ಡ್ರೈನೇಜ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರ ಸಾವು, ಓರ್ವ ಗಂಭೀರ

ಡ್ರೈನೇಜ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನ ಚಂದಾಪುರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಡ್ರೈನೇಜ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನ ಚಂದಾಪುರದಲ್ಲಿ ನಡೆದಿದೆ.

ಆನೇಕಲ್ ತಾಲೂಕಿನ ತಿರುಮಗೊಂಡನಹಳ್ಳಿ ಬಳಿಯ ಪಲೋಮಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ನಲ್ಲಿ ನಡೆದಿದ್ದು, ಮೃತರನ್ನು ಜೇಮ್ಸ್(26 ವರ್ಷ) ಮತ್ತು ಆನಂದ(32 ವರ್ಷ) ಎಂದು ಗುರುತಿಸಲಾಗಿದೆ. ಈ ಪೈಕಿ ಜೇಮ್ಸ್ ತಮಿಳುನಾಡಿನ ಹೊಸೂರು ಮೂಲದವನಾಗಿದ್ದು, ಈತ ಸೆಪ್ಟಿಕ್ ಟ್ಯಾಂಕ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಅಂತೆಯೇ ಆನಂದ್ ಆನೇಕಲ್ ತಾಲೂಕಿನ ಮಂಚನಹಳ್ಳಿ ನಿವಾಸಿಯಾಗಿದ್ದು, ಪಲೋಮಾ ಕಂಪನಿಯ ಉದ್ಯೋಗಿ ಎನ್ನಲಾಗಿದೆ. 

ಮೂಲಗಳ ಪ್ರಕಾರ ಇಂದು ಪಲೋಮಾ ಕಂಪನಿಯ ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡಲು ಜೆಟ್ಟಿಂಗ್ ಮಿಷನ್ ತರಿಸಲಾಗಿತ್ತು. ಡ್ರೈನೇಜ್ ಸ್ವಚ್ಛಗೊಳಿಸಲು ಮುಂದಾದಾಗ ಮೂರು ಜನರು ಸೆಪ್ಟಿಕ್ ಟ್ಯಾಂಕಿನಲ್ಲಿ ಬಿದ್ದಿದ್ದಾರೆ. ಚಂದ್ರಶೇಖರ್ ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆನಂದ ಹಾಗೂ ಜೇಮ್ಸ್​ನನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಂಚನಹಳ್ಳಿಯ ಜೇಮ್ಸ್, ಹೊಸೂರಿನ ಆನಂದ ಮೃತಪಟ್ಟಿದ್ದಾರೆ.

ಜೆಟ್ಟಿಂಗ್ ಮಿಷನ್ ಅಪರೇಟರ್ ಜೇಮ್ಸ್ ಜೆಟ್ಟಿಂಗ್ ಮಿಷನ್ ಮೂಲಕ ಬಹುತೇಕ ಸೆಪ್ಟಿಕ್ ಟ್ಯಾಂಕ್ ಸ್ವಚ್ಚಗೊಳಿಸಿದ್ದ. ಆದರೆ ಕೊನೆ ಗಳಿಗೆಯಲ್ಲಿ ಜೆಟ್ಟಿಂಗ್ ಮಿಷನ್ ಟೂಲ್ ಒಂದು ಸೆಪ್ಟಿಕ್ ಟ್ಯಾಂಕ್ ಒಳಗೆ ಬಿದ್ದಿದೆ. ಅದನ್ನು ತರಲು ಸೆಪ್ಟಿಕ್ ಟ್ಯಾಂಕ್ ಒಳಗೆ ಇಳಿದ ಜೇಮ್ಸ್ ಪ್ರಜ್ಞಾಹೀನನಾಗಿದ್ದಾನೆ. ಟ್ಯಾಂಕ್ ಒಳಗೆ ಇಳಿದ ಜೇಮ್ಸ್ ಹೊರ ಬಾರದಿದ್ದಾಗ ಪಲೋಮಾ ಕಂಪನಿ ನೌಕರ ಆನಂದ್ ಕೂಡಾ ಟ್ಯಾಂಕ್ ಒಳಗೆ ಇಳಿದಿದ್ದು, ಹೊರ ಬರಲಾಗದೆ ನೆರವಿಗಾಗಿ ಕೂಗಿಕೊಂಡಿದ್ದಾನೆ. ಇಬ್ಬರನ್ನು ರಕ್ಷಿಸಲು ಹೋದ ಕಂಪನಿ ಎಚ್ ಆರ್ ಸಿಬ್ಬಂದಿ ಚಂದ್ರಶೇಖರ್ ಸಹ ಸೆಪ್ಟಿಕ್ ಟ್ಯಾಂಕ್ ನಲ್ಲಿ ಪ್ರಜ್ಞಾಹೀನನಾಗಿದ್ದಾನೆ.

ಹೀಗೆ ಮೂರು ಮಂದಿ ಸೆಪ್ಟಿಕ್ ಟ್ಯಾಂಕ್‌ನಲ್ಲಿ  ಪ್ರಜ್ಞಾಹೀನಾ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬಗ್ಗೆ ಅಗ್ನಿಶಾಮಕ ದಳಕ್ಕೆ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ನಾಗರಾಜ್ ನೇತೃತ್ವದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳ ಕ್ಷಿಪ್ರ ಗತಿಯಲ್ಲಿ ಮೂರು ಮಂದಿಯನ್ನು ರಕ್ಷಣೆ ಮಾಡಿ ಅಂಬ್ಯುಲೆನ್ಸ್ ಮೂಲಕ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಜೆಟ್ಟಿಂಗ್ ಮಿಷನ್ ಅಪರೇಟರ್ ಜೇಮ್ಸ್ ಹಾಗೂ ಪಲೋಮಾ ಕಂಪನಿ ನೌಕರ ಆನಂದ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಎಚ್ ಆರ್ ಸಿಬ್ಬಂದಿ ಚಂದ್ರಶೇಖರ್‌ಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಘಟನೆ ಸಂಬಂಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com