಪಾರ್ಟಿ ಮಾಡಿದ್ದ. ಇದಾದ ಮರುದಿನವೇ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿದ್ದು, ಕೂಡಲೇ ಆತನನ್ನು ಬೆಳಗಾವಿಯಲ್ಲಿರುವ ಕೋವಿಡ್ ಗಾಗಿಯೇ ನಿಯೋಜನೆಗೊಂಡಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಆತನ ಗೆಳೆಯಲನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕೆಲ ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ಕ್ವಾರಂಟೈನ್ ನಿಯಮಗಳನ್ನು ಬದಲಿಸಿತ್ತು. 14 ದಿನಗಳ ಕಾಲ ಇದ್ದ ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಇಳಿಸಿತ್ತು. ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಲಕ್ಷಣಗಳಿಲ್ಲದ ಕಾರಣ ವರದಿ ಬರುವುದಕ್ಕೂ ಮುನ್ನವೇ ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮ ತನಗೆ ವೈರಸ್ ಎಲ್ಲ ಎಂದು ತಿಳಿದ ವ್ಯಕ್ತಿ ಖುಷಿಗೆ ಸ್ನೇಹಿತರನ್ನು ಕರೆಸಿಕೊಂಡು ಪಾರ್ಟಿ ಮಾಡಿದ್ದಾನೆಂದು ತಿಳಿದುಬಂದಿದೆ. 

ಕೊರೋನಾ ಪಾಸಿಟಿವ್ ಬಂದಿರುವ ವ್ಯಕ್ತಿ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಇರುವ ವಿಚಾರ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ವ್ಯಕ್ತಿಯೊಂದಿಗೆ ಯಾರೆಲ್ಲಾ ಸಂಪರ್ಕದಲ್ಲಿದ್ದರು ಎಂಬುದನ್ನು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ವ್ಯಕ್ತಿಯಲ್ಲಿ ಕೊರೋನಾ ದೃಢವಟ್ಟಿರುವ ಹಿನ್ನೆಲೆಯಲ್ಲಿ ಇದೀಗ ಗ್ರಾಮದ ಜನತೆಯಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com