ಕೇರಳದ ಆನೆ ಸಾವು ಬೆನ್ನಲ್ಲೇ ಬಹಿರಂಗವಾಯ್ತು ಕಳ್ಳ ಬೇಟೆಗಾರರ ಅಮಾನವೀಯತೆ!

ಕೇರಳದ ಮಲಪ್ಪುರಂನಲ್ಲಿನ ಆನೆ ಸಾವು ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಕಳ್ಳ ಬೇಟೆಗಾರರ ಅಮಾನವೀಯ ಮುಖವಾಡವೊಂದು ಜಗತ್ತಿಗೆ ಪರಿಚಯವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಕೇರಳದ ಮಲಪ್ಪುರಂನಲ್ಲಿನ ಆನೆ ಸಾವು ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಕಳ್ಳ ಬೇಟೆಗಾರರ ಅಮಾನವೀಯ ಮುಖವಾಡವೊಂದು ಜಗತ್ತಿಗೆ ಪರಿಚಯವಾಗಿದೆ.

ಹೌದು..ಪೈನಾಪಲ್ ನಲ್ಲಿ ಸ್ಫೋಟಕ ಇಟ್ಟು ಆನೆಯನ್ನು ಕೊಂದ ಘಟನೆ ಬೆನ್ನಲ್ಲೇ ಕಳ್ಳ ಬೇಟೆಗಾರರ ಅಮಾನವೀಯ ಮುಖವೊಂದರ ಪರಿಚಯ ಇದೀಗ ಜಗತ್ತಿಗೆ ಬಹಿರಂಗವಾಗಿದೆ. ಪ್ರಮುಖವಾಗಿ ಕಾಡು ಹಂದಿಗಳನ್ನು ಬೇಟೆಯಾಡಲು ಬೇಟೆಗಾರರು ಅನುಸರಿಸುವ ಈ ಅಮಾನವೀಯ ನಡೆಗೆ ಇದೀಗ ಕೇರಳದಲ್ಲಿ ಅಮಾಯಕ ಗರ್ಭಿಣಿ ಆನೆ ಬಲಿಯಾಗಿದೆ.

ಕೇರಳದಂತೆಯೇ ಇತ್ತ ಕರ್ನಾಟಕದಲ್ಲೂ ಇಂತಹ ಅಮಾನವೀಯ ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ. ಅಂತಕಕಾರಿ ವಿಚಾರವೆಂದರೆ ಕರ್ನಾಟಕದ ರಾಷ್ಟ್ರೀಯ ಜೈವಿಕ ಉದ್ಯಾನಗಳ ಸಮೀಪದ ಗ್ರಾಮಸ್ಥರೂ ಮತ್ತು ಬೇಟೆಗಾರರು ಕಾಡು ಪ್ರಾಣಿಗಳ ಬೇಟೆಯಾಡಲು ಈ ಉಪಾಯ ಅನುಸರಿಸುತ್ತಾರೆ. ಗ್ರಾಮಸ್ಥರು ಕಾಡು ಪ್ರಾಣಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಈ ನಡೆಯನ್ನು ಅನುಸರಿಸಿದರೆ, ಬೇಟೆಗಾರರು ತಮ್ಮ ಬೇಟೆಗಾಗಿ ಈ ಅಮಾನವೀಯ ನಡೆ ಅನುಸರಿಸುತ್ತಾರೆ. 

ಇಷ್ಟಕ್ಕೂ ಏನಿದು ಮೀಟ್ ಬಾಂಬ್?
ಕೇರಳದಲ್ಲಿ ಆನೆ ಸಾವಿಗೆ ಪೈನಾಪಲ್ ನಲ್ಲಿ ಇಟ್ಟಿದ್ದ ಸ್ಫೋಟಕ ಕಾರಣವಾಗಿತ್ತು. ಇದನ್ನು ಮೀಟ್ ಬಾಂಬ್ ಎನ್ನುತ್ತಾರೆ. ಅರ್ಥಾತ್ ಊಟದ ಬಾಂಬ್.. ಅಂದರೆ ಪ್ರಾಣಿಗಳು ತಿನ್ನುವ ಆಹಾರದಲ್ಲಿ ಸ್ಫೋಚಕಗಳನ್ನು ಇಡಲಾಗುತ್ತದೆ,. ಹೀಗೆ ಈ ಆಹಾರವನ್ನು ತಿಂದ ಕಾಡುಪ್ರಾಣಿಗಳು ಸ್ಫೋಟದಿಂದಾಗಿ ಸಾವನ್ನಪ್ಪುತ್ತವೆ. ಇದೇ ರೀತಿ ಕೇರಳದ ಮಲಪ್ಪುರಂನಲ್ಲೂ ಆನೆ ಸ್ಫೋಟಕ ಇಟ್ಟಿದ್ದ ಪೈನಾಪಲ್ ತಿಂದಿದೆ. ಆಗ ಬಾಯಿಯೊಳಗೆ ಬಾಂಬ್ ಸ್ಫೋಟಗೊಂಡು ಆನೆ ನರಳಿ ನರಳಿ ಸಾವನ್ನಪ್ಪಿದೆ. ಇಂತಹ ಮೀಟ್ ಬಾಂಬ್ ಗಳನ್ನು ಸಾಮಾನ್ಯವಾಗಿ ಕಾಡು ಹಂದಿಗಳ ಬೇಟೆಗಾಗಿ ಬೇಟೆಗಾರರು ಇಡುತ್ತಾರೆ. ಆದರೆ ಹೀಗೆ ಇಟ್ಟ ಬಾಂಬ್ ಗಳಿಗೆ ಕಾಡು ಹಂದಿಗಳು ಮಾತ್ರವಲ್ಲದೇ ಅರಣ್ಯದ ಇತರೆ ಪ್ರಾಣಿಗಳೂ ಕೂಡ ಬಲಿಯಾಗುತ್ತಿವೆ. 

