ಲಾಕ್ ಡೌನ್ ಎಫೆಕ್ಟ್: ತೀವ್ರ ಸಂಕಷ್ಟದಲ್ಲಿ ರಾಮನಗರದ ರೇಷ್ಮೆ ಬೆಳೆಗಾರರು ಮತ್ತು ನೇಕಾರರು

ಕಂಚಿ, ಧರ್ಮಾವರಂ, ಬನಾರಸ್ ಸೀರೆಗಳು, ಕರ್ನಾಟಕದ ಇಳ್ಕಲ್, ಮೊಳಕಾಲ್ಮೂರು, ಮೈಸೂರು ಸಿಲ್ಕ್ ಸೀರೆಗಳಿಗೆ ರೇಷ್ಮೆ ಪೂರೈಕೆಯಾಗುವುದು ಇಲ್ಲಿಂದಲೇ. ಇಲ್ಲಿನ ರೇಷ್ಮೆಯ ದಾರದಿಂದ ತೆಗೆದ ನೂಲಿನಿಂದ ಸುಂದರವಾದ ಸೀರೆಗಳು ಲೆಕ್ಕವಿಲ್ಲದಷ್ಟು ಉತ್ಪಾದನೆಯಾಗುತ್ತವೆ.
ತೀವ್ರ ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರರು ಮತ್ತು ನೇಕಾರ ಕುಟುಂಬ
ತೀವ್ರ ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರರು ಮತ್ತು ನೇಕಾರ ಕುಟುಂಬ

ರಾಮನಗರ: ಕಂಚಿ, ಧರ್ಮಾವರಂ, ಬನಾರಸ್ ಸೀರೆಗಳು, ಕರ್ನಾಟಕದ ಇಳ್ಕಲ್, ಮೊಳಕಾಲ್ಮೂರು, ಮೈಸೂರು ಸಿಲ್ಕ್ ಸೀರೆಗಳಿಗೆ ರೇಷ್ಮೆ ಪೂರೈಕೆಯಾಗುವುದು ಇಲ್ಲಿಂದಲೇ. ಇಲ್ಲಿನ ರೇಷ್ಮೆಯ ದಾರದಿಂದ ತೆಗೆದ ನೂಲಿನಿಂದ ಸುಂದರವಾದ ಸೀರೆಗಳು ಲೆಕ್ಕವಿಲ್ಲದಷ್ಟು ಉತ್ಪಾದನೆಯಾಗುತ್ತವೆ.

ಆದರೆ ಈ ವರ್ಷ ಲಾಕ್ ಡೌನ್ ನಿಂದಾಗಿ ರಾಮನಗರ ಮತ್ತು ಸುತ್ತಮುತ್ತಲ ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ. ರೈತರು ರೇಷ್ಮೆ ಹುಳು ಮೊಟ್ಟೆಗಳಿಗೆ ದುಪ್ಪಟ್ಟು ಹಣ ಕೊಟ್ಟು ಖರೀದಿಸಬೇಕಾದ ಪರಿಸ್ಥಿತಿಯಿದ್ದರೆ ಅವರ ರೇಷ್ಮೆ ಗೂಡುಗಳಿಗೆ ಅರ್ಧದಷ್ಟು ಬೆಲೆ ಮಾತ್ರ ಸಿಗುತ್ತಿದೆ.

ರಾಮನಗರ ಏಷ್ಯಾದಲ್ಲಿಯೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆಗಳಲ್ಲಿ ಒಂದು. ಇಲ್ಲಿ ಸಾವಿರಾರು ರೇಷ್ಮೆ ಬೆಳೆಗಾರರು ಮತ್ತು ರೇಷ್ಮೆ ನೇಕಾರರು ಮಾರುಕಟ್ಟೆಗೆ ಭೇಟಿ ನೀಡುತ್ತಿರುತ್ತಾರೆ. ಪ್ರತಿದಿನ 40 ಸಾವಿರದಿಂದ 50 ಸಾವಿರ ಕೆಜಿ ರೇಷ್ಮೆಗೂಡು ಹರಾಜಾಗುತ್ತಿರುತ್ತದೆ. ಮಂಡ್ಯ, ಚಿತ್ರದುರ್ಗ, ಹಾವೇರಿ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಭಾಗಗಳ ರೈತರು, ನೆರೆ ರಾಜ್ಯಗಳಾದ ತಮಿಳು ನಾಡು ಮತ್ತು ಆಂಧ್ರ ಪ್ರದೇಶಗಳಿಂದಲೂ ಬರುತ್ತಾರೆ.

ಆದರೆ ಲಾಕ್ ಡೌನ್ ನಂತರ ರೇಷ್ಮೆ ನೇಯ್ಗೆಗಾರರು ಘಟಕಗಳನ್ನು ಮುಚ್ಚಿದ್ದಾರೆ. ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಇಲ್ಲದಂತಾಗಿದೆ. ನೇಯ್ಗೆಗಾರರು ಕೂಡ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೇಷ್ಮೆ ಗೂಡುಗಳ ಬೆಲೆ ಕುಸಿದಿದೆ. ಇಡೀ ರೇಷ್ಮೆ ಬೆಳೆಗಾರ ಸಮುದಾಯಕ್ಕೆ ಕಷ್ಟ ಎದುರಾಗಿದೆ.

ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ರೇಷ್ಮೆ ಬೆಳೆ ರೈತ ಅರುಣ್ ಕುಮಾರ್, 25 ದಿನಗಳಿಗೊಮ್ಮೆ 100 ಕೆಜಿ ರೇಷ್ಮೆ ಗೂಡುಗಳು ಸಿಗುತ್ತವೆ, ಅಷ್ಟು ಸಿಗಲು ಸುಮಾರು 30 ಸಾವಿರ ರೂಪಾಯಿ ಖರ್ಚು ಮಾಡಬೇಕು. ಈ ಹಿಂದೆ ರೇಷ್ಮೆ ಗೂಡುಗಳನ್ನು ಕೆಜಿಗೆ 500 ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು. ಆದರೆ ಈಗ 250 ರೂಪಾಯಿಗೆ ಇಳಿದಿದೆ. ಸಾಗಣೆ ಮತ್ತು ಇತರ ವೆಚ್ಚ ಸೇರಿ ನನಗೆ 3 ಸಾವಿರ ರೂಪಾಯಿ ಸಿಗುತ್ತದೆ. ಹಸುಗಳನ್ನು ಸಾಕುವುದರಿಂದ ಹೇಗೋ ಜೀವನ ನಿರ್ವಹಣೆಯಾಗುತ್ತದೆ ಎನ್ನುತ್ತಾರೆ.

ರಾಜ್ಯ ಸರ್ಕಾರ ಹೂವು, ಹಣ್ಣು, ತರಕಾರಿ ಬೆಳೆಗಾರರ ರಕ್ಷಣೆಗೆ ಬಂದಂತೆ ರೇಷ್ಮೆ ಬೆಳೆಗಾರರಿಗೆ ಇದುವರೆಗೆ ಯಾವುದೇ ಸಹಾಯಕ್ಕೆ ಬಂದಿಲ್ಲ. ದೂರದ ರಾಣೆಬೆನ್ನೂರಿನಿಂದ ಬಂದಿರುವ ರೈತ ಹನುಮಂತಪ್ಪ 100 ಮೊಟ್ಟೆಗಳಿಂದ 80 ಕೆಜಿ ರೇಷ್ಮೆ ಗೂಡು ಸಿಗುತ್ತದೆ ಎನ್ನುತ್ತಾರೆ.

ರೇಷ್ಮೆ ನೂಲು ನೇಯುವವರು ಸಹ ಸಂಕಷ್ಟಕ್ಕೀಡಾಗಿದ್ದಾರೆ. ನೇಯ್ಗೆ ಘಟಕ ಸ್ಥಗಿತಗೊಂಡಿದ್ದು ಚಿಲ್ಲರೆ ಘಟಕಗಳು ಸಹ ತೆರೆದಿಲ್ಲ ಎನ್ನುತ್ತಾರೆ ರೇಷ್ಮೆ ನೇಯ್ಗೆಗಾರ ಮೊಹಮ್ಮದ್ ಶಫಿ ಅಹ್ಮದ್. ತಿಂಗಳಿಗೆ ನಾವು 20 ಕೆಜಿ ರೇಷ್ಮೆ ನೂಲು ತೆಗೆಯುತ್ತೇವೆ. ಕೆಜಿಗೆ 3,500ರಿಂದ 4 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತೇವೆ. ಆದರೆ ಈಗ ಬೆಲೆ 1,900ರಿಂದ 2,400 ರೂಪಾಯಿಗೆ ಇಳಿಕೆಯಾಗಿದೆ. ನಮಗೆ ಆದಾಯ ಸಿಕ್ಕಿದರೆ ರೈತರಿಗೂ ಕೊಡಬಹುದು ಅಲ್ಲವೇ ಎಂದು ಕೇಳುತ್ತಾರೆ.

ಈ ಹಿಂದೆ ಚೀನಾದ ರೇಷ್ಮೆಯನ್ನು ಜನರು ಬಳಸುತ್ತಿದ್ದರು, ಆದರೆ ಈಗ ಆಮದಿಗೆ ನಿಷೇಧ ಹೇರಿರುವುದರಿಂದ ಮತ್ತು ಗುಣಮಟ್ಟದಲ್ಲಿ ಅದು ಉತ್ತಮವಾಗಿಲ್ಲದಿರುವುದರಿಂದ ರಾಮನಗರ ರೇಷ್ಮೆಗೆ ಮುಂದಿನ ದಿನಗಳಲ್ಲಿ ಉತ್ತಮ ಬೇಡಿಕೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಇಲ್ಲಿನ ರೇಷ್ಮೆ ನೇಯ್ಗೆಗಾರರಿಗೆ ಸರ್ಕಾರ ಸಬ್ಸಿಡಿಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ನೀಡಿದರೆ ರೈತರಿಗೆ ಮತ್ತು ನೇಯ್ಗೆಗಾರರಿಗೆ ಅನುಕೂಲವಾಗುತ್ತದೆ ಎಂಬುದು ಮೊಹಮ್ಮದ್ ಅಹ್ಮದ್ ಅನಿಸಿಕೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com