ಬಾಗಲಕೋಟೆ: ಬ್ಯಾಂಕ್‌ ನಿರ್ದೇಶಕ ಮಂಡಳಿ ಚುನಾವಣೆಗೆ ಜಿಲ್ಲಾ ಸಹಕಾರಿ ಅಖಾಡ ಸಜ್ಜು!

ಸಹಕಾರಿ ರಂಗದ ದೊಡ್ಡಣ್ಣನೆಂದೇ ಹೆಸರಾಗಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಚುನಾವಣೆಗೆ ಅಖಾಡ ಸಜ್ಜಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಚುನಾವಣೆ ನಡೆಸಲು ಇದೀಗ ಹಸಿರು ನಿಶಾನೆ ಸಿಕ್ಕಿದೆ.
ಬಾಗಲಕೋಟೆ ಡಿಸಿಸಿ ಬ್ಯಾಂಕ್
ಬಾಗಲಕೋಟೆ ಡಿಸಿಸಿ ಬ್ಯಾಂಕ್

ಬಾಗಲಕೋಟೆ: ಸಹಕಾರಿ ರಂಗದ ದೊಡ್ಡಣ್ಣನೆಂದೇ ಹೆಸರಾಗಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಚುನಾವಣೆಗೆ ಅಖಾಡ ಸಜ್ಜಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಚುನಾವಣೆ ನಡೆಸಲು ಇದೀಗ ಹಸಿರು ನಿಶಾನೆ ಸಿಕ್ಕಿದೆ.

ಚುನಾವಣೆಗಳು ಮುಂದೂಡಲ್ಪಟ್ಟ ಬಳಿಕ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದವರೆಲ್ಲ ಮೌನಕ್ಕೆ ಶರಣಾಗಿದ್ದರು. ಇದೀಗ ಅವರೆಲ್ಲ ಮೈಕೊಡವಿಕೊಂಡು ಎದ್ದಿದ್ದಾರೆ. ಚುನಾವಣೆ ಎದುರಿಸಲು ಆಪ್ತರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ.

ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಎದುರಿಸುವುದು ಮಿನಿ ಮಹಾಯುದ್ದವನ್ನು ಎದುರಿಸಿದಂತೆ ಎನ್ನುವ ಮಾತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ರಾಜ್ಯ ರಾಜಕಾರಣದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಇದೊಂದ ಅಡಿಪಾಯವೆಂದು ಬಣ್ಣಿಸಲಾಗುತ್ತಿದೆ. ಹಾಗಾಗಿ ಈ ಚುನಾವಣೆಯಲ್ಲಿ ಘಟಾನುಘಟಿ ರಾಜಕಾರಣಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ.

ಸಚಿವರು, ಪ್ರತಿಪಕ್ಷ ನಾಯಕರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಜಿಲ್ಲೆಯ ಸಹಕಾರಿ ರಂಗದಲ್ಲಿನ ಪ್ರಭಾವಿಗಳೆಲ್ಲ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ, ಮಾಜಿ ಸಚಿವ ಹಾಗೂ ಡಿಸಿಸಿ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಅಜಯಕುಮಾರ ಸರನಾಯಕ, ಮೇಲ್ಮನೆ ಸದಸ್ಯ ಎಚ್.ಆರ್. ನಿರಾಣಿ, ಮಾಜಿ ಸಚಿವರಾದ ಎಚ್.ವೈ. ಮೇಟಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ನವಲಿಹಿರೇಮಠ ಸೇರಿದಂತೆ ಸಹಕಾರಿ ರಂಗದಲ್ಲಿನ ದಿಗ್ಗಜರೆಲ್ಲ ಅಖಾಡಕ್ಕೆ ಇಳಿಯಲು ತಯಾರಾಗಿರುವುದರಿಂದ ಈ ಬಾರಿಯ ಚುನಾವಣೆ ಕಣ ಎಂದಿಗಿಂತ ರಂಗೇರಲಿದೆ.

ಸಹಕಾರಿ ರಂಗ ಪಕ್ಷಾತೀತವಾಗಿದ್ದರೂ ಪಕ್ಷ ರಾಜಕಾರಣದ ವಾಸನೆ ಇದ್ದೆ ಇರುತ್ತದೆ. ಪ್ರಮುಖ ರಾಜಕೀಯ ಪಕ್ಷಗಳ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಕಳೆದ ಬಾರಿ ಕೈ ತಪ್ಪಿದ್ದ ಡಿಸಿಸಿ ಬ್ಯಾಂಕ್‌ನ್ನು ಶತಾಯ–ಗತಾಯ ತನ್ನ ಕೈವಶ ಮಾಡಿಕೊಳ್ಳಲು ಬಿಜೆಪಿ ತಂತ್ರಗಳನ್ನು ಹೆಣೆಯುತ್ತಿದೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಪಕ್ಷ ರಾಜಕಾರಣ ಮೀರಿ ಜಾತಿ ರಾಜಕಾರಣ ಕೆಲಸ ಮಾಡಲಿದೆ ಎನ್ನುವ ಅಂದಾಜಿದ್ದು, ಜಾತಿ ರಾಜಕಾರಣ ಅದರಲ್ಲಿ ಒಳಜಾತಿ ರಾಜಕಾರಣ ಅಟ್ಟಹಾಸ ಮೆರೆಯಲಿದೆ.

ಡಿಸಿಸಿ ನಿರ್ದೇಶಕ ಮಂಡಳಿಗೆ ಚುನಾವಣೆ ದಿನಾಂಕ ನಿಗದಿ ಸೇರಿದಂತೆ ಇತರ ಪ್ರಮುಖ ವಿಷಯಗಳ ಕುರಿತು ಶನಿವಾರ ನಿರ್ದೇಶಕ ಮಂಡಳಿ ಮಹತ್ವದ ಸಭೆ ಸೇರಲಿದೆ. ಈ ಸಭೆಯಲ್ಲಿ ಚುನಾವಣೆ ದಿನಾಂಕ ನಿರ್ದಾರವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com