ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಡಾ. ಯು.ಬಿ.ರಾಜಲಕ್ಷ್ಮೀ ಆಯ್ಕೆ

ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟಗೊಂಡಿದ್ದು, 2020ನೇ ಸಾಲಿನ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಡಾ. ಯು.ಬಿ ರಾಜಲಕ್ಷ್ಮೀ ಆಯ್ಕೆಯಾಗಿದ್ದಾರೆ.
ಡಾ. ಯು.ಬಿ ರಾಜಲಕ್ಷ್ಮೀ
ಡಾ. ಯು.ಬಿ ರಾಜಲಕ್ಷ್ಮೀ

ಬೆಂಗಳೂರು: ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟಗೊಂಡಿದ್ದು, 2020ನೇ ಸಾಲಿನ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಡಾ. ಯು.ಬಿ ರಾಜಲಕ್ಷ್ಮೀ ಆಯ್ಕೆಯಾಗಿದ್ದಾರೆ.

ಡಾ. ಯು. ಬಿ. ರಾಜಲಕ್ಷ್ಮೀ ಕನ್ನಡದ ವಾರಪತ್ರಿಕೆ ‘ತರಂಗ’ದ ಸಂಪಾದಕಿಯಾಗಿದ್ದು, ಅವರು ಉಡುಪಿ ಜಿಲ್ಲೆಯ ಕಾರ್ಕಳ ಮೂಲದವರು. ಕಳೆದ 37 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸಕ್ರಿಯರಾಗಿರುವ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಪತ್ರಕರ್ತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

‘ಹೊಸ ದಿಗಂತ’, ‘ಮುಂಗಾರು’, ‘ಟೈಮ್ಸ್ ಆಫ್ ಡೆಕ್ಕನ್’ ದಿನಪತ್ರಿಕೆಗಳಲ್ಲಿ 1983ರಲ್ಲಿ ಕಾರ್ಕಳದ ವರದಿಗಾರ್ತಿಯಾಗಿದ್ದರು. 1987 ರಲ್ಲಿ ‘ಮಣಿಪಾಲ ಮೀಡಿಯಾ ನೆಟ್‌ವರ್ಕ್’ನ ‘ತರಂಗ’ ವಾರಪತ್ರಿಕೆಯಲ್ಲಿ ಸೇವೆ ಆರಂಭಿಸಿ, ತಮ್ಮ ಕಾರ್ಯಕ್ಷಮತೆಯಿಂದ ಕಾರ್ಯನಿರ್ವಾಹಕ ಸಂಪಾದಕಿಯಾಗಿ, ಪ್ರಸ್ತುತ ಸಂಪಾದಕಿಯಾಗಿದ್ದಾರೆ. 

2012-15ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯೆಯಾಗಿದ್ದ ಅವರ ಪತ್ರಿಕಾ ರಂಗದ ಸಾಧನೆಗಾಗಿ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಡಾ. ಪಾಟೀಲ ಪುಟ್ಟಪ್ಪ ಪುರಸ್ಕಾರ, ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಶ್ರೀ ಎಸ್.ಎಫ್.ಉಪ್ಪಿನ ಐಎಸ್‌ಎಫ್‌ ಪ್ರಶಸ್ತಿ , ಮಂತ್ರಾಲಯ ಕ್ಷೇತ್ರದ ‘ಶ್ರೀ ಸುಜಯಶ್ರೀ’ ಮುಂತಾದ ಪ್ರಶಸ್ತಿಗಳು ಒಲಿದು ಬಂದಿವೆ. 

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ. ಪದವೀಧರೆ. ಪತ್ರಿಕೋದ್ಯಮದಲ್ಲಿ ಮತ್ತು ಕಮರ್ಶಿಯಲ್ ಪ್ರಾಕ್ಟೀಸ್‌ನಲ್ಲಿ ಡಿಪ್ಲೊಮಾ ಪಡೆದಿರುವ ಅವರ ಸಂಶೋಧನಾ ಮಹಾಪ್ರಬಂಧ ‘ಕನ್ನಡದ ಆಯ್ದ ವಾರಪತ್ರಿಕೆಗಳಲ್ಲಿ ನುಡಿಚಿತ್ರ - ಒಂದು ಗುಣಾತ್ಮಕ ಅಧ್ಯಯನ’ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯ 2013ರಲ್ಲಿ ‘ಡಾಕ್ಟರ್ ಆಫ್ ಲಿಟರೇಚರ್’ ಪದವಿ ನೀಡಿ ಗೌರವಿಸಿದೆ. ಪತ್ರಿಕೋದ್ಯಮದಲ್ಲಿ ಕನ್ನಡ ವಿ.ವಿಯ ಮೊದಲ ಡಾಕ್ಟರೇಟ್ ಪಡೆದ ಪತ್ರಕರ್ತೆ ಅವರು.

ಪ್ರವಾಸ, ಕೃಷಿ, ವೈದ್ಯವಿಜ್ಞಾನ, ಉದ್ಯಮ, ಶಿಕ್ಷಣ, ರಾಜಕಾರಣ, ಇತಿಹಾಸ, ಆರೋಗ್ಯ, ಕಲೆ, ಸಿನಿಮಾ, ವ್ಯಕ್ತಿ ಪರಿಚಯ ಮತ್ತು ಮಾನವಾಸಕ್ತಿಯ ಅವರ ವೈವಿಧ್ಯಮಯ ಲೇಖನಗಳನ್ನೊಳಗೊಂಡ ‘ನೂಪುರ’, ‘ಶಂಖನಾದ’ ; ‘ಹಿರಿಯ ಸಾಹಿತಿ ಕೊರಡ್ಕಲ್ ಶ್ರೀನಿವಾಸ ರಾವ್’, ‘ಉಡುಪಿ ಅಡುಗೆ’ (ಕನ್ನಡ– ಇಂಗ್ಲಿಷ್ - ಬ್ರೈಲ್‌ಲಿಪಿ) ಅವರ ಪ್ರಕಟಿತ ಕೃತಿಗಳು. 

ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯಗಳಲ್ಲಿ ಪರಿಣಿತಿ ಹೊಂದಿದ್ದಾರೆ. ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ‘ದೇವಣಿ’ - ನೈಸರ್ಗಿಕ ಆಕಳ ಕೃಷಿ, ‘ಪರಿಸರ ಸಂರಕ್ಷಣೆಯಲ್ಲಿ ಎರೆಹುಳು ಗೊಬ್ಬರದ ಪಾತ್ರ’, ಬಿಜಾಪುರದ ‘ಗೋಲ್ ಗುಂಬಜ್’ ಮತ್ತು ‘ಇಬ್ರಾಹಿಂ ರೋಜಾ’ ಮುಂತಾದ ಸಾಕ್ಷ್ಯ ಚಿತ್ರಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ.
ಮಲೇಶ್ಯಾ ಸರಕಾರದ ಪ್ರವಾಸೋದ್ಯಮ ಇಲಾಖೆಯ ಆಹ್ವಾನದ ಮೇರೆಗೆ 2005 ರಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ವಿಳಂಬವಾಗಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com