ನಿರಾಣಿ ಷುಗರ್ಸ್ ತೆಕ್ಕೆಗೆ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ; 40 ವರ್ಷಗಳವರೆಗೆ ಟೆಂಡರ್

ಪಾಂಡವಪುರ ಮತ್ತು ಶ್ರೀರಂಗಪಟ್ಟಣ ವ್ಯಾಪ್ತಿಯ ರೈತರ ಜೀವನಾಡಿಯಾದ ಪಾಂಡವಪುರ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ನಿರಾಣಿ ಷುಗರ್ಸ್ 40 ವರ್ಷಗಳ ಗುತ್ತಿಗೆ ಪಡೆದಿದೆ.
ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ
ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ

ಮಂಡ್ಯ: ಪಾಂಡವಪುರ ಮತ್ತು ಶ್ರೀರಂಗಪಟ್ಟಣ ವ್ಯಾಪ್ತಿಯ ರೈತರ ಜೀವನಾಡಿಯಾದ ಪಾಂಡವಪುರ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ನಿರಾಣಿ ಷುಗರ್ಸ್ 40 ವರ್ಷಗಳ ಗುತ್ತಿಗೆ ಪಡೆದಿದೆ.

ನಿರೀಕ್ಷೆಯಂತೆಯೇ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ವ್ಯಾಪ್ತಿಯ ರೈತರ ಜೀವನಾಡಿಯಾದ ಪಾಂಡವಪುರ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಗುತ್ತಿಗೆ ನೀಡಲಾಗಿದ್ದು, ಕಾರ್ಖಾನೆಯನ್ನು ಗುತ್ತಿಗೆ ನೀಡುವ ಕುರಿತು ನಡೆದ ಟೆಂಡರ್‌ನಲ್ಲಿ ಮಾಜಿ ಸಚಿವ ಮುರುಗೇಶ್‌ನಿರಾಣಿ ಮಾಲೀಕತ್ವದ ನಿರಾಣಿ ಷುಗರ್ಸ್ ೪೦ ವರ್ಷಗಳ ಕಾಲ ಗುತ್ತಿಗೆಗೆ ಪಡೆದಿದೆ. ಪಾಂಡವಪುರದಲ್ಲಿರುವ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ರಾಜ್ಯದ ಸಹಕಾರಿ ಕ್ಷೇತ್ರದ ಏಕೈಕ ಕಾರ್ಖಾನೆಯಾಗಿ ಹೆಸರಾಗಿತ್ತು. ಆದರೆ, ಕಳೆದ ನಾಲ್ಕೈದು ವರ್ಷಗಳ ಹಿಂದೆ ನಷ್ಟದ ಸುಳಿಗೆ ಸಿಲುಕಿದ್ದ ಕಾರಣ ನೀಡಿ ಈ ಕಾರ್ಖಾನೆಯನ್ನು ಮುಚ್ಚಲಾಗಿತ್ತು. ಇದೀಗ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಮುಂದಾಗಿರುವ ಸರ್ಕಾರ ಪುನಶ್ಚೇತನದ ಹೆಸರಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಮಾಲೀಕತ್ವದ ನಿರಾಣಿ ಷುಗರ್ಸ್ ಗೆ 40 ವರ್ಷಗಳ ಕಾಲ ಗುತ್ತಿಗೆಗೆ ನೀಡಿದೆ.

ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕಿ ಭಾಗದ ಕಬ್ಬು ಬೆಳೆಗಾರ ರೈತರಿಗೆ ಪಾಲಿಗೆ ಒಂದು ಕಾಲದಲ್ಲಿ ಈ ಕಾರ್ಖಾನೆ ಜೀವನಾಡಿಯಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಇಲ್ಲದ ಕಾರಣ ನಷ್ಟಕ್ಕೊಳಗಾಗಿ ಮುಚ್ಚಲಾಗಿತ್ತು. ಪರಿಣಾಮ ಈ ಭಾಗದ ಕಬ್ಬು ಬೆಳೆಗಾರ ರೈತರು ತಮ್ಮ ಕಬ್ಬು ಸಾಗಿಸಲಾಗದೆ ಪ್ರತಿವರ್ಷ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಪಿಎಸ್‌ಎಸ್‌ಕೆ ಕಾರ್ಖಾನೆ ವ್ಯಾಪ್ತಿಯಲ್ಲಿ  ಸುಮಾರು 4 ಲಕ್ಷ ಹೆಕ್ಟೇ ರ್ ಭೂಮಿಯಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದರು.ಆದರೆ, ಕಳೆದ ನಾಲ್ಕೈದು ಸಕ್ಕರೆ ಕಾರ್ಖಾನೆ ಮುಚ್ಚಲ್ಪಟ್ಟಿದ್ದರಿಂದ ರೈತರು ಬೇರೆ ವಿಧಿ ಇಲ್ಲದೆ ತಾವು ಬೆಳೆದ ಕಬ್ಬನ್ನು ಬೇರೆ ಬೇರೆ ಕಾರ್ಖಾನೆಗೆ ಸಾಗಿಸಲು ಪರದಾಡಿ ನಷ್ಟ ಅನುಭವಿಸುತ್ತಿದ್ದರು. ಹೀಗಾಗಿ ಈ ಕಾರ್ಖಾನೆಯ ಅಭಿವೃದ್ದಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ, ವಿಶೇಷ ಪ್ಯಾಕೇಜ್ ಘೋಷಣೆಗೆ ಮುಂದಾಗದ ಸರ್ಕಾರ ಇದೀಗ ಈ ಕಾರ್ಖಾನೆಯನ್ನೇ ಖಾಸಗಿ ವಲಯಕ್ಕೆ 40 ವರ್ಷಗಳ ಕಾಲ ಗುತ್ತಿಗೆ ನೀಡಿದೆ. 

2006 ರಲ್ಲಿಯೂ ಕೂಡ ಪಿಎಸ್‌ಎಸ್‌ಕೆಯನ್ನು 7 ವರ್ಷಗಳ ಕಾಲ ಕೊಠಾರಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು ಆದರೆ ನಷ್ಠದ ನೆಪ ಹೇಳಿ ಕೇವಲ ಮೂರೇ ವರ್ಷಕ್ಕೆ ಅಂದರೆ 2009ಕ್ಕೆ ಕಾರ್ಖಾನೆಯನ್ನ ಸ್ಥಗಿತಗೊಳಿಸಿ ಆ ಸಂಸ್ಥೆ ಕೈ ತೊಳೆದುಕೊಂಡಿತ್ತು, ಇದಾದ ಬಳಿಕ 2010 ರಲ್ಲಿ ಸರ್ಕಾರವೇ ಮೈಷುಗರ್ ಆಡಳಿತ ಮಂಡಳಿಯೊಂದಿಗೆ ವಿಲೀನ ಗೊಳಿಸುವ ಮೂಲಕ ಅಂದಿನ ಮೈಷುಗರ್ ಅಧ್ಯಕ್ಷ ನಾಗರಾಜಪ್ಪ ಅವರ ಕೈಗೆ ವಹಿಸುವ ಮೂಲಕ ಕಾರ್ಖಾನೆಯನ್ನು ಪುನಃ ಪ್ರಾರಂಭಿಸಲಾಗಿತ್ತು,ಸುಮಾರು 3 ವರ್ಷಗಳವರೆಗೆ ನಡೆದ ಕಾರ್ಖಾನೆಯನ್ನು ಮತ್ತೆ  ಬಳಿಕ ಸಹಕಾರಿ ಭಾಗಿತ್ವದಲ್ಲಿಯೇ ಕಾರ್ಖಾನೆ ನಡೆಯುವಂತೆ ಮಾಡಲಾಗಿತ್ತು. ಆದರೆ 2014 ರಿಂದ 2017ರವರೆಗೆ ನಡೆದ ಕಾರ್ಖಾನೆಯನ್ನು ನಡೆಸಿದ ಪಿಎಸ್‌ಎಸ್‌ಕೆ ಆಡಳಿತಮಂಡಳಿ ಸಮರ್ಪಕವಾಗಿ ನಿರ್ವಹಿಸದೆ ನಷ್ಠದ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ರೋಗಗ್ರಸ್ಥ ಕಾರ್ಖಾನೆಯಾಗಿ ನಿಂತಿದ್ದ ಕಾರ್ಖಾನೆಯನ್ನು ಇದೀಗ ರಾಜ್ಯ ಸರ್ಕಾರ ಖಾಸಗಿಗೆ ವಹಿಸಿದೆ.