ಹೇಗೆ ತಯಾರಿಸುತ್ತಾರೆ ಈ ಬಾಂಬ್?
ಸಾಮಾನ್ಯವಾಗಿ ಈ ಮೀಟ್ ಬಾಂಬ್ ಗಳನ್ನು ಸ್ಥಳೀಯವಾಗಿ ದೊರೆಯುವ ಸ್ಫೋಟಕಗಳಿಂದ ತಯಾರಿಸುತ್ತಾರೆ. ಅಂದರೆ ಕಲ್ಲು ಬಂಡೆಗಳ ಸ್ಫೋಟಕ್ಕೆ ಬಳಸುವ ಜಿಲೆಟಿನ್ ಕಡ್ಡಿಗಳು, ಗನ್ ಪೌಡರ್ ಗಳು ಮತ್ತು ಪಟಾಕಿ ತಯಾರಿಕೆಗೆ ಬಳಸುವ ರಾಸಾಯನಿಕಗಳಿಂದ ಈ ಬಾಂಬ್ ತಯಾರಿಸುತ್ತಾರೆ. ಬೇಟೆಗಾರರು ಈ ಬಾಂಬ್ ಗಳಲ್ಲಿನ ರಾಸಾಯನಿಕ ಅಥವಾ ಸ್ಫೋಟಕಗಳ ವಾಸನೆ ಬಾರದಂತೆ ಅದನ್ನು ಪ್ರಾಣಿಗಳ ಕರುಳುಗಳಿಂದ ಸುತ್ತಿರುತ್ತಾರೆ. ಇದರೆ ವಾಸನೆಗೆ ಕಾಡು ಹಂದಿಗಳು ಇದರ ಬಳಿಗ ಬಂದಾಗ ಇದು ಸ್ಫೋಟವಾಗುತ್ತದೆ. ಆದರೆ ಆಘಾತಕಾರಿ ಅಂಶವೆಂದರೆ ಈ ವಾಸನೆಗೆ ಕಾಡುಹಂದಿ ಮಾತ್ರವಲ್ಲದೇ ಚಿರತೆ, ನರಿ, ಹುಲಿ ಮತ್ತು ಸಿಂಹಗಳೂ ಕೂಡ ಆಕರ್ಷಣೆಗೊಂಡು ಬರುತ್ತವೆ. ಈ ಮೀಟ್ ಬಾಂಬ್ ಅನ್ನು ಪ್ರಾಣಿಗಳು ಜಗಿಯುತ್ತಲೇ ಅವರು ಸ್ಫೋಟಗೊಂಡು ಅವು ಸಾಯುತ್ತವೆ.  ಕೇರಳದಲ್ಲೂ ಇಂತಹುದೇ ಟ್ರಿಕ್ ಅನುಸರಿಸಲಾಗಿದ್ದು, ಅಲ್ಲಿ ಪೈನಾಪಲ್ ಒಳಗೆ ಸ್ಫೋಟಕವಿಡಲಾಗಿತ್ತು. 

ಮೀಟ್ ಬಾಂಬ್ ತಯಾರಕರ ನಿಯಂತ್ರಣ ಅಸಾಧ್ಯ?
ಇನ್ನು ಈ ಮೀಟ್ ಬಾಂಬ್ ತಯಾರಿಕೆ ಕಾನೂನು ಬಾಹಿರವಾಗಿದ್ದರೂ ಇದರ ನಿಯಂತ್ರಣ ಸಾಧ್ಯವಾಗಿಲ್ಲ, ಪಶ್ಚಿಮ ಘಟ್ಟ ಮತ್ತು ಇತರೆ ಜೈವಿದ ಉದ್ಯಾನಗಳ ಸುತ್ತಮುತ್ತಲ ಪ್ರದೇಶದಲ್ಲಿ ಸರ್ಕಾರವೇ ಮೈನಿಂಗ್ ಮತ್ತು ಇತರೆ ಕಾರಣಗಳಿಗೆ ಅಲ್ಪ ಪ್ರಮಾಣದ ಸ್ಫೋಟಕಗಳ ಬಳಕೆಗೆ ಅನುಮತಿ ನೀಡಿದೆ. ಆದರೆ ಕೆಲವರು ಇದರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಪ್ರಾಣಿಗಳ ಜೀವಕ್ಕೆ ಸಂಚಕಾರ ತರುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮಕ್ಕೆ ಮುಂದಾದರೂ ಗ್ರಾಮಸ್ಥರು ಮಾತ್ರ ಈ ಮೀಟ್ ಬಾಂಬ್ ತಯಾರಕರ ಕುರಿತು ಮಾಹಿತಿ ನೀಡುತ್ತಿಲ್ಲ. ಅಲ್ಲದೆ ಮೀಟ್ ಬಾಂಬ್ ತಯಾರಿಕೆಗೆ ಬೇಕಾಗುವ ಸ್ಫೋಟಕಗಳು ಬ್ಲಾಕ್ ಮಾರ್ಕೆಟ್ ನಲ್ಲಿ ಅನಾಯಾಸವಾಗಿ ದೊರೆಯುತ್ತಿದೆ. ಕಳ್ಳ ಮಾರ್ಗದಲ್ಲಿ ಈ ಸ್ಫೋಟಕಗಳನ್ನು ಮಾರಾಟ ಮಾಡಲಾಗುತ್ತಿದೆ.  ಇದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com