ಮಹಾರಾಷ್ಟ್ರದಿಂದ ಬಂದವರಿಗೆ ಹೊಸ ಮಾರ್ಗಸೂಚಿ: ರಿಪೋರ್ಟ್ ನೆಗೆಟಿವ್ ಬಂದರೂ 21 ದಿನ ಕ್ವಾರಂಟೈನ್ ಕಡ್ಡಾಯ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇದೀಗ ರಾಜ್ಯಕ್ಕೆ ಮಹಾರಾಷ್ಟ್ರದಿಂದ ಬರುತ್ತಿರುವ ಸೋಂಕು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆಗೊಳಿಸಿದ್ದು, ಇನ್ನು ಮುಂದೆ ಆ ರಾಜ್ಯದಿಂದ ಬಂದ ಪ್ರತೀಯೊಬ್ಬರಿಗೂ 21 ದಿನಗಳ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇದೀಗ ರಾಜ್ಯಕ್ಕೆ ಮಹಾರಾಷ್ಟ್ರದಿಂದ ಬರುತ್ತಿರುವ ಸೋಂಕು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆಗೊಳಿಸಿದ್ದು, ಇನ್ನು ಮುಂದೆ ಆ ರಾಜ್ಯದಿಂದ ಬಂದ ಪ್ರತೀಯೊಬ್ಬರಿಗೂ 21 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಿದೆ. 

ಗುರುವಾರವಷ್ಟೇ ಕೊರೋನಾ ತಜ್ಞರ ತಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ವೈದ್ಯಕೀಯ ಪರೀಕ್ಷೆ ಕುರಿತು ಹೊಸ ತಂತ್ರಗಳ ಕುರಿತು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ಪರೀಕ್ಷಾ ತಂತ್ರಗಳಲ್ಲಿ ಕೆಲ ಸೂಕ್ಷ್ಮಕರ ವಿಚಾರಗಳಿರುತ್ತವೆ. ಅಪಾಯಕಾರಿ ರಾಜ್ಯಗಳಿಂದ ಬರುವವರ ಕ್ವಾರಂಟೈನ್ ನಿಯಮವನ್ನು ಬದಲಿಸುವ ಅಗತ್ಯವಿದೆ. ಈ ಕುರಿತು ಮುಖ್ಯಮಂತ್ರಿಗಳೇ ವಿವರವಾದ ಮಾಹಿತಿಗಳನ್ನು ನೀಡಲಿದ್ದಾರೆಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಈ ನಡುವೆ ರಾಜ್ಯ ಆರೋಗ್ಯ ಇಲಾಖೆ ಮಹಾರಾಷ್ಟ್ರದಿಂದ ಬಂದವರಿಗೆಂದೇ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಕೊರೋನಾ ವೈರಸ್ ವೈದ್ಯಕೀಯ ವರದಿ ತಂದಿದ್ದು, ಆ ವರದಿಯಲ್ಲಿ ಕೊರೋನಾ ಇಲ್ಲ ಎಂದು ದೃಢೀಕರಿಸಿದ್ದರೂ ಕೂಡ ಮಹಾರಾಷ್ಟ್ರದಿಂದ ಬಂದವರಿಗೆ 21 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಲಾಗುತ್ತದೆ ಎಂದು ತಿಳಿಸಿದೆ. 

ಕ್ವಾರಂಟೈನ್ ಕುರಿತ ಮಾರ್ಗಸೂಚಿಯನ್ನು ಬದಲಿಸಲಾಗಿದೆ. ಈ ಕುರಿತು ಶೀಘ್ರದಲ್ಲಿಯೇ ಮಾಹಿತಿ ನೀಡಲಿದ್ದೇವೆ. ಮಹಾರಾಷ್ಟ್ರದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ ನಾವು ಸಾಕಷ್ಟು ಪರೀಕ್ಷೆಗಳನ್ನು ಮಾಡುತ್ತಲೇ ಇದ್ದೇವೆ. ಮಹಾರಾಷ್ಟ್ರ ಪರೀಕ್ಷೆಯನ್ನು ಉತ್ತಮವಾಗಿ ನಡೆಸದೇ ಇರುವುದು ದುರಾದೃಷ್ಟಕರ ಸಂಗತಿ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com