ಗುತ್ತಿಗೆ ಹಿಂದಿದೆಯಾ ರಾಜಕೀಯ ಲೆಕ್ಕಾಚಾರ:
ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಇಷ್ಟು ದೀರ್ಘ ಅವಧಿಗೆ ಗುತ್ತಿಗೆ ನೀಡಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎನ್ನಲಾಗುತ್ತಿದೆ. ಮುರುಗೇಶ್ ನಿರಾಣಿ ಬಿಜೆಪಿ ಪಕ್ಷದ ಪ್ರಬಲ ಲಿಂಗಾಯತ ನಾಯಕ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಯೂ ಹೌದು. ಆದರೆ, ಅವರಿಗೆ ಸಚಿವ ಸ್ಥಾನ ನೀಡದಿರುವ ಕಾರಣ ಅವರು ಸಿಎಂ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಒಂದು ಕಾಲದ ಸಿ.ಎಂ ಆಪ್ತರಾಗಿದ್ದ ಮಾಜಿ ಸಚಿವ  ಮುರುಗೇಶ್ ನಿರಾಣಿಯ ಬಂಡಾಯ ಶಮನ ಮಾಡುವ ಉದ್ದೇಶದಿಂದಾಗಿ ಖುದ್ದು ಸಿಎಂ ಬಿ.ಎಸ್. ಯಡಿಯೂರಪ್ಪ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು 40 ವರ್ಷಗಳ ದೀರ್ಘ ಅವಧಿಗೆ ಗುತ್ತಿಗೆಗೆ ನೀಡಿದ್ದಾರೆ ಎಂಬ ಮಾತುಗಳು ರಾಜಕೀಯವಲಯದಲ್ಲಿ ಕೇಳಿ ಬರುತ್ತಿದೆ.

ಸ್ಥಗಿತ ಗೊಂಡಿದ್ದ  ಮಂಡ್ಯ  ಮೈಶುಗರ್  ಮೇಲೆ ಕಣ್ಣಿಟ್ಟಿದ್ದ ನಿರಾಣಿಗೆ ಮೈಶುಗರ್ ಕೈತಪ್ಪಿದ್ದರಿಂದ ಅದರ ಬದಲು  ಪಿಎಸ್‌ಎಸ್‌ಕೆಯನ್ನು ಗುತ್ತಿಗೆ ನೀಡುವ ಮೂಲಕ ಬಂಡಾಯ ಶಮನ ಮಾಡಲಾಗಿದೆ. ಒಟ್ಟಿನಲ್ಲಿ ಬಿಜೆಪಿ ಬಂಡಾಯ ಶಮನ ಮಾಡುವುದಕ್ಕಾಗಿ ಸಹಕಾರಿ ಕ್ಷೇತ್ರದ ಏಕೈಕ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ ಗೆ ಧಾರೆ ಎರೆಯಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ಈಗಾಗಲೇ ಶುರುವಾಗಿದೆ. ಆದರೆ, ಸರ್ಕಾರ ಮಾತ್ರ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಖುಷಿಯಲ್ಲಿದೆ. ಮಾದ್ಯಮದವರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್,ಟೆಂಡರ್‌ನಲ್ಲಿ ನಿರಾಣಿ ಷುಗರ್ಸ್ ಸಂಸ್ಥೆ ಅತೀ ಹೆಚ್ಚು ಬಿಡ್‌ಗೆ ಖರೀದಿಸಿರುವುದರಿಂದ ಪಿಎಸ್‌ಎಸ್‌ಕೆಯನ್ನು ನಿರಾಣಿಯವರ ಮಾಲೀಕತ್ವಕ್ಕೆ  ವಹಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿಯೇ ಕಾರ್ಖಾನೆಯನ್ನು ಆರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